ಯುವರಾಜ್ ಸಿಂಗ್ ಜೀವನ ಚರಿತ್ರೆಯ ಸಿನೆಮಾದಲ್ಲಿ ಅವರ ಪಾತ್ರಕ್ಕೆ ಯಾರು?
2007 ರ ಟಿ20 ವಿಶ್ವಕಪ್ ಮತ್ತು 2011 ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಯುವರಾಜ್ ಸಿಂಗ್ ಕ್ಯಾನ್ಸರ್ ಮಹಾಮಾರಿ ವಿರುದ್ಧ ಹೋರಾಡಿ ಗೆದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಟಿ ಸಿರೀಸ್ ನಿರ್ಮಾಣ ಸಂಸ್ಥೆ ಯುವರಾಜ ಸಿಂಗ್ ಜೀವನ ಚರಿತ್ರೆ ಮೇಲೆ ಸಿನೆಮಾ ಮಾಡಲು ತಯಾರಿ ನಡೆಸಿದೆ. ಈ ಬಗ್ಗೆ ಮಾತನಾಡಿರುವ ಯುವಿ ತಾಯಿ ಶಬನಮ್ ಗಿಲ್ ” ಇದು ನಮ್ಮ ಪಾಲಿಗೆ ವಿಶೇಷವಾಗಿ ಯುವಿ ಪಾಲಿಗೆ ದೊಡ್ಡ ವಿಷಯ. ಇದೊಂದು ಸ್ಫೂರ್ತಿದಾಯಕ ಕಥೆ. ಇದು ಯುವಜನಾಂಗಕ್ಕೆ ಯಶಸ್ಸು ಮತ್ತು ಸವಾಲುಗಳನ್ನು ಹೇಗೆ ಎದುರಿಸಬೇಕೆನ್ನುವುದರ ಕುರಿತು ಹೇಳಿಕೊಡುತ್ತದೆ. ಜೀವನ ತಳ ತಲುಪಿದಾಗ ಅಲ್ಲಿಂದ ಮೇಲೆ ಚಿಮ್ಮಿ ಯಶಸ್ಸನ್ನು ತಲುಪುದರ ಬಗ್ಗೆ ಯುವಿ ಜೀವನವೇ ಸಾಕ್ಷಿ. ಒಬ್ಬಳು ತಾಯಿಯಾಗಿ ನಾನು ಇದನ್ನು ಹೆಮ್ಮೆ ಪಡುತ್ತೇನೆ” ಎಂದು ಹೇಳಿದ್ದಾರೆ.
ಚಂಢಿಗಡ ಮೂಲದ ಯುವರಾಜ್ ಸಿಂಗ್ ಭಾರತದ ಪರ 40 ಟೆಸ್ಟ್, 304 ಏಕದಿನ, 58 ಟಿ20 ಪಂದ್ಯಗಳನ್ನು ಆಡಿದ್ದಾರೆ. 2000 ರ ಅಕ್ಟೋಬರ್ 3 ರಂದು ಭಾರತದ ಪರ ಚೊಚ್ಚಲ ಪಂದ್ಯ ಆಡಿದ ಯುವಿಗೆ ಈಗ 42 ವರ್ಷ ವಯಸ್ಸು. 2007 ರ ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಅವರ ಒಂದೇ ಒವರಿನಲ್ಲಿ ಆರು ಸಿಕ್ಸ್ ಗಳನ್ನು ಬಾರಿಸಿರುವ ಈ ಪ್ರತಿಭಾವಂತ ಆಲ್ ರೌಂಡರ್ 2011 ರ ವಿಶ್ವಕಪ್ ಪಂದ್ಯಾಟದಲ್ಲಿ ಒಟ್ಟು 362 ರನ್ ಹೊಡೆದು 15 ವಿಕೆಟ್ ಕಬಳಿಸಿರುವುದು ಅವರ ಸಾಮರ್ತ್ಯಕ್ಕೆ ಸಾಕ್ಷಿ. 2011 ರ ವಿಶ್ವಕಪ್ ಬಳಿಕ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದ ಯುವಿ ಆ ಕಾಯಿಲೆಯಿಂದ ಗುಣಮುಖರಾಗಿ ಮತ್ತೆ ಭಾರತ ತಂಡಕ್ಕೆ ಮರಳುತ್ತಾರೆ. ಅದು ನಿಜಕ್ಕೂ ಅದ್ಭುತ ಸಾಧನೆ. 2019 ನೇ ಇಸವಿಯಲ್ಲಿ ಕ್ರಿಕೆಟ್ ವೃತ್ತಿಗೆ ಗುಡ್ ಬಾಯ್ ಹೇಳಿದ ಯುವಿ ಭಾರತ ತಂಡದಲ್ಲಿ ಕಮ್ ಬ್ಯಾಕ್ ಮಾಡಿದ ಕಥೆಯೇ ಹಲವರಿಗೆ ಸ್ಫೂರ್ತಿ.
