ವಕ್ಫ್ ಬೋರ್ಡ್ ಬಳಿ ಇರುವ ಆಸ್ತಿ 30 ಚಂಡಿಗಢದಷ್ಟು ಎಂದ ಯತ್ನಾಳ್!
ವಕ್ಫ್ ( ತಿದ್ದುಪಡಿ ) ಮಸೂದೆ 2024 ಮಂಡಿಸಿರುವ ಕೇಂದ್ರ ಸರಕಾರದ ಈ ತೀರ್ಮಾನದ ನಂತರ ಲೋಕಸಭೆಯಲ್ಲಿ ವಾದ, ಪ್ರತಿವಾದಗಳ ಸರಣಿ ಜೋರಾಗಿ ನಡೆಯುತ್ತಿದ್ದರೆ ಇತ್ತ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡ ಕೇಂದ್ರ ಸರಕಾರದ ನಿಲುವಿನ ಬಗ್ಗೆ ಅಪಸ್ವರ ಎತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ” ಬಿಜೆಪಿಯವರು, ಎನ್ ಡಿಎ ಸರಕಾರ ಸಂಪೂರ್ಣವಾಗಿ ಅಲ್ಪಸಂಖ್ಯಾತ ವಿರೋಧಿಗಳು. ಎನ್ ಡಿಎ ಸರಕಾರ ಜಾತ್ಯಾತೀತ ಸರಕಾರ ಅಲ್ಲ. ಅವರಿಗೆ ಸಾಮಾಜಿಕ ನ್ಯಾಯ ಗೊತ್ತಿಲ್ಲ. ಎನ್ ಡಿಎ ಫಾಸಿಸ್ಟ್ ಮನಸ್ಥಿತಿ ಇರೋರು ಎಂದು ವಾಗ್ದಾಳಿ ನಡೆಸಿದರು. ಸಿದ್ಧರಾಮಯ್ಯನವರ ಈ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಜನತಾ ಪಾರ್ಟಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಮ್ಮ ಏಕ್ಸ್ ನಲ್ಲಿ ” ಕಾನೂನು ತಜ್ಞರು ಹಾಗೂ ಸಂವಿಧಾನ ತಜ್ಞರಾದ ಶ್ರೀಯುತ ಸಿದ್ಧರಾಮಯ್ಯನವರೇ ನಿಮಗೆ ಗೊತ್ತೆ?” ಎಂದು ಛೇಡಿಸಿದ್ದಾರೆ.
ವಕ್ಫ್ ಬೋರ್ಡ್ ಬಳಿ ಸುಮಾರು 8.66 ಲಕ್ಷ ಆಸ್ತಿಗಳಿವೆ. 8.02 ಲಕ್ಷ ಎಕರೆ ಒಡೆತನದ ಆಸ್ತಿ ಇರುವ ವಕ್ಫ್ ಎಂದರೆ ಸುಮಾರು 30 ಚಂಡೀಗಢದಷ್ಟು ಎಂದು ಅವರು ವಿಶ್ಲೇಷಿಸಿದ್ದಾರೆ. ಇನ್ನು ವಕ್ಫ್ ಟ್ರಿಬ್ಯೂನಲ್ ನಲ್ಲಿ ನೀಡಿದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಪ್ರಶ್ನಿಸುವಂತಿಲ್ಲ. ಯತ್ನಾಳ್ ನೀಡಿರುವ ಇನ್ನೊಂದು ಅಂಶ ಎಂದರೆ ಮುಸಲ್ಮಾನ ಬಹುಸಂಖ್ಯಾತ ರಾಷ್ಟ್ರಗಳಲ್ಲಿಯೇ ವಕ್ಫ್ ಎಂಬ ಪರಿಕಲ್ಪನೆ ಇಲ್ಲ. ರಕ್ಷಣಾ ಇಲಾಖೆ ಹಾಗೂ ಭಾರತೀಯ ರೈಲ್ವೆ ಬಿಟ್ಟರೆ ಭಾರತದಲ್ಲಿ ಅತೀ ಹೆಚ್ಚು ಭೂಮಿಯ ಒಡೆತನ ಇರುವುದು ವಕ್ಫ್ ನಲ್ಲಿ. ಅದರೊಂದಿಗೆ ಈ ಕಾಯ್ದೆಯಿಂದ ಅತೀ ಹೆಚ್ಚು ಅನ್ಯಾಯಕ್ಕೆ ಒಳಪಟ್ಟಿರುವುದು ಹಿಂದೂಗಳು ಎನ್ನುವ ಮಾತನ್ನು ಕೂಡ ಯತ್ನಾಳ್ ಹೇಳಿದ್ದಾರೆ.
ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ತಿರುಚೆಂಥುರೈ ಹಳ್ಳಿಯಲ್ಲಿರುವ 1500 ವರ್ಷಗಳ ಇತಿಹಾಸವಿರುವ ಸುಂದರೇಶ್ವರ ಸ್ವಾಮಿ ದೇವಸ್ಥಾನದ ಮೇಲೂ ವಕ್ಫ್ ಮಂಡಳಿಯ ದೃಷ್ಟಿ ಬಿದ್ದಿದ್ದು, ದೇವಸ್ಥಾನದ 369 ಎಕರೆ ಸಂಪೂರ್ಣವಾಗಿ ವಕ್ಫ್ ಗೆ ಸೇರಿದ್ದು ಎಂದು ಹೇಳಿತ್ತು.
ಈ ರೀತಿಯಾದ ಏಕಪಕ್ಷೀಯವಾದ ಕಾನೂನು ಸಂವಿಧಾನದ ಆಶಯಗಳಿಗೆ ವಿರುದ್ಧವಾದದ್ದು ಎಂಬುದು ನಿಮಗೆ ಗೊತ್ತಿಲ್ಲವೇ? ಅಥವಾ ಗೊತ್ತಿದ್ದರೂ ಮೈನಾರಿಟಿ ವೋಟ್ ಬ್ಯಾಂಕ್ ಗೆ ಅಂಜಿಕೊಂಡು ವಕ್ಫ್ ಪರ ಹೇಳಿಕೆ ನೀಡುತ್ತಿದ್ದೀರಾ? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
Leave A Reply