ಬಿಜೆಪಿ ಶಾಸಕಿ, ಮಾಜಿ ಸಂಸದರ ಪುತ್ರನ ಜಾಗಕ್ಕೂ ವಕ್ಫ್ ಆತಂಕ!
ಉತ್ತರ ಕರ್ನಾಟಕದ ಅನೇಕ ರೈತರ ಭೂಮಿ ವಕ್ಫ್ ಬೋರ್ಡಿನದ್ದು ಎನ್ನುವ ವಿಷಯ ಈಗಾಗಲೇ ಸಾಕಷ್ಟು ಚರ್ಚೆ, ಹೋರಾಟ, ವಾದ, ವಿವಾದಗಳಿಗೆ ಕಾರಣವಾಗುತ್ತಿದ್ದಂತೆ ಈಗ ಈ ವಿಷಯ ಅಕ್ಷರಶ: ಭಾರತೀಯ ಜನತಾ ಪಾರ್ಟಿಯ ಜನಪ್ರತಿನಿಧಿಯ ಮನೆಬಾಗಿಲಿನ ತನಕ ಬಂದಿರುವುದು ನಿಜಕ್ಕೂ ಕುತೂಹಲಕರ ವಿಷಯವಾಗಿದೆ. ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ರೈತರ ಭೂಮಿಯ ಹಕ್ಕಿನ ವಿಷಯದಲ್ಲಿ ಈಗಾಗಲೇ ಗೊಂದಲ ಏರ್ಪಟ್ಟಿದ್ದು, ಅಲ್ಲಿನ ಸ್ಥಳೀಯ ಜಿಲ್ಲಾಡಳಿತ, ರಾಜ್ಯ ಸರಕಾರ ಮತ್ತು ವಿಪಕ್ಷಗಳ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ. ಇಲ್ಲಿಯ ತನಕ ರೈತರು ಈ ವಿಷಯದಲ್ಲಿ ಪ್ರತಿಭಟನೆ ಮಾಡುತ್ತಿದ್ದರೆ ಈಗ ಬಿಜೆಪಿಯ ಪ್ರತಿಷ್ಟಿತ ಕುಟುಂಬದ ಬುಡಕ್ಕೆ ವಕ್ಫ್ ಭೂಮಿಯ ವಿವಾದ ಬಂದಂತೆ ಕಾಣುತ್ತಿದೆ. ಚಿಕ್ಕೋಡಿಯ ಜೊಲ್ಲೆ ಕುಟುಂಬ ಗೊತ್ತಿಲ್ಲದವರು ಯಾರೂ ಇಲ್