ಒಡಿಶಾ ಸರಕಾರ ನಿರ್ಧಾರದಿಂದಾಗಿ ಉದ್ಯೋಗಸ್ಥ ಮಹಿಳೆಯರು ಫುಲ್ ಖುಶ್!
ಒಡಿಶಾದ ನೂತನ ಸರಕಾರ ಅಧಿಕಾರಕ್ಕೆ ಬಂದು ಕೆಲವೇ ತಿಂಗಳಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ. ಇದರಿಂದ ಅಲ್ಲಿನ ಲಕ್ಷಾಂತರ ಉದ್ಯೋಗಸ್ಥ ಮಹಿಳೆಯರ ಮೊಗದಲ್ಲಿ ನೆಮ್ಮದಿಯ ವಾತಾವರಣವನ್ನು ಮೂಡಿಸಿದೆ. ಅಷ್ಟಕ್ಕೂ ಈ ವಿಷಯ ರಾಷ್ಟ್ರ ರಾಜಕೀಯದಲ್ಲಿ ಬಹಳ ಸಮಯದಿಂದಲೂ ಚರ್ಚೆಯಲ್ಲಿತ್ತು. ಆಗಿನ ಕೇಂದ್ರ ಸಚಿವರಾಗಿದ್ದ ಸ್ಮೃತಿ ಇರಾನಿಯವರು ಈ ಬಗ್ಗೆ ಕೊಟ್ಟ ಒಂದು ಹೇಳಿಕೆಯಿಂದ ಮಹಿಳೆಯರ ಕೆಂಗೆಣ್ಣಿಗೂ ಗುರಿಯಾಗಿದ್ದರು. ಒಟ್ಟಿನಲ್ಲಿ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಒಂದು ದಿನ ರಜೆ ನೀಡಬೇಕೆ, ಬೇಡವೇ ಎನ್ನುವುದರ ಕುರಿತು ಚರ್ಚೆ ಹಲವು ಕಾಲದಿಂದ ಇದೆ. ಈಗ ಒಡಿಶಾ ಸರಕಾರ ಈ ಬಗ್ಗೆ ಖಡಕ್ ನಿರ್ಧಾರವನ್ನು ತೆಗೆದು ರಾಜ್ಯದ ಸರಕಾರಿ ಹಾಗೂ ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆಯನ್ನು ಘೋಷಿಸಿದೆ.
ಒಡಿಶಾದ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಇದನ್ನು ಘೋಷಿಸಿದ್ದು, ಮಹಿಳಾ ಉದ್ಯೋಗಿಗಳು ಮುಟ್ಟಾದ ಮೊದಲ ಅಥವಾ ಎರಡನೇ ದಿನ ವೇತನ ಸಹಿತ ರಜೆ ಪಡೆಯಬಹುದು. ಅದಾಗ್ಯೂ ರಜೆ ತೆಗೆದುಕೊಳ್ಳುವುದು ಅವರವರ ಇಚ್ಚೆಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.
ಅಚಾನಕ್ ಆಗಿ ಒಡಿಶಾ ಸರಕಾರ ಇಂತಹ ತೀರ್ಮಾನ ತೆಗೆದುಕೊಳ್ಳಲು ಕಾರಣಗಳೂ ಇವೆ. ಕೀನ್ಯಾದ ನೈರೋಬಿಯಲ್ಲಿ ನಡೆದ ” ಯುನೈಟೆಡ್ ನೇಷನ್ಸ್ ಸಿವಿಲ್ ಸೊಸೈಟಿ ಕಾನ್ಫರೆನ್ಸ್ – 2024 ” ರಲ್ಲಿ ಭಾಗವಹಿಸಿದ್ದ ಒಡಿಶಾದ ಹುಡುಗಿಯೊಬ್ಬಳು ಋತುಸ್ರಾವ ದಿನಗಳಲ್ಲಿ ವೇತನ ಸಹಿತ ರಜೆ ನೀಡಬೇಕು ಎಂದು ವಾದ ಮಂಡಿಸಿದ್ದಳು. ಒಡಿಶಾದ ಕಾರ್ಯಕರ್ತೆ ರಂಜಿತಾ ಪ್ರಿಯದರ್ಶಿನಿ ಅವರು ವೇತನ ಸಹಿತ ಮುಟ್ಟಿನ ರಜೆ ಬಗ್ಗೆ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಎಲ್ಲಾ ಪ್ರತಿನಿಧಿಗಳ ಗಮನ ಸೆಳೆದಿದ್ದಳು. ಮುಟ್ಟಿನ ದಿನಗಳಲ್ಲಿ ಮಹಿಳೆಯರು ನೋವಿನಿಂದ ಸಂಕಷ್ಟ ಅನುಭವಿಸುತ್ತಾರೆ ಎಂದು ಧ್ವನಿ ಎತ್ತಿದ್ದಳು.
ಕೊನೆಗೂ ಒಡಿಶಾ ಸರಕಾರ ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಟ್ಟಿದ್ದು, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಸ್ತುವಾರಿಯೂ ಆಗಿರುವ ಪರಿದಾ ಅವರು ಕಟಕ್ ನಲ್ಲಿ ನಡೆದ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಈ ಘೋಷಣೆ ಮಾಡಿದ್ದಾರೆ.
Leave A Reply