ಶಿಲ್ಪಿ ಅರುಣ್ ಯೋಗಿರಾಜ್ ಇನ್ನು ಡಾಕ್ಟರ್!
ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿರುವ ವೈಭವದ ದೃಶ್ಯವನ್ನು ನಾವೆಲ್ಲಾ ಕಣ್ಣಾರೆ ಕಂಡಿದ್ದೇವೆ. ಆ ಮೂರ್ತಿಯನ್ನು ರಚಿಸಿದವರು ಯಾರೆಂಬ ವಿಷಯವೂ ನಮಗೆಲ್ಲಾ ಗೊತ್ತಿದೆ. ಹೌದು, ಮೈಸೂರು ಮೂಲದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಬಾಲರಾಮನ ಮೂರ್ತಿಯನ್ನು ಕೆತ್ತಿದ ಬಳಿಕ ವಿಶ್ವವಿಖ್ಯಾತರಾಗಿರುವುದು, ಅವರಿಗೆ ಸನ್ಮಾನಗಳ ಸುರಿಮಳೆ ನಡೆಯುತ್ತಿರುವುದನ್ನು ನಾವೆಲ್ಲಾ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇವೆ. ಈಗ ಮಥುರಾ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಅರುಣ್ ಯೋಗಿರಾಜ್ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಡಿ – ಫಿಲ್) ಪದವಿ ಪ್ರದಾನ ಮಾಡಿದರು.
ಎಂಬಿಎ ಪದವಿ ಮಾಡಿರುವ ಅರುಣ್ ಯೋಗಿರಾಜ್ ಅವರ ಒಳಗಿರುವ ಅನನ್ಯ ಕಲೆ ಮತ್ತು ಅದನ್ನು ಅವರು ಅನುಷ್ಠಾನಗೊಳಿಸುವ ರೀತಿಯನ್ನು ಪರಿಗಣಿಸಿ ಅವರಿಗೆ ಪದವಿ ಪ್ರದಾನ ಮಾಡಲಾಗಿದೆ.
ಇನ್ನು ಅಯೋಧ್ಯೆಯ ಬಾಲರಾಮನ ವಿಗ್ರಹದೊಂದಿಗೆ ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಜ್ಯೋತಿಯ ಹಿಂದೆ ಸ್ಥಾಪಿಸಲಾಗಿರುವ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಎತ್ತರದ ಪುತ್ಥಳಿ, ಆದಿ ಶಂಕರಾಚಾರ್ಯರ ಶಿಲ್ಪ ಮತ್ತು ಮೈಸೂರಿನ 21 ಅಡಿ ಎತ್ತರದ ಹನುಮಾನ್ ಪ್ರತಿಮೆ ಕೂಡ ಅರುಣ್ ಯೋಗಿರಾಜ್ ಅವರ ಕೆತ್ತನೆಯಲ್ಲಿ ಸೇರಿದೆ.
Leave A Reply