ದಟ್ಟಾರಣ್ಯದಲ್ಲಿ ಪತ್ನಿಯನ್ನು ಮರಕ್ಕೆ ಕಟ್ಟಿ ಹಾಕಿ ಓಡಿಹೋದನಾ ಪತಿ!
ಅದು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅರಣ್ಯ ಪ್ರದೇಶ. ಅಲ್ಲಿನ ಒಂದು ಮರಕ್ಕೆ ಕಬ್ಬಿಣದ ಸರಪಳಿಯಲ್ಲಿ ಕಟ್ಟಿದ ಮಹಿಳೆ ಪತ್ತೆಯಾಗಿದ್ದಾರೆ. ಆಕೆಯ ಬಳಿ ಅಮೇರಿಕಾದ ಪಾಸ್ ಪೋರ್ಟ್ ಪ್ರತಿ ಸಿಕ್ಕಿದೆ. ಅದರೊಂದಿಗೆ ತಮಿಳುನಾಡಿನ ಆಧಾರ್ ಕಾರ್ಡ್ ಕೂಡ ದೊರಕಿದೆ. ಅದರಲ್ಲಿ ಮಹಿಳೆಯ ಹೆಸರು ಲಲಿತಾ ಕಾಯಿ ಎಂದು ಬರೆಯಲಾಗಿದೆ. ಅವಳು ಅಲ್ಲಿಗೆ ಹೇಗೆ ಬಂದಳು, ಯಾರಾದರೂ ಬಲವಂತವಾಗಿ ತಂದಿದ್ರೆ ಅದು ಯಾರು? ಅವಳನ್ನು ಯಾಕೆ ಕಟ್ಟಿ ಹಾಕಲಾಗಿತ್ತು? ಕೊನೆಗೆ ಹೊರ ಪ್ರಪಂಚಕ್ಕೆ ಅವಳ ಇರುವಿಕೆ ಹೇಗೆ ಗೊತ್ತಾಯಿತು ಎನ್ನುವುದೇ ಈಗ ಇರುವ ವಿಷಯ.
ಮುಂಬೈ ನಗರದಿಂದ ಸುಮಾರು 450 ಕಿ.ಮೀ ದೂರದಲ್ಲಿರುವ ಸಿಂಧದುರ್ಗ ಜಿಲ್ಲೆಯ ಸೊನುರಲಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಳೆದ ಶನಿವಾರ ಹೆಂಗಸೊಬ್ಬಳ ಚೀರಾಟ ಕೇಳಿಸಿದೆ. ಗ್ರಾಮಸ್ಥರಲ್ಲಿ ಕೆಲವರು ಧೈರ್ಯ ಮಾಡಿ ಕಾಡೊಳಗೆ ಹೋಗಿದ್ದಾರೆ. ಅಲ್ಲಿ ಕಬ್ಬಿಣದ ಸರಪಳಿಯಲ್ಲಿ ಬಂಧಿಯಾಗಿ ಕುಳಿತಿದ್ದ ಮಹಿಳೆ ಕಂಡುಬಂದಿದ್ದಾಳೆ. ಕೂಡಲೇ ಊರಿನವರು ಸ್ಥಳೀಯ ಠಾಣೆ ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಎಷ್ಟು ದಿನಗಳಿಂದ ಅವಳು ಅಲ್ಲಿ ಇದ್ದಳು ಎನ್ನುವುದು ಸದ್ಯಕ್ಕೆ ತಿಳಿಯುತ್ತಿಲ್ಲ. ಯಾಕೆಂದರೆ ಲಲಿತಾ ಕಾಯಿ ಮಾತನಾಡದ ಸ್ಥಿತಿಯಲ್ಲಿದ್ದಾರೆ. ಆಹಾರ ಇಲ್ಲದೆ ಬಳಲಿ ಬೆಂಡಾಗಿದ್ದಾಳೆ. ನಿತ್ರಾಣಗೊಂಡು ಅರೆಜೀವದ ಸ್ಥಿತಿಗೆ ತಲುಪಿದ್ದಾಳೆ. ಅರಣ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆಯ ನೀರಿನಿಂದ ತೊಯ್ದಿರುವ ಆಕೆಯನ್ನು ಮೊದಲು ಸಾವಂತವಾಡಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸಿಂಧುದುರ್ಗದ ಓರೋಸ್ ಆಸ್ಪತ್ರೆಗೆ ದಾಖಲಾಗಿತ್ತು. ಮಹಿಳೆಯ ಮಾನಸಿಕ ಸ್ಥಿತಿ ಕೂಡ ಗಂಭೀರವಾಗಿರುವುದರಿಂದ ಪ್ರಸ್ತುತ ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ.
ಲಲಿತಾ ಕಾಯಿ ಮೂಲತ: ಅಮೇರಿಕಾ ನಿವಾಸಿಯಾಗಿದ್ದು, ಕಳೆದ 10 ವರ್ಷಗಳಿಂದ ತಮಿಳುನಾಡಿನಲ್ಲಿ ವಾಸವಿದ್ದರು. ಪತಿ ತಮಿಳುನಾಡಿನವರಾಗಿದ್ದು, ಸದ್ಯ ಈಕೆಯ ಪಾಸ್ ಪೋರ್ಟ್ ಅವಧಿ ಮುಕ್ತಾಯಗೊಂಡಿದೆ. ಈಕೆ ಸಂಪೂರ್ಣವಾಗಿ ಗುಣಮುಖರಾದ ನಂತರ ವಿಷಯ ತಿಳಿಯಬೇಕಿದೆ.
Leave A Reply