ಕೇರಳದ ಕೊಟ್ಟಿಗೆಯಲ್ಲಿದ್ದ ಹಸು ಕರ್ನಾಟಕದವರ ಜೀವ ಉಳಿಸಿತು!

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪಗಳ ಹಿಂದೆ ಅನೇಕ ಹೃದಯವಿದ್ರಾವಕ ಕಥೆಗಳಿವೆ. ಅದರಲ್ಲಿ ಒಂದು ಕಥೆಯನ್ನು ನೀವು ಓದಲೇಬೇಕು. ವಯನಾಡಿನ ಭೂಕುಸಿತದಿಂದ ಇಲ್ಲಿಯವರೆಗೂ ಸುಮಾರು 180 ರಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ಎಷ್ಟೋ ಜನ ಈ ದಾರುಣ ಘಟನೆಯಲ್ಲಿ ತಮ್ಮವರನ್ನು ಕಳೆದುಕೊಂಡಿದ್ದಾರೆ.
ಈ ಭೂಕುಸಿತದ ದುರ್ಘಟನೆಯಲ್ಲಿಯೂ ಒಂದು ಸಮಾಧಾನಕರ ಸಂಗತಿ ನಡೆದಿದೆ.
ಕೇರಳದ ವಯನಾಡಿನಲ್ಲಿ ಚೂರಲ್ ಮಲಾ ಗುಡ್ಡ ಇದೆ. ಅಲ್ಲಿ ಕರ್ನಾಟಕದ ಚಾಮರಾಜನಗರ ಮೂಲದ ವಿನೋದ್ ಕುಟುಂಬ ವಾಸವಿತ್ತು. ಜುಲೈ 30 ರ ಮಧ್ಯರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಪದೇ ಪದೇ ಚೀರಾಡುತ್ತಾ ಇತ್ತು. ಯಾಕೆ ಹಸು ಹೀಗೆ ವಿಚಿತ್ರವಾಗಿ ಆಡುತ್ತಿದೆ ಎಂದು ನೋಡಲು ವಿನೋದ್ ಹೊರಗೆ ಬಂದಿದ್ದಾರೆ. ಮಳೆಯ ನಡುವೆ ಏನೋ ಅಪಾಯದ ಮುನ್ಸೂಚನೆ ಅರಿತ ವಿನೋದ್ ಮನೆಯಲ್ಲಿ ಮಲಗಿದ್ದವರನ್ನು ತಕ್ಷಣ ಎಬ್ಬಿಸಿದ್ದಾರೆ. ಎಲ್ಲರನ್ನು ಗುಡ್ಡದ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.
ಅವರು ಇದೇ ಸಮಯದಲ್ಲಿ ಮೆಪಾಡಿ ಎನ್ನುವಂತಹ ಇನ್ನೊಂದು ಪ್ರದೇಶದಲ್ಲಿದ್ದ ಎರಡು ತಿಂಗಳ ಹಸಿ ಬಾಣಂತಿ ಪತ್ನಿ ಪ್ರವಿದಾಗೂ ಮಾಹಿತಿ ನೀಡಿ, ಪತ್ನಿ, ಹಸುಳೆ, ಅತ್ತೆಯನ್ನು ಕೂಡ ಸುರಕ್ಷಿತ ಸ್ಥಳ ತಲುಪುವಂತೆ ಮಾಡಿದ್ದಾರೆ. ಇದೆಲ್ಲಾ ಆದ ಕೆಲವೇ ಗಂಟೆಗಳಲ್ಲಿ ಅವರಿದ್ದ ಮನೆ, ವಾಹನ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಮರುದಿನ ವಿನೋದ್ ಅವರ ಇಡೀ ಕುಟುಂಬ ಸುರಕ್ಷಿತವಾಗಿ ಚಾಮರಾಜನಗರವನ್ನು ತಲುಪಿದೆ.
Leave A Reply