ಇಲ್ಲಿಲ್ಲ ಸ್ಥಾನ: ಇಂಗ್ಲೆಂಡಿನಲ್ಲಿ 5 ವಿಕೆಟ್ ಕಬಳಿಸಿ ರೈಸಿಂಗ್ ಚಹಲ್!
ಟೀಮ್ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರಿಗೆ ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಿಂದ ಕೈ ಬಿಡಲಾಗಿತ್ತು. ಮತ್ತೊಂದೆಡೆ ದುಲೀಪ್ ಟ್ರೋಪಿಗೆ ಆಯ್ಕೆ ಮಾಡಲಾದ ನಾಲ್ಕು ತಂಡಗಳಲ್ಲಿಯೂ ಅವರಿಗೆ ಸ್ಥಾನ ನೀಡಲಾಗಿಲ್ಲ. ಇದರಿಂದ ಯುಜ್ವೇಂದ್ರ ಚಹಲ್ ಇಂಗ್ಲೆಂಡಿಗೆ ಸವಾರಿ ಬೆಳೆಸಿದ್ದಾರೆ.
ಅಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟಿನಲ್ಲಿ ನಾರ್ಥಾಂಪ್ಟನ್ ಶೈರ್ ಪರ ಅವರು ಆಡುತ್ತಿದ್ದಾರೆ. ಇದು ಅವರ ಕ್ರಿಕೆಟ್ ಜೀವನದ ಮೊದಲ ಕೌಂಟಿ ಪಂದ್ಯವೂ ಆಗಿದೆ. ಅಲ್ಲಿ ಚೊಚ್ಚಲ ಪಂದ್ಯದಲ್ಲಿ 14 ರನ್ನಿಗೆ 5 ವಿಕೆಟ್ ಕಿತ್ತು ಮಿಂಚಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ಮಂಡಳಿಯ ಆಯ್ಕೆದಾರರಿಗೆ ತಮ್ಮಲ್ಲಿನ ಸಾಮರ್ತ್ಯದ ಸಂದೇಶ ರವಾನಿಸಿದ್ದಾರೆ.
ಕ್ಯಾಂಟರ್ಬರಿಯ ಸೇಂಟ್ ಲಾರೆನ್ಸ್ ಗ್ರೌಂಡ್ ನಲ್ಲಿ ನಡೆದ ಪಂದ್ಯದಲ್ಲಿ ಕೆಂಟ್ ಹಾಗೂ ನಾರ್ಥಾಂಪ್ಟನ್ ಶೈರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಂಟ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ಇಲ್ಲಿ ಬೌಲಿಂಗ್ ಮಾಡಲು ಚಹಲ್ ಮುಂದಾಗುತ್ತಿದ್ದಂತೆ ಕೆಂಟ್ ತಂಡ ತತ್ತರಿಸಿ ಹೋಗಿದೆ. ಚಹಲ್ ಎಸೆದ ಹತ್ತು ಓವರ್ ಗಳಲ್ಲಿ 5 ಮೇಡನ್ ಓವರಗಳಾಗಿದ್ದು ಮಾತ್ರವಲ್ಲ, ಉಳಿದ ಐದು ಓವರ್ ಗಳಲ್ಲಿ ಐದು ವಿಕೆಟು ಕಬಳಿಸಲು ಅವರು ಬಿಟ್ಟುಕೊಟ್ಟಿದ್ದು 14 ರನ್ ಮಾತ್ರ. ಒಟ್ಟಾರೆ ಚಹಲ್ ಕೈಚಳಕದಿಂದ ಕೆಂಟ್ ತಂಡವನ್ನು 35.1 ಓವರ್ ಗಳಲ್ಲಿ 82 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಚಹಲ್ ತಂಡ ಯಶಸ್ವಿಯಾಗಿದೆ.
ಈ ಪ್ರದರ್ಶನದಿಂದ ಚಹಲ್ ಉತ್ತೇಜಿತರಾಗಿದ್ದು, ಕೌಂಟಿಯಲ್ಲಿ ಇನ್ನಷ್ಟು ಸಾಧನೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದರಿಂದ ಅವರಿಗೆ ಮತ್ತೆ ಟೀಮ್ ಭಾರತ್ ಕ್ರಿಕೆಟ್ ತಂಡದ ಬಾಗಿಲು ತೆರೆಯುವ ಸಾಧ್ಯತೆ ನಿಚ್ಚಳವಾದಂತೆ ಆಗಿದೆ.
Leave A Reply