ದಿನೇಶ್ ಗುಂಡು ರಾವ್ ಎಲ್ಲಿ ನಿದ್ದೆ ಮಾಡುತ್ತಿದ್ದಾರೆ – ಕುಂಪಲ ಪ್ರಶ್ನೆ
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡು ರಾವ್ ಎಲ್ಲಿ ನಿದ್ದೆ ಮಾಡುತ್ತಿದ್ದಾರೆ, ಕಿಡಿಗೇಡಿ ಸವಾಲು ಹಾಕಿದ್ದನ್ನು ಪ್ರಶ್ನಿಸಿದರೆ ಎಫ್‌ಐಆರ್ ದಾಖಲಿಸುತ್ತಾರೆ, ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ರೆ ಕೇಸು ಮಾಡಲ್ಪ, ಶರಣ್ ಪಂಪ್ ವೆಲ್ ಮಾತಾಡಿದ್ದರಲ್ಲಿ ತಪ್ಪೇನಿದೆ ? ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಶ್ನಿಸಿದ್ದಾರೆ.
ನಾಗಮಂಗಲದಲ್ಲಿ ಗಣಪತಿ ವಿಸರ್ಜನೆಯ ಮೆರವಣಿಗೆಯನ್ನು ಧಾರ್ಮಿಕ ಕ್ಷೇತ್ರ ಇದೆಯೆಂದು ಬರಬಾರದು ಅಂತ ಹೇಳುತ್ತಾರೆ. ಧಾರ್ಮಿಕ ಕ್ಷೇತ್ರ ಇದೆಯೆಂದು ಮೆರವಣಿಗೆ ಹೋಗಬಾರದು ಅಂತ ಹೇಳಿದರೆ, ಯಾವ ರಸ್ತೆಯಲ್ಲೂ ಯಾವುದೇ ಮೆರವಣಿಗೆ ನಡೆಸುವುದಕ್ಕೆ ಸಾಧ್ಯವಿಲ್ಲ. ಇದೇ ವಿಚಾರವನ್ನು ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಪ್ರಶ್ನಿಸಿದ್ದಾರೆ. ಈದ್ ಮೆರವಣಿಗೆಯನ್ನು ಪ್ರಶ್ನೆ ಮಾಡಿದರೆ ಏನಾದೀತು ಎಂದು ಪ್ರಶ್ನೆ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ. ಇದಕ್ಕಾಗಿ ಎಫ್‌ಐಆರ್ ದಾಖಲಿಸಿದ್ದನ್ನು ಬಿಜೆಪಿ ಖಂಡಿಸುತ್ತದೆ ಎಂದು ಸತೀಶ್ ಕುಂಪಲ ಹೇಳಿದ್ದಾರೆ.
ಸುದ್ದಿಗೋಷ್ಟಿ ಸಂದರ್ಭದಲ್ಲಿ ಈ ಕುರಿತು ಕೇಳಿದ ಪ್ರಶ್ನೆಗೆ, ಬಿಸಿ ರೋಡಿಗೆ ಬನ್ನಿ ನೋಡಿಕೊಳ್ಳುತ್ತೇವೆ ಎಂದು ಸವಾಲು ಹಾಕುವುದು ಉದ್ಧಟತನ. ಬಿಸಿ ರೋಡ್ ಏನು ಪಾಕಿಸ್ತಾನದಲ್ಲಿರುವ ಜಾಗ ಅಲ್ಲ, ಭಾರತದ್ದೇ ನೆಲ. ಅಂಥ ಸವಾಲು ಹಾಕಿದ ಸಂದರ್ಭದಲ್ಲಿ ಕಾರ್ಯಕರ್ತರು ಆಕ್ರೋಶದಿಂದ ಸೇರಿದ್ದು ಅಲ್ಲಿಗೆ ಮುಖಂಡರು ಹೋಗುವುದು ಸಹಜ ಪ್ರಕ್ರಿಯೆ. ಹಾಗೆಂದ ಮಾತ್ರಕ್ಕೆ ಹಿಂದು ಸಂಘಟನೆಯ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲು ಮಾಡುತ್ತಾರಂದ್ರೆ ಕಾಂಗ್ರೆಸ್ ಮಾನಸಿಕ ಸ್ಥಿತಿಯೇನೆಂದು ಅರ್ಥವಾಗುತ್ತದೆ. ಬಂಟ್ವಾಳದಲ್ಲಿ ಒಬ್ಬ ಜನಪ್ರತಿನಿಧಿಯಾಗಿದ್ದ ವ್ಯಕ್ತಿಯೊಬ್ಬ ಕಿಡಿಗೇಡಿ ರೀತಿ ವರ್ತಿಸಿದ್ದಾನೆ.
ಪ್ರಜಾಪ್ರಭುತ್ವ ದೇಶದಲ್ಲಿ ಸವಾಲು ಹಾಕುವುದನ್ನು ಯಾರೂ ಒಪ್ಪಿಕೊಳ್ಳಲ್ಲ. ಇಷ್ಟೆಲ್ಲ ಆಗುತ್ತಿರುವಾಗ ಉಸ್ತುವಾರಿ ಸಚಿವರು ಎಲ್ಲಿ ನಿದ್ದೆ ಮಾಡುತ್ತಿದ್ದಾರೆ, ಕಾಂಗ್ರೆಸಿಗರು ಈಗ ಯಾಕೆ ಮಾತನಾಡುತ್ತಿಲ್ಲ. ರಾಜ್ಯದ ಹಲವು ಕಡೆಗಳಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿ ದೇಶ ವಿರೋಧಿ ಕೃತ್ಯ ನಡೆಸಿದ್ದಾರೆ. ಕಾಂಗ್ರೆಸ್ ಸರಕಾರ ಯಾಕೆ ಅವರ ಮೇಲೆ ಕ್ರಮ ಕೈಗೊಳ್ತಿಲ್ಲ. ಇದನ್ನೆಲ್ಲ ನಾವು ಭಾರತದಲ್ಲಿ ಪ್ರಶ್ನೆ ಮಾಡದೆ, ಬೇರೆ ಕಡೆ ಮಾಡೋಕಾಗುತ್ತಾ ಎಂದು ಸತೀಶ್ ಕುಂಪಲ ಹೇಳಿದ್ದಾರೆ.
ದೇಶ ವಿರೋಧಿ ಹೇಳಿಕೆ ನೀಡಿರುವ ಎಂಎಲ್ಸಿ ಒಬ್ಬರ ಮೇಲೆ ಕೇಸು ದಾಖಲಿಸುವ ಧೈರ್ಯ ಇವರಿಗಿಲ್ಲ. ರಾಜ್ಯದಲ್ಲಿ ಕೋಮು ದ್ವೇಷ ಬೆಳೆಸಿ ಸಂಘರ್ಷಕ್ಕೆ ಎಡೆ ಮಾಡುತ್ತಿರುವುದೇ ರಾಜ್ಯ ಸರಕಾರ. ಇದರ ವಿರುದ್ಧ ಹಿಂದು ಸಂಘಟನೆ ಹೋರಾಟಕ್ಕೆ ಧುಮುಕಿದ್ದು, ಇದಕ್ಕೆ ಬಿಜೆಪಿ ಸಂಪೂರ್ಣ ಬೆಂಬಲಿಸುತ್ತದೆ ಎಂದು ಸತೀಶ್ ಕುಂಪಲ ಹೇಳಿದ್ದಾರೆ.
Leave A Reply