ಆವತ್ತು ಮಗಳನ್ನು ಪಕ್ಷಕ್ಕೆ ತೆಗೆದುಕೊಳ್ಳದೇ ಇದ್ದ ಡಿಕೆ ಕಾದಿದ್ದು ತಂದೆಗಾಗಿ!

ಕೆಲವೇ ತಿಂಗಳುಗಳ ಹಿಂದಿನ ವಿಷಯ. ನಿಶಾ ಎನ್ನುವ ಯುವತಿ ಮೇಲಿನಿಂದ ಮೇಲೆ ಕಾಂಗ್ರೆಸ್ ಕಚೇರಿಗೆ, ಕೆಪಿಸಿಸಿ ಅಧ್ಯಕ್ಷರ ಕಚೇರಿಗೆ, ಮನೆಗೆ ಹೋಗಿ ತನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ದಂಬಾಲು ಬೀಳುತ್ತಿದ್ದಳು. ಅದೇ ಸಮಯಕ್ಕೆ ಮಾಧ್ಯಮಗಳ ಮುಂದೆಯೂ ಕಾಣಿಸಿಕೊಂಡು ತನ್ನ ತಂದೆಯ ವಿರುದ್ಧ ಕೆಂಡಕಾರುತ್ತಿದ್ದಳು. ಅವಳು ಎಷ್ಟು ಗೋಗರೆದರೂ ಡಿ ಕೆ ಶಿವಕುಮಾರ್ ಅವಳನ್ನು ಪಕ್ಷಕ್ಕೆ ವಿದ್ಯುಕ್ತವಾಗಿ ಸೇರಿಸಿಕೊಳ್ಳಲೇ ಇಲ್ಲ. ಏನೋ ಮನೆಯಲ್ಲಿ ಸಮಸ್ಯೆಯಾಗಿದೆ. ಅದರಲ್ಲಿ ನಾವು ಬೇಳೆ ಬೇಯಿಸಿಕೊಳ್ಳುವುದು ಸರಿಯಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಇದಾಗಿ ಕೆಲವೇ ತಿಂಗಳೊಳಗೆ ಅವಳ ತಂದೆಯೇ ಕಾಂಗ್ರೆಸ್ಸಿಗೆ ಸೇರಿ ಚನ್ನಪಟ್ಟಣದ ಅಭ್ಯರ್ಥಿಯಾಗಿದ್ದಾರೆ. ಇದನ್ನು ರಾಜಕೀಯ ಎನ್ನುತ್ತಾರೆ. ಅಷ್ಟಕ್ಕೂ ಆ ಯುವತಿಯ ಹೆಸರು ನಿಶಾ ಮತ್ತು ಅವಳ ತಂದೆಯ ಹೆಸರು ಸಿ.ಪಿ.ಯೋಗೇಶ್ವರ್.
ಎಂಟು ಚುನಾವಣೆ, ಐದು ಗೆಲುವು, ಸ್ವತಂತ್ರ ಸ್ಪರ್ಧೆಯಿಂದ ಆರಂಭವಾಗಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಜೆಪಿಗೆ ಹೋಗಿ ಈಗ ಮತ್ತೆ ಕಾಂಗ್ರೆಸ್ ಗೂಡಿನೊಳಗೆ ಸೇರಿರುವ ಯೋಗೇಶ್ವರ್ ಅವರಿಗೆ ಒಂದು ಲೆಕ್ಕದಲ್ಲಿ ಒಂದೂವರೆ ದಶಕಗಳ ಬಳಿಕ ಮರಳಿ ತವರು ಮನೆಗೆ ಬಂದ ಸಂಭ್ರಮ. ಅಷ್ಟಕ್ಕೂ ಯೋಗೇಶ್ವರ್ ಅವರು ಯಾವ ಪಕ್ಷದಿಂದ ಅಭ್ಯರ್ಥಿಯಾದರೂ ಗೆಲುವು ನಿಶ್ಚಿತವೇ? ಈ ಪ್ರಶ್ನೆ ಎಲ್ಲಾ ಪಕ್ಷಗಳಲ್ಲಿಯೂ ಗಿರಕಿ ಹೊಡೆಯುತ್ತಲೇ ಇತ್ತು. 1999 ರಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಬಲವಾದ ಗಾಳಿ ಬೀಸಿ ಎಸ್ ಎಂ ಕೃಷ್ಣ ಅವರು ಅಭೂತಪೂರ್ವ ರೀತಿಯಲ್ಲಿ ಗೆದ್ದು ಮುಖ್ಯಮಂತ್ರಿ ಆದರಲ್ಲ, ಆವತ್ತು ಕಾಂಗ್ರೆಸ್ಸಿನ ಬಿರುಗಾಳಿಯ ಎದುರು ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಗೆದ್ದವರು ಇದೇ ಸಿ.ಪಿ.