32 ವರ್ಷಗಳ ಬಳಿಕ ಪೋಸ್ಕೋ ಕಾಯ್ದೆಯಡಿ ಮಾಜಿ ಕಾಂಗ್ರೆಸ್ ಮುಖಂಡರ ಸಹಿತ 6 ಮಂದಿಗೆ ಶಿಕ್ಷೆ!
ಕುಖ್ಯಾತ ಅಜ್ಮೇರ್ ಕೇಸ್ ನಲ್ಲಿ ಕೊನೆಗೂ ನ್ಯಾಯ ದೇವತೆ ಆರು ಜನ ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿ ಶಿಕ್ಷೆಯನ್ನು ವಿಧಿಸಿದೆ. ಅಗಸ್ಟ್ 20, 2024 ರಂದು ಮಾನ್ಯ ನ್ಯಾಯಾಲಯ ಪೋಸ್ಕೋ ಕಾನೂನಿನಡಿಯಲ್ಲಿ ನಫೀಸ್ ಚಿಸ್ತಿ, ನಸೀಮ್ ಆಲಿಯಾಸ್ ಟಾರ್ಜನ್, ಸಲೀಂ ಚಿಸ್ತಿ, ಇಕ್ಬಾಲ್ ಭಾಟಿ, ಸೋಹೆಲ್ ಘಾನಿ, ಸೈಯದ್ ಜಮೇನ್ ಹುಸೇನ್ ಅವರನ್ನು ಅಪರಾಧಿಕ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಪರಿಗಣಿಸಿ ಶಿಕ್ಷೆಯನ್ನು ವಿಧಿಸಿತು. 1992 ರಲ್ಲಿ ಈ ಆರು ಜನರನ್ನು ಸೇರಿಕೊಂಡು ಒಟ್ಟು 12 ಜನರು ಅಪಾಪ್ತ ಬಾಲಕಿಯರ ಲೈಂಗಿಕ ಶೋಷಣೆ, ಅತ್ಯಾಚಾರವನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅಜ್ಮೇರ್ ನ ಪ್ರಸಿದ್ಧ ಮಾಯೋ ಕಾಲೇಜಿನ ಈ ಬಾಲಕಿಯರಲ್ಲಿ ನೂರಕ್ಕೂ ಅಧಿಕ ಹೆಣ್ಣುಮಕ್ಕಳು ಈ ಕೀಚಕರ ಕೆಟ್ಟವ್ಯೂಹದಲ್ಲಿ ಸಿಲುಕಿದ್ದರು. ಅವರನ್ನು ಲೈಂಗಿಕವಾಗಿ ಹಿಂಸಿಸಿ, ಅವರ ಫೋಟೋ ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಈ ತಂಡದಿಂದ ಹೆಣ್ಣುಮಕ್ಕಳ ಬಾಳೇ ಹಾಳಾಗಿತ್ತು. ಈಗಾಗಲೇ ನಾಲ್ಕು ಜನ ಅಪರಾಧಿಗಳು ತಮ್ಮ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಈ ಪ್ರಕರಣ ಆ ಸಮಯದಲ್ಲಿ ಎಷ್ಟರಮಟ್ಟಿಗೆ ಜನಮಾನಸದಲ್ಲಿ ಹಬ್ಬಿತ್ತು ಎಂದರೆ ಅಜ್ಮೇರ್ 92 ಎಂಬ ಹೆಸರಿನ ಚಿತ್ರ ಕೂಡ ನಿರ್ಮಾಣವಾಗಿ 2023 ರಲ್ಲಿ ತೆರೆಗೆ ಬಂದಿತ್ತು. ಸುಮಾರು 250 ಅಪ್ರಾಪ್ತ ಹೆಣ್ಣುಮಕ್ಕಳನ್ನು ಹೇಗೆ ಅತ್ಯಾಚಾರ, ಬ್ಲ್ಯಾಕ್ ಮೇಲ್ ಬಲೆಯಲ್ಲಿ ಬೀಳಿಸಿ ತಮ್ಮ ತೆವಲಿಗೆ ಬಳಸಲಾಗುತ್ತದೆ ಎನ್ನುವುದೇ ಚಿತ್ರ ಕಥಾವಸ್ತು. ಈ ಚಿತ್ರವನ್ನು ಪುಷ್ಪೇಂದ್ರ ಸಿಂಗ್ ಎನ್ನುವವರು ನಿರ್ದೇಶಿಸಿದ್ದರೆ, ಕರಣ್ ವರ್ಮಾ ಹಾಗೂ ಸುಮೀತ್ ಸಿಂಗ್ ಮುಖ್ಯ ಭೂಮಿಕೆಯಲ್ಲಿದ್ದರು. ಈ ಸಿನೆಮಾ ಮುಸಲರ ಸಂಘಟನೆಗಳಿಂದ ವಿರೋಧವನ್ನು ಎದುರಿಸಿತ್ತು. ಈ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಿದರೆ ಖದೀಮ್ ಸಮುದಾಯದ ಕೋಪಕ್ಕೆ ರಾಜಸ್ಥಾನ ಸರಕಾರ ಬಲಿಯಾಗಬೇಕಾಗುತ್ತದೆ ಎಂಬ ಸಂದೇಶ ಹೋಗಿತ್ತು.