ಯುವರಾಜ್ ಸಿಂಗ್ ಅವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಅವರ ತಾಯಿ ಶಬನಂ “ಯುವಿ ನಿತ್ಯ ಸೈಕಲ್ಲಿನಲ್ಲಿ ಮನೆಯಿಂದ ಸ್ಟೇಡಿಯಂಗೆ ಹೋಗಿ ಬರುತ್ತಿದ್ದ. ಕ್ರಿಕೆಟ್ ಅವರ ಜೀವನದ ಭಾಗವೇ ಆಗಿತ್ತು. ವಿಶ್ವಕಪ್ ಗೆದ್ದಾಗ ಅದು ನಮಗೆಲ್ಲರಿಗೂ ಮರೆಯಲಾರದ ಅದ್ಭುತ ಕ್ಷಣಗಳು. ಅವನಲ್ಲಿ ಯಾವಾಗಲೂ ಫೈಟಿಂಗ್ ಸ್ಪಿರಿಟ್ ಇತ್ತು. ಅವನು ಯಶಸ್ಸು ಗಳಿಸಿದಾಗಲೂ, ಸೋತಾಗಲು ಸಕರಾತ್ಮಕ ಮನಸ್ಥಿತಿಯನ್ನೇ ಹೊಂದಿದ್ದ. ಯಾವಾಗಲೂ ಶ್ರಮ ವಹಿಸಿ ಆಡಿ ಮತ್ತೇ ಶಕ್ತಿಯುತವಾಗಿ ಹಿಂತಿರುಗಬೇಕೆಂಬುದು ಅವನ ಗುರಿಯಾಗಿರುತ್ತಿತ್ತು”
ಮಾಜಿ ಟೀಮ್ ಭಾರತ್ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಹಾಗೂ ಮಹಿಳಾ ಕ್ರಿಕೆಟ್ ತಂಡದ ಕಪ್ತಾನೆ ಮಿಥಾಲಿ ರಾಜ್ ಅವರ ಜೀವನಕಥೆ ಸಿನೆಮಾವಾಗಿ ಮೂಡಿಬಂದಿದೆ. ಈ ಹಂತದಲ್ಲಿ ನಿರ್ಮಾಪಕರಾದ ಭೂಷಣ್ ಹಾಗೂ ರವಿಯವರು ತನ್ನ ಜೀವನದ ಕಥೆಯನ್ನು ಸಿನೆಮಾ ಮಾಡಲು ಮುಂದೆ ಬಂದಿರುವುದು ಖುಷಿಯಾಗಿದೆ. ಈ ಮೂಲಕ ನನ್ನ ಬದುಕು ಪ್ರಪಂಚಾದ್ಯಂತ ಇರುವ ಅಭಿಮಾನಿಗಳಿಗೆ ಗೊತ್ತಾಗುತ್ತದೆ. ಕ್ರಿಕೆಟ್ ನನ್ನ ಶಕ್ತಿಯಾಗಿತ್ತು ಎಂದು ಯುವರಾಜ್ ಹೇಳಿದ್ದಾರೆ. ಒಟ್ಟಿನಲ್ಲಿ ಯುವಿ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಮತ್ತು ಈ ಸಿನೆಮಾದಲ್ಲಿ ಯುವರಾಜ್ ಸಿಂಗ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಾರಾ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ
Leave A Reply