ಯೋಗೇಶ್ವರ್. ಅದರ ನಂತರ ಅವರು ಮುಂದಿನ ಎರಡು ಚುನಾವಣೆಗಳನ್ನು ಕಾಂಗ್ರೆಸ್ ಪಕ್ಷದಿಂದ ಗೆದ್ದುಕೊಳ್ಳುತ್ತಾರೆ. ನಂತರ ಕಾಂಗ್ರೆಸ್ ಬಿಟ್ಟು ಭಾರತೀಯ ಜನತಾ ಪಾರ್ಟಿಯನ್ನು ಸೇರುತ್ತಾರೆ. ಆದರೆ 2009 ರಲ್ಲಿ ನಡೆದ ಉಪಚುನಾವಣೆಯಲ್ಲಿ ಜನ ಇವರ ವಿರುದ್ಧ ಮೊದಲ ಬಾರಿಗೆ ಮತ ಚಲಾಯಿಸಿ ಆ ಕ್ಷೇತ್ರವನ್ನು ಜಾತ್ಯಾತೀತ ಜನತಾದಳಕ್ಕೆ ನೀಡುತ್ತಾರೆ. 2011 ರಲ್ಲಿ ವಿಧಾನಸಭಾ ಸ್ಪೀಕರ್ ಹಾಗೂ ಸುಪ್ರೀಂಕೋರ್ಟ್ ನಡುವೆ ಶಾಸಕರ ಅನರ್ಹತೆ ವಿಚಾರದಲ್ಲಿ ನಡೆದ ಪ್ರಕರಣದ ಸಂಬಂಧ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತದೆ. ಅದರಲ್ಲಿ ಒಂದು ಚೆನ್ನಪಟ್ಟಣ. ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಯೋಗೀಶ್ವರ್ ಮತ್ತೆ ಗೆಲುವಿನ ನಗೆ ಬೀರುತ್ತಾರೆ. 2013 ರಲ್ಲಿ ಆಶ್ವರ್ಯ ಎನ್ನುವಂತೆ ಯೋಗೇಶ್ವರ್ ಅವರಿಗೆ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಬಾಗಿಲು ಬಂದ್ ಮಾಡುತ್ತವೆ. ಆದರೆ ಯೋಗೇಶ್ವರ್ ಅದನ್ನು ಕ್ಯಾರೇ ಮಾಡದೇ ಸಮಾಜವಾದಿ ಪಕ್ಷದಿಂದ ಕಣಕ್ಕೆ ಇಳಿಯುತ್ತಾರೆ ಮತ್ತು ಅನಿತಾ ಕುಮಾರಸ್ವಾಮಿಯವರನ್ನು ಸೋಲಿಸಿ ಗೆಲುವಿನ ಪತಾಕೆ ಹಾರಿಸುತ್ತಾರೆ. 2018 ರಲ್ಲಿ ಮತ್ತು 2023 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತ ಯೋಗೇಶ್ವರ್ 2018 ರಲ್ಲಿ ಮತಎಣಿಕೆಯ ಮುನ್ನಾದಿನವೇ ತಾವು ಈ ಬಾರಿ ಗೆಲುವುದಿಲ್ಲ ಎಂದು ಬಹಿರಂಗವಾಗಿ ಸುದ್ದಿಗೋಷ್ಟಿಯಲ್ಲಿ ಒಪ್ಪಿಕೊಂಡಿದ್ದರು. 2023 ರಲ್ಲಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರನ್ನು ಸೋಲಿಸಿ 2013 ರಲ್ಲಿ ತಮ್ಮ ಪತ್ನಿಯನ್ನು ಸೋಲಿಸಿದ ಯೋಗೇಶ್ವರ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರೆ. ಹೇಗೆ ಯೋಗೇಶ್ವರ್ ಅವರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಶಕ್ತಿ ಗೊತ್ತಿದೆಯೋ ಅದೇ ರೀತಿಯಲ್ಲಿ ಎಲ್ಲಾ ಪಕ್ಷಗಳಿಗೂ ಯೋಗೇಶ್ವರ್ ಶಕ್ತಿ ಗೊತ್ತಿದೆ. ಅವರು ಯಾವ ಪಕ್ಷದಲ್ಲಿದ್ದರೂ ಸ್ಪರ್ಧೆ ಎದುರಾಳಿಗೆ ಕಠಿಣ ಎನ್ನುವ ವಿಚಾರ ಗೊತ್ತಿಲ್ಲದಷ್ಟು ದಡ್ಡತನದ ರಾಜಕಾರಣಿ ಯಾವ ಪಕ್ಷದಲ್ಲಿಯೂ ಇಲ್ಲ. ಆದರೆ ಅದನ್ನು ಮೊದಲು ಅರ್ಥ ಮಾಡಿಕೊಂಡಿದ್ದು ಕಾಂಗ್ರೆಸ್. ಜೆಡಿಎಸ್ ನಿರ್ಧಾರ ತೆಗೆದುಕೊಳ್ಳುವಷ್ಟರಲ್ಲಿ ತಡವಾಗಿದೆ. ಇನ್ನು ಉಳಿದದ್ದು ಮತದಾರರಿಗೆ ಬಿಟ್ಟಿದ್ದು!
Leave A Reply