ಮೋದಿ ಭಯೋತ್ಪಾದನೆ ಬಗ್ಗೆ ಮಾತನಾಡಿದರೆ ಚೀನಾಕ್ಕೇನು ತ್ರಾಸ?
ಬೆಟ್ಟಕ್ಕೆ ನಾಯಿ ಬೊಗಳಿ ಸತ್ತಿತಂತೆ ಎಂಬ ಮಾತಿದೆ. ಕೈಲಾಗದವನು ಮೈಯೆಲ್ಲ ಪರಚಿಕೊಂಡ ಎಂಬುದೂ ಚಾಲ್ತಿಯಲ್ಲಿದೆ. ಕುತಂತ್ರ, ಕುತ್ಸಿತ ಮನಸ್ಸುಗಳು ನೇರವಾಗಿ ಯುದ್ಧಕ್ಕೆ ಬರಲು, ರಾಜಮಾರ್ಗ ಅನುಸರಿಸಲು ಸಾಧ್ಯವಿಲ್ಲ ಎಂದು ಎಲ್ಲೋ ಓದಿದ ಸಾಲು ನೆನಪಾಗುತ್ತವೆ. ಹೀಗೆ, ನೆನಪಾದಾಗಲೆಲ್ಲ ಪಕ್ಕದಲ್ಲೇ ಇರುವ ಚೀನಾ ನೆನಪಾಗುತ್ತದೆ. ಅದರ ಉಪಟಳ, ಹಿಂಬಾಗಲಿನಿಂದ ಇಣುಕಿ ನೋಡುವ ಕಳ್ಳಬೆಕ್ಕಿನ ನೋಟ ಎಂಥವರಿಗೂ ಅನುಮಾನ ತರಿಸುತ್ತದೆ.
ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಶೃಂಗಸಭೆ ಹಿನ್ನೆಲೆ ಭಾನುವಾರ ಚೀನಾಕ್ಕೆ ತೆರಳಲಿದ್ದಾರೆ ಎಂಬ ಸುಳಿವು ಸಿಕ್ಕ ತಕ್ಷಣವೇ ಚೀನಾ ಸಿಕ್ಕಿಂನ ಡೋಕ್ಲಾಮ್ ಗಡಿಯಲ್ಲಿ ನಿಯೋಜಿಸಿದ್ದ ಸೇನೆಯನ್ನು ಹಿಂತೆಗೆದುಕೊಂಡಿತು. ಕೊನೆಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಇದು ಭಾರತಕ್ಕೆ ಪಾಠ ಎಂದು ಬೊಗಳೆ ಬಿಟ್ಟಿತು.
ಈಗ ಇದೇ ಚೀನಾ ಮತ್ತೊಂದು ವರಸೆ ಆರಂಭಿಸಿದೆ. ಬ್ರಿಕ್ಸ್ ಶೃಂಗಸಭೆಯಲ್ಲಿ ನರೇಂದ್ರ ಮೋದಿ ಮಾತನಾಡಬಾರದಂತೆ. ಹೀಗೆ ಭಯೋತ್ಪಾದನೆ ಬಗ್ಗೆ ಮಾತನಾಡುವುದು ಅಪ್ರಸ್ತುತವಂತೆ. ಹೀಗಂತ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚೆನ್‌ಯುಂಗ್ ಹೇಳಿಕೆ ನೀಡಿದ್ದಾರೆ.
ಅರೆ, ಒಂದು ಅಂತಾರಾಷ್ಟ್ರೀಯ ಮಟ್ಟದ ಶೃಂಗಸಭೆಯಲ್ಲಿ ಭಯೋತ್ಪಾದನೆ ಬಗ್ಗೆ ಮಾತನಾಡಿದರೆ ಚೀನಾಕ್ಕೇನು ತ್ರಾಸ? ಅಷ್ಟಕ್ಕೂ, ಪದೇಪದೆ ಕಾಶ್ಮೀರ ಗಡಿಯಲ್ಲಿ ಉಗ್ರರನ್ನು ನುಸುಳಿಸುವ, ಉಗ್ರರನ್ನು ತನ್ನ ಮಾನಸಪುತ್ರರಂತೆ ಸಾಕುತ್ತಿರುವ ಪಾಕಿಸ್ತಾನ ಹಾಗೂ ಅದರ ಭಯೋತ್ಪಾದನೆ ಬಗ್ಗೆ ವಿಶ್ವದ ಪ್ರಮುಖ ರಾಷ್ಟ್ರಗಳನ್ನೊಳಗೊಂಡ ಸಭೆಯಲ್ಲಿ ಚರ್ಚೆಗೆ ಬಿಟ್ಟರೆ ಚೀನಾ ಏಕೆ ಅಂಡುಸುಟ್ಟ ನರಿಯಂತಾಡುತ್ತದೆ? ಅಷ್ಟಕ್ಕೂ ವಿಶ್ವವನ್ನೇ ಕಾಡುತ್ತಿರುವ ಭಯೋತ್ಪಾದನೆ ಕುರಿತ ಚರ್ಚೆಯೇ ಏಕೆ ಅಪ್ರಸ್ತುತ ಎನಿಸುತ್ತದೆ? ಫ್ರಾನ್ಸ್ ದೇಶದ ಪ್ಯಾರಿಸ್ ಮೇಲೆ ಐಸಿಸ್ ಉಗ್ರರು ಮಾಡಿದ ದಾಳಿಯನ್ನು ಚೀನಾ ಮರೆತಿದೆಯೇ?
