ಅಂಬಾನಿ ಮಗನ ಮದುವೆಯಲ್ಲಿ ಸುಧಾ ಮೂರ್ತಿ ಧರಿಸಿದ್ದ ಆಭರಣ ಯಾವುದು?
ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವದಲ್ಲಿ ದೇಶ, ವಿದೇಶದ ಗಣ್ಯರು ಭಾಗವಹಿಸಿದ್ದರು. ಬಾಲಿವುಡ್ ತಾರೆಯರು, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು, ರಾಜ್ಯ, ದೇಶ, ವಿದೇಶದ ರಾಜಕೀಯ ಮುಖಂಡರು, ಜಾಗತಿಕ ಉದ್ಯಮಿಗಳು ಹೀಗೆ ಗಣ್ಯಾತಿಗಣ್ಯರು ಅದರಲ್ಲಿ ಉಪಸ್ಥಿತಿಯನ್ನು ತೋರಿಸಿದ್ದರು. ಅಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದೆಂದರೆ ಅನೇಕರಿಗೆ ದೊಡ್ಡ ಹೆಮ್ಮೆಯ ವಿಷಯ. ಒಮ್ಮೆ ಆಹ್ವಾನ ಸಿಕ್ಕಿದರೆ ಯಾರೂ ಅದನ್ನು ಮರೆಯದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇಂತಹ ಅದ್ದೂರಿ ಮದುವೆಗೆ ಇನ್ಫೊಸಿಸ್ ಫೌಂಡೆಶನ್ ಮುಖ್ಯಸ್ಥೆ, ರಾಜ್ಯಸಭಾ ಸಂಸದೆ ಸುಧಾಮೂರ್ತಿಯವರಿಗೂ ಆಹ್ವಾನ ಇತ್ತು.
ಸಾಮಾನ್ಯವಾಗಿ ಸಿಂಪಲ್ ಉಡುಗೆ, ತೊಡುಗೆಯಲ್ಲಿ ಕಾಣಿಸಿಕೊಳ್ಳುವ ಸುಧಾ ಮೂರ್ತಿಯವರು ಅಂತಹ ವೈಭವೋಪೇತ ಕಾರ್ಯಕ್ರಮದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಹಲವರಲ್ಲಿ ಇತ್ತು. ಯಾಕೆಂದರೆ ಅಂಬಾನಿ ಮಗನ ಮದುವೆಗೆ ಬಂದ ಗಣ್ಯರು ಯಾವ ರೀತಿಯಲ್ಲಿ ಆಡಂಬರವನ್ನು ಮೈಮೇಲೆ ಹೇರಿಕೊಳ್ಳಬೇಕು ಎಂದು ವಾರಗಟ್ಟಲೆ ಪ್ಲಾನ್ ಮಾಡಿ ಅದನ್ನು ಧರಿಸಿ ಕ್ಯಾಮೆರಾಗಳ ಮುಂದೆ ಮಿಂಚುತ್ತಿದ್ದರೆ, ಸುಧಾಮೂರ್ತಿಯವರು ಮತ್ತೊಮ್ಮೆ ಸರಳತೆಯನ್ನೇ ಮೆರೆದಿದ್ದಾರೆ.
ಆವತ್ತು ಅವರ ಕೊರಳಲ್ಲಿ ಇದ್ದದ್ದು ಕೇವಲ ಮಂಗಳಸೂತ್ರ ಮಾತ್ರ. ಈ ಮೂಲಕ ತುಂಬಿದ ಕೊಡ ತುಳುಕುವುದಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಒಡತಿಯಾದರೂ ಸಿಂಪಲ್ ಆಗಿ ಅಂಬಾನಿ ಮನೆಯ ಮದುವೆಯಲ್ಲಿ ಭಾಗಿಯಾಗಿರುವುದು ಆಕರ್ಷಣೆಗೆ ಕಾರಣವಾಗಿದೆ. ತೆಲುಗು ನಟ ಮಹೇಶ್ ಬಾಬು ಪತ್ನಿ, ನಟಿ ನಮ್ರತಾ ಶಿರೋಡ್ಕರ್ ಅವರು ಸುಧಾ ಮೂರ್ತಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಸರಳತೆಯೇ ಭೂಷಣ ಎನ್ನುವಂತೆ ಕಾಣಿಸಿಕೊಂಡಿರುವ ಸುಧಾ ಮೂರ್ತಿಯವರ ನಗೆ ಖುಷಿ ನೀಡುತ್ತದೆ.
ಅದ್ದೂರಿ, ಆಡಂಬರ, ಶ್ರೀಮಂತಿಕೆಯ ನಡುವೆ ಸುಧಾ ಮೂರ್ತಿಯವರ ಸರಳತೆ ಮೈಗೂಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಬಿಲೇನಿಯರ್ ಆಗಿದ್ದರೂ ಮಂಗಳ ಸೂತ್ರದ ಜೊತೆಗೆ ಯಾವುದೇ ಬೆಲೆ ಬಾಳುವ ಒಡವೆಗಳನ್ನು ಧರಿಸಿಲ್ಲ ಎನ್ನುವುದೇ ವಿಶೇಷ.
Leave A Reply