ದಶಕಗಳಿಂದ ನೂರಾರು ಸಂತ್ರಸ್ತರು ಈ ಪ್ರಕರಣದಲ್ಲಿ ನ್ಯಾಯಕ್ಕಾಗಿ ಅಲೆದಾಡುತ್ತಾ ಇದ್ದರು. ಆರೋಪಿಯಲ್ಲಿ ಒಬ್ಬನನ್ನು ಇದರಲ್ಲಿ ದೋಷಿ ಅಲ್ಲ ಎಂದು ಖುಲಾಸೆಗೊಳಿಸಲಾಗಿತ್ತು. ಕೆಳ ನ್ಯಾಯಾಲಯದಿಂದ ಹಿಡಿದು ಹೈಕೋರ್ಟ್, ಸುಪ್ರೀಂಕೋರ್ಟ್, ಫಾಸ್ಟ್ ಟ್ರಾಕ್ ಕೋರ್ಟ್, ಪೋಸ್ಕೋ ಕೋರ್ಟ್ ಹೀಗೆ ಹಲವು ಕೋರ್ಟ್ ಗಳಲ್ಲಿ ಕೇಸ್ ನಡೆದು ಕೊನೆಗೆ ನ್ಯಾಯ ಸಿಕ್ಕಿದಂತಾಗಿದೆ. ಅನೇಕ ಸಂತ್ರಸ್ತ ಮಹಿಳೆಯರು ಈಗ 50 ವರ್ಷದ ಆಸುಪಾಸಿನಲ್ಲಿದ್ದಾರೆ.
ಈಗ ಶಿಕ್ಷೆಗೆ ಒಳಗಾಗಿರುವ ಪ್ರಧಾನ ಆರೋಪಿ ಫಾರೂಕ್ ಚಿಸ್ತಿ ಅಜ್ಮೇರ್ ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದ. ಇನ್ನೊಬ್ಬ ಆರೋಪಿ ನಫೀಸ್ ಚಿಸ್ತಿ ಅಜ್ಮೇರ್ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷನಾಗಿದ್ದ. ಮಗದೊಬ್ಬ ಆರೋಪಿ ಅನ್ವರ್ ಚಿಸ್ತಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಜ್ಮೇರ್ ನ ಜಂಟಿ ಕಾರ್ಯದರ್ಶಿಯ ಹುದ್ದೆಯಲ್ಲಿದ್ದ.
ಒಂದು ಸ್ಥಳೀಯ ಪತ್ರಿಕೆಯಲ್ಲಿ ಹೆಣ್ಣುಮಕ್ಕಳ ಅತ್ಯಾಚಾರದ ಸುದ್ದಿ ಪ್ರಕಟವಾದ ಬಳಿಕ ಈ ವಿಷಯ ಬಹಿರಂಗವಾಗಿತ್ತು. ಆದರೆ ಪೊಲೀಸರು ತಕ್ಷಣ ಏನೂ ಮಾಡುವಂತಿರಲಿಲ್ಲ. ಯಾಕೆಂದರೆ ಅದರಲ್ಲಿ ಭಾಗಿಯಾಗಿದ್ದವರು ಸ್ಥಳೀಯ ದರ್ಗಾದ ಆಡಳಿತ ಮಂಡಳಿಯ ಪ್ರಭಾವಿಗಳ ಕುಟುಂಬದವರು ಆಗಿದ್ದರು. ನಂತರ ಮತ್ತೊಂದು ಸುದ್ದಿ ಪ್ರಕಟವಾಗುತ್ತದೆ. ಅದರಲ್ಲಿ ” ಬಾಲಕಿಯರ ಬ್ಲ್ಯಾಕ್ ಮೇಲರ್ ಗಳು ಫ್ರೀಯಾಗಿ ಓಡಾಡುತ್ತಿದ್ದಾರೆ” ಎಂಬ ಅರ್ಥದ ಬರಹಗಳಿದ್ದವು. ಕೊನೆಗೆ ಜನರ ಆಕ್ರೋಶದ ಸಿಡಿದಾಗ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ನಂತರ ಪ್ರಕರಣ ಸಿಐಡಿ ಸಿಬಿಗೆ ವಹಿಸಲಾಗಿತ್ತು. 1992, ಮೇ 30 ಸಿಐಡಿ ಸಿಬಿ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆಗೆ ಇಳಿದಿತ್ತು.
ಈ ಹಂತದಲ್ಲಿಯೇ ಈ ಬಾಲಕಿಯರ ನಗ್ನ ಫೋಟೋಗಳು ಫೋಟೋ ಲ್ಯಾಬ್ ನಿಂದ ಲೀಕ್ ಆಗಿದ್ದವು. ಅದರಿಂದ ಮಾನಸಿಕ ಕ್ಷೊಭೆಗೆ ಒಳಗಾದ ಫೋಟೋ ಲ್ಯಾಬ್ ಮಾಲೀಕ ಹಾಗೂ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅನೇಕ ಹೆಣ್ಣುಮಕ್ಕಳು ಮಾನಕ್ಕೆ ಅಂಜಿ ಪ್ರಾಣವನ್ನು ಅಂತ್ಯಗೊಳಿಸಿದ್ದರು. ಅಂತಿಮವಾಗಿ ನ್ಯಾಯ ದೇವತೆ ಕಣ್ಣುಬಿಟ್ಟಿದ್ದಾಳೆ. ಈ ಪ್ರಕರಣದ ಒಬ್ಬ ಆರೋಪಿ ಈಗಲೂ ಪತ್ತೆಯಾಗಿಲ್ಲ. ಆತ ಅಮೇರಿಕಾಕ್ಕೆ ಓಡಿ ಹೋಗಿರಬಹುದು ಎಂದು ಶಂಕಿಸಲಾಗಿದೆ .
Leave A Reply