ಹಾಗಂತ ಚೀನಾಕ್ಕೆ ಇದೆಲ್ಲ ಗೊತ್ತಿಲ್ಲ ಎಂದಲ್ಲ. ಎಲ್ಲವೂ ಗೊತ್ತಿದೆ. ಆದರೆ ಪಾಕಿಸ್ತಾನದಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆ ಮಾಡಲು, ರಸ್ತೆ ಅಭಿವೃದ್ಧಿ ಹೆಸರಲಿ ಅದರ ಸಹಾಯ ಬೇಡಲು, ಉಗ್ರರನ್ನು ಭಾರತದ ಮೇಲೆ ದಾಳಿ ಮಾಡುವಂತೆ ಪ್ರೇರೇಪಿಸಲು… ಹೀಗೆ ಇಷ್ಟೆಲ್ಲ ಕುತಂತ್ರ ಮೆರೆಯಲು ಚೀನಾಕ್ಕೊಂದು ಪಾಕಿಸ್ತಾನ ಬೇಕಲ್ಲ? ಅದಕ್ಕೆ ತಾನು ಬೆಂಬಲ ಸೂಚಿಸುತ್ತೇನೆ ಎಂದು ಸಾರಬೇಕಲ್ಲ? ಅದಕ್ಕಾಗಿಯೇ ಚೀನಾ ಭಯೋತ್ಪಾದನೆ ಅಪ್ರಸ್ತುತ ಎಂದಿದೆ.
ಆದಾಗ್ಯೂ, ಇಂದು ನರೇಂದ್ರ ಮೋದಿ ಅಂತಾರಾಷ್ಟ್ರೀಯ ನಾಯಕರಾಗಿದ್ದಾರೆ. ಅವರ ಮಾತಿಗೆ ವಿಶ್ವವೇ ಕಿವಿಯಾಗುತ್ತದೆ, ಪ್ರಾಮುಖ್ಯ ನೀಡುತ್ತದೆ. ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮೋದಿ ಭಯೋತ್ಪಾದನೆ ಬಗ್ಗೆ ಮಾತನಾಡಿದರೆ, ತನ್ನ ನೆಲದಲ್ಲೇ, ತನ್ನ ಆಪ್ತಮಿತ್ರನ ಹೆಸರು ಕೆಡಿಸಿದಂತಾಗುತ್ತದೆ ಎಂಬುದು ಚೀನಾ ದುರಾಲೋಚನೆ. ಭಾರತದ ಮಿತ್ರ ರಷ್ಯಾ ಸಹ ಸಭೆಯಲ್ಲಿ ಭಾಗವಹಿಸುತ್ತದೆ. ಹಾಗಾಗಿಯೇ ಚೀನಾ ಸಭೆಗೂ ಮುನ್ನ ಇಂಥಾ ಕುತಂತ್ರದ ಹೇಳಿಕೆ ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆ ಕುರಿತು ಚರ್ಚಿಸಿ ಚೀನಾ ನೆಲದಲ್ಲೇ, ಅದಕ್ಕೆ ಟಾಂಗ್ ನೀಡುತ್ತಾರಾ? ಕಾದುನೋಡಬೇಕು.
-ಅನಿರುದ್ಧ್ ಪೊನ್ನಪ್ಪ
ಸಾಫ್ಟ್‌ವೇರ್ ಉದ್ಯೋಗಿ, ಬೆಂಗಳೂರು
Leave A Reply