ಮಂಗಳೂರಿನಲ್ಲಿ ಹುಚ್ಚು ಪ್ರೇಮಿಯಿಂದ ಯುವತಿಗೆ ಚಾಕು ಇರಿತ..
ಇದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿರುವ ಘಟನೆ. ಮೂಡಬಿದ್ರೆಯ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ಆರೋಪಿ ಹುಚ್ಚು ಪ್ರೇಮಿಯನ್ನು ತುಮಕೂರು ಮೂಲದ ಮಂಜುನಾಥ್ ಎಂದು ಗುರುತಿಸಲಾಗಿದೆ. ಅದೇ ಊರಿನ ಯುವತಿ ಮೂಡಬಿದ್ರೆ ಕಾಲೇಜಿನಲ್ಲಿ ಪಿಯು ಓದುತ್ತಿದ್ದಳು.
ಮಂಜುನಾಥ್ ಹಾಗೂ ಹಲ್ಲೆಗೊಳಗಾದ ಯುವತಿ ಜತೆಯಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದರು. ಮಂಜುನಾಥ್ ಕಾಲೇಜು ತೊರೆದು ತುಮಕೂರಿನ ಮನೆಗೆ ತೆರಳಿದ್ದ. ಯುವತಿ ಮೆಸೇಜ್ ಗೆ ಉತ್ತರಿಸುತ್ತಿಲ್ಲ ಎಂದು ಕೋಪಗೊಂಡ ಯುವಕ ತುಮಕೂರಿನಿಂದ ಮೂಡಬಿದ್ರೆಗೆ ಬಂದಿದ್ದ. ಆದರೆ ಯುವತಿ ಈ ಪಾಗಲ್ ಪ್ರೇಮಿಯನ್ನು ಭೇಟಿ ಮಾಡಲು ನಿರಾಕರಿಸಿದ್ದಳು. ಇದರಿಂದ ಮತ್ತಷ್ಟು ಕೆರಳಿದ ಮಂಜುನಾಥ್ ಕಾಲೇಜಿಗೆ ನುಗ್ಗಿ ತರಗತಿಯಲ್ಲಿದ್ದ ಯುವತಿಗೆ ಕತ್ತರಿಯಿಂದ ಇರಿದಿದ್ದಾನೆ. ಈ ಘಟನೆಯಲ್ಲಿ ಯುವತಿಯ ಮುಖಕ್ಕೆ ಗಾಯವಾಗಿದೆ.
ತಕ್ಷಣ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಮಂಜುನಾಥನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಜುನಾಥ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
Leave A Reply