ಮಲಯಾಳಂ ಚಿತ್ರರಂಗದ ಹಸಿಹಸಿ ಲೈಂಗಿಕ ಶೋಷಣೆ ಬಿಚ್ಚಿಟ್ಟ ಆರ್ ಟಿಐ ವರದಿ!
ಮಲಯಾಳಂ ಚಲನಚಿತ್ರ ರಂಗದಲ್ಲಿನ ಲೈಂಗಿಕ ಶೋಷಣೆ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ರಚಿಸಿದ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಭಯಾನಕ ಅಂಶಗಳನ್ನು ಹೊರಗೆ ಹಾಕಿದೆ. ಹೊಸತನದ ಸಿನೆಮಾಗಳಿಂದ ಪ್ರಸಿದ್ಧಿ ಪಡೆದ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಶೋಷಣೆಯ ಮಾಫಿಯಾ ಇದೆ ಎಂದು ಈ ಸಮಿತಿ ತಿಳಿಸಿದೆ. 233 ಪುಟಗಳ ವರದಿಯಲ್ಲಿ ಮಲಯಾಳಂ ಚಿತ್ರರಂಗ ಹೇಗೆ ಜ್ಯೂನಿಯರ್ ನಟಿಯರನ್ನು ಲೈಂಗಿಕವಾಗಿ ಪೀಡಿಸುತ್ತದೆ ಎಂದು ವಿವರಿಸಲಾಗಿದೆ. ಮಲಯಾಳಂ ಚಿತ್ರರಂಗವು ಪ್ರಮುಖ ನಟರು, ನಿರ್ಮಾಪಕರು, ನಿರ್ದೇಶಕರನ್ನು ಒಳಗೊಂಡ 15 ಪುರುಷರ ಮಾಫಿಯಾದ ಬಿಗಿಹಿಡಿತದಲ್ಲಿದೆ. ಯಾರನ್ನು ಸಿನೆಮಾಕ್ಕೆ ತೆಗೆದುಕೊಳ್ಳಬೇಕು ಎಂದು ಈ ಗುಂಪು ನಿರ್ಧರಿಸುತ್ತದೆ. ತಮ್ಮ ಜೊತೆ ಹಾಸಿಗೆ ಹಂಚಿಕೊಳ್ಳುವವರಿಗೆ ಅವಕಾಶ ಸಿಗುತ್ತದೆ ಎಂದು ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಕುರಿತು ಅಧ್ಯಯನ ನಡೆಸಲು ಕೇರಳ ಸರಕಾರ ರಚನೆ ಮಾಡಿದ್ದ ನ್ಯಾಯಮೂರ್ತಿ ಹೇಮಾ ಸಮಿತಿ ಸ್ಫೋಟಕ ವರದಿ ನೀಡಿದೆ.
ಚಿತ್ರರಂಗದಲ್ಲಿ ಮುಂದುವರೆಯಬೇಕಾದರೆ ಎಲ್ಲದಕ್ಕೂ ಅಡ್ಜೆಸ್ಟ್ ಮಾಡಿಕೊಳ್ಳಬೇಕು ಎಂದು ಜ್ಯೂನಿಯರ್ ಕಲಾವಿದರೇ ತಮಗೆ ಮಾಹಿತಿ ನೀಡಿದ್ದಾರೆ ಎನ್ನುವುದು ವರದಿಯಲ್ಲಿದೆ. ಮಾಹಿತಿ ಹಕ್ಕಿನಡಿ ಈ ಮಾಹಿತಿಯನ್ನು ಪಡೆದುಕೊಂಡಿರುವವರು ಇದನ್ನು ಬಿಡುಗಡೆ ಮಾಡಿದ್ದು, ಸಂಚಲನಕ್ಕೆ ಕಾರಣವಾಗಿದೆ.
ಮಲಯಾಳಂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದ್ದು, ಯಾರು ಲೈಂಗಿಕ ಕ್ರಿಯೆಗೆ ಸಹಕರಿಸುತ್ತಾರೋ ಅವರಿಗೆ ಅವಕಾಶ ನೀಡಲು ಪ್ರತ್ಯೇಕ ಗುಂಪು ಮಾಡಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಸಹಕರಿಸದವರಿಗೆ ಲೈಂಗಿಕವಾಗಿ ಶೋಷಣೆ ಹೇಗಿರುತ್ತದೆ?
