ಚೀನಾದ ಬಾಲಕಿಯಿಂದ ಬೀಜಿಂಗ್ ನಲ್ಲಿ ಭರತನಾಟ್ಯ ಆರಂಗೇಟ್ರಂ!
ಕೇಳಿದ್ರೆ ಆಶ್ಚರ್ಯವಾಗಬಹುದು. ಹೇಳಿ, ಕೇಳಿ ಭರತನಾಟ್ಯ ಭಾರತದ ಪ್ರಾಚೀನ ರಂಗಕಲೆ. ಅನೇಕ ನೃತ್ಯಪ್ರಿಯರು ಭರತನಾಟ್ಯವನ್ನು ಶಾಸ್ತ್ರೋಕ್ತವಾಗಿ ಕಲಿತು, ಕಲಿಸಿದ ಗುರುಗಳ ಸಮ್ಮುಖದಲ್ಲಿ ಅರಂಗೇಟ್ರಂ ಮಾಡುವುದು ನಡೆದುಕೊಂಡು ಬಂದ ಸಂಪ್ರದಾಯ. ಇದು ಭಾರತದಲ್ಲಿ ಎಷ್ಟೋ ದಶಕಗಳಿಂದ ನಡೆದುಕೊಂಡು ಬರುತ್ತಿರುವ ಸಂಸ್ಕೃತಿ. ಈಗ ನಮ್ಮ ಭರತನಾಟ್ಯಂ ನೆರೆಯ ಚೀನಾದಲ್ಲಿಯೂ ಜನಪ್ರಿಯತೆಯನ್ನು ಪಡೆದುಕೊಂಡು ಬರುತ್ತಿದೆ.
13 ವರ್ಷದ ಚೀನಾ ಬಾಲಕಿಯೊಬ್ಬರು ಚೀನಾದಲ್ಲಿ ಭರತನಾಟ್ಯ ಅರಂಗೇಟ್ರಂ ಪ್ರದರ್ಶನ ನೀಡುವ ಮೂಲಕ ಇತಿಹಾಸ ನಿರ್ಮಿಸಿದ್ದಾಳೆ. ಆಕೆಯ ಹೆಸರು ಲೀ ಮಝಿ. ಇದು ಚೀನಾದಲ್ಲಿ ಮೊದಲ ಬಾರಿಗೆ ನಡೆದ ಅರಂಗೇಟ್ರಂ ಭರತನಾಟ್ಯ ಪ್ರದರ್ಶನವಾಗಿತ್ತು. ಲೀ ಚೀನಾದಲ್ಲಿಯೇ ಸಂಪೂರ್ಣ ತರಬೇತಿ ಪಡೆದ ವಿದ್ಯಾರ್ಥಿನಿಯೊಬ್ಬರು ಚೀನಾದಲ್ಲಿ ನೀಡಿದ ಮೊದಲ ಪ್ರದರ್ಶನದ ಬಗ್ಗೆ ಭಾರತೀಯ ರಾಯಭಾರ ಕಚೇರಿಯ ಸಂಸ್ಕೃತಿ ವಿಭಾಗದ ಉಸ್ತುವಾರಿ ವಹಿಸಿರುವ ಕಾರ್ಯದರ್ಶಿ ಟಿ ಎಸ್ ವಿವೇಕಾನಂದ್ ಹೇಳಿದರು.
ಭರತನಾಟ್ಯ ಪರಂಪರೆಯ ಇತಿಹಾಸದಲ್ಲಿ ಇದೊಂದು ಹೆಗ್ಗುರುತಾಗಿದೆ ಎಂದು ಲೀ ಅವರಿಗೆ ಭರತನಾಟ್ಯ ತರಬೇತಿ ನೀಡಿದ ಖ್ಯಾತ ಭರತನಾಟ್ಯ ಕಲಾವಿದೆ ಜಿನ್ ಶಾನ್ ಹೇಳಿದ್ದಾರೆ. ಭಾರತದ ರಾಯಭಾರಿ ಪ್ರದೀಪ್ ರಾವತ್ ಅವರ ಪತ್ನಿ ಶ್ರುತಿ ರಾವತ್ ಅವರು ಲೀ ಅವರ ಅರಂಗೇಟ್ರಂನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಲೀಲಾ ಸ್ಯಾಮ್ಸನ್ ಜೊತೆಗೆ ಚೆನೈನಿಂದ ಆಗಮಿಸಿದ್ದ ಸಂಗೀತಗಾರರ ತಂಡವು ಶಾಸ್ತ್ರೀಯ ಸಂಗೀತ ಪ್ರದರ್ಶನ ನೀಡಿತು. ಈ ತಿಂಗಳ ಅಂತ್ಯದಲ್ಲಿ ಚೆನೈನಲ್ಲೂ ಲೀ ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.
Leave A Reply