ರಕ್ತದಾನ ಮಾಡಿ ನಾಯಿಯ ಜೀವ ಉಳಿಸಿದ ಘಟನೆ!
ಮನುಷ್ಯರು ರಕ್ತದಾನ ಮಾಡುವುದನ್ನು ಕೇಳಿದ್ದೇವೆ. ಆದರೆ ಪ್ರಾಣಿಗಳೂ ರಕ್ತದಾನ ಮಾಡುತ್ತವೆಯಾ? ದಾನಗಳಲ್ಲಿ ರಕ್ತದಾನ ಶ್ರೇಷ್ಟದಾನವಾಗಿದ್ದು, ಪ್ರತಿಯೊಬ್ಬರು 60 ವರ್ಷ ಪ್ರಾಯದ ಒಳಗೆ ರಕ್ತದಾನ ಮಾಡಬಹುದು. ತುರ್ತು ಪರಿಸ್ಥಿತಿಯಲ್ಲಿ ರಕ್ತ ಸಿಗದೇ ಒದ್ದಾಡಿ ಸತ್ತವರ ಕಥೆಯನ್ನು ನೆನೆಯುವಾಗ ರಕ್ತದ ಮಹತ್ವ ತಿಳಿಯುತ್ತದೆ. ಹಾಗಿರುವಾಗ ರಕ್ತದಾನದ ಬಗ್ಗೆ ಜಾಗೃತಿಯನ್ನು ಪ್ರತಿಯೊಬ್ಬರು ಹೊಂದಿರಬೇಕು. ಮನುಷ್ಯರು ರಕ್ತದಾನ ಶಿಬಿರವನ್ನು ಆಯೋಜಿಸುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಶ್ವಾನವೊಂದು ಇನ್ನೊಂದು ಶ್ವಾನಕ್ಕೆ ರಕ್ತದಾನ ಮಾಡಿರುವ ಕಥೆ ನಿಜಕ್ಕೂ ರೋಚಕವಾಗಿರುವಂತದ್ದು. ಇಂತಹ ಅಪರೂಪದಲ್ಲಿ ಅಪರೂಪ ಘಟನೆ ನಡೆದಿರುವುದು ಕೊಪ್ಪಳದಲ್ಲಿ. ಸಾಕಿದ ನಾಯಿಯೊಂದು ಸಾವು ಬದುಕಿನ ಹೋರಾಟದಲ್ಲಿದ್ದ ಮತ್ತೊಂದು ನಾಯಿಗೆ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದೆ.
ಕೊಪ್ಪಳದ ಪಶು ಚಿಕಿತ್ಸಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ, ಹಿಮೋಗ್ಲೋಬಿನ್ ಶಕ್ತಿ ಕುಂದಿದ್ದ 9 ವರ್ಷದ ಲ್ಯಾಬರ್ ಡಾಗ್ ನಾಯಿಗೆ ರಕ್ತದ ಅವಶ್ಯಕತೆ ಉಂಟಾಗಿತ್ತು. ಆ ನಾಯಿಗೆ ಬೇರೆ ನಾಯಿಯ ರಕ್ತ ನೀಡಬೇಕಿತ್ತು. ವೈದ್ಯರು ನಗರದ ಮೂರು ನಾಯಿಗಳ ಮಾಲೀಕರನ್ನು ಸಂಪರ್ಕಿಸಿ ನಾಯಿಗಳ ರಕ್ತದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಿದರು.
ಪ್ರೊ. ಬಸವರಾಜ್ ಪೂಜಾರ್ ಅವರ ಮೂರು ವರ್ಷದ ಡಾಬರ್ ಮ್ಯಾನ್ ತಳಿಯ ರಕ್ತವು ಹೊಂದಿಕೆಯಾಗಿದ್ದು, ವೈದ್ಯಕೀಯ ನಿಯಮಾನುಸಾರ ಇದರ 300 ಎಂಎಲ್ ರಕ್ತವನ್ನು ಪರೀಕ್ಷಿಸಿದ ಬಳಿಕ ಕುತ್ತಿಗೆಯ ಭಾಗದಿಂದ ರಕ್ತ ಪಡೆದು ದೈಹಿಕವಾಗಿ ನಿತ್ರಾಣವಾಗಿದ್ದ ಲ್ಯಾಬರ್ ಡಾಗ್ ಗೆ ನೀಡಲಾಗಿದೆ.
ರಕ್ತ ಪೂರೈಕೆಯಾಗುವ ಪೈಪನ್ನು ಹಾಕಿಕೊಂಡಿರುವ ನಾಯಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋ ನೋಡುವಾಗ ನಿಜಕ್ಕೂ ಪಾಪ ಎನಿಸುತ್ತದೆ.
Leave A Reply