ಶಾಸಕ ಡಾ. ಭರತ್ ಶೆಟ್ಟಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
ಹಿಂದೂಗಳ ವಿರುದ್ಧ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿ ನಡೆಸಿದ ಭಾರತೀಯ ಜನತಾ ಪಾರ್ಟಿಯ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಡಾ. ಭರತ್ ಶೆಟ್ಟಿಯವರು ರಾಹುಲ್ ಗಾಂಧಿಯವರು ಹಿಂದೂಗಳ ಬಗ್ಗೆ ಅವಹೇಳನಕಾರಿ ರೀತಿ ಮಾತನಾಡಿರುವುದನ್ನು ಪ್ರಖರ ಶಬ್ದಗಳ ಮೂಲಕ ಖಂಡಿಸಿದ್ದರು.
ಡಾ. ಭರತ್ ಶೆಟ್ಟಿಯವರ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ, ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಸೆಕ್ಷನ್ 353 (2) ಪ್ರಕಾರ ಜುಲೈ 10 ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಭರತ್ ಶೆಟ್ಟಿ ಹೈಕೋರ್ಟ್ ಮೆಟ್ಟಲೇರಿದ್ದರು. ತಮ್ಮ ವಿರುದ್ಧ ದಾಖಲಾಗಿರುವ ಈ ಪ್ರಕರಣ ರಾಜಕೀಯ ಪ್ರೇರಿತ ಮತ್ತು ಆರೋಪ ನಿರಾಧರ ಎಂದು ವಾದಿಸಿದ್ದರು. ಜುಲೈ 11 ರಂದು ನಿರೀಕ್ಷಣಾ ಜಾಮೀನು ದೊರಕಿತ್ತು.
ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ಮಧ್ಯಂತರ ಆದೇಶ ಹೊರಡಿಸಿ ಎಫ್ ಐ ಆರ್ ಗೆ ತಡೆ ನೀಡಿದ್ದಾರೆ. ಅದರೊಂದಿಗೆ ಈ ಪ್ರಕರಣದ ಸಂಬಂಧ ಶಾಸಕ ಡಾ. ಭರತ್ ಶೆಟ್ಟಿಯವರ ವಿರುದ್ಧ ಎಲ್ಲಾ ಕ್ರಿಮಿನಲ್ ಪ್ರಕರಣಕ್ಕೂ ತಡೆ ಆದೇಶವೇ ಜಾರಿಯಲ್ಲಿ ಇರಲಿದೆ.
ಡಾ. ಭರತ್ ಶೆಟ್ಟಿಯವರ ಪರ ವಾದಿಸಿದ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿ “ಭರತ್ ಶೆಟ್ಟಿಯವರು ಯಾವುದೇ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುವಂತಹ ಹೇಳಿಕೆ ನೀಡಿಲ್ಲ ” ಎಂದರು.
Leave A Reply