ರಾತ್ರಿ ವೇಳೆ ನಟಿಯರು ತಂಗಿದ್ದಾಗ ಅವರ ಕೋಣೆಯ ಬಾಗಿಲನ್ನು ಪದೇ ಪದೇ ಬಡಿಯಲಾಗುತ್ತದೆ. ಅವರು ತೆಗೆಯದಿದ್ದರೆ ಇನ್ನೂ ಜೋರಾಗಿ ಬಡಿಯಲಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಬಾಗಿಲೇ ಮುರಿದು ಬೀಳಬಹುದು ಎಂಬಂತೆ ಅದನ್ನು ಬಡಿಯಲಾಗುತ್ತದೆ ಎಂದು ನಟಿಯರು ತಿಳಿಸಿದ್ದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಲಯಾಳಂ ಚಿತ್ರರಂಗದ 15 ಮಂದಿಯ ಮಾಫಿಯಾ ತಮ್ಮ ವಿರುದ್ಧ ಧ್ವನಿ ಎತ್ತುವವರ ಭವಿಷ್ಯವನ್ನೇ ಹಾಳು ಮಾಡುವ ಶಕ್ತಿ ಹೊಂದಿದೆ. ಈ ಮಾಫಿಯಾದಲ್ಲಿ ಪ್ರಮುಖ ನಟರು ಇದ್ದಾರೆ ಎಂದು ವರದಿ ಹೇಳಿದೆ. ಶೋಷಣೆಗೆ ಒಳಗಾದ ನಟಿಯರು ಪೊಲೀಸರಿಗೆ ದೂರು ನೀಡಲು ನಿರಾಕರಿಸುವಂತಹ ಪರಿಸ್ಥಿತಿ ಇದೆ. ಯಾರಾದರೂ ದೂರು ನೀಡಿದರೆ ಪರಿಣಾಮ ಗಂಭೀರವಾಗಿರುತ್ತದೆ. ದೂರುದಾರರಿಗೆ ಒತ್ತಡ, ಅವರ ಕುಟುಂಬದ ಶೋಷಣೆಯನ್ನು ನಡೆಸಲಾಗುತ್ತದೆ.
2017 ರಲ್ಲಿ ಚಿತ್ರನಟಿಯೊಬ್ಬರ ಮೇಲೆ ಖ್ಯಾತ ನಟರೊಬ್ಬರ ತಂಡದಿಂದ ಲೈಂಗಿಕ ದೌರ್ಜನ್ಯ ನಡೆದಿತ್ತು. ಅದು ಆ ಸಂದರ್ಭದಲ್ಲಿ ವ್ಯಾಪಕ ಸಂಚಲನಕ್ಕೆ ಕಾರಣವಾಗಿತ್ತು. ಅದರಿಂದಾಗಿ ಚಿತ್ರರಂಗದಲ್ಲಿನ ಲೈಂಗಿಕ ಶೋಷಣೆ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ನ್ಯಾಯಮೂರ್ತಿ ಹೇಮಾ ಸಮಿತಿಯನ್ನು ಸರಕಾರ ರಚಿಸಿತ್ತು. ಈ ಸಮಿತಿಯ ವರದಿಯಿಂದ ಅದೇಷ್ಟು ಪ್ರಯೋಜನವಾಗುತ್ತದೆ ಎನ್ನುವುದು ದೇವರಿಗೆ ಗೊತ್ತು. ಆದರೆ ಇನ್ನು ಮುಂದಾದರೂ ಮಲಯಾಳಂ ಚಿತ್ರರಂಗದ ಹೆಣ್ಣುಮಕ್ಕಳು ಲೈಂಗಿಕ ಶೋಷಣೆಯಿಂದ ಬಳಲದಿರಲಿ ಎಂದು ಹಾರೈಕೆ.
Leave A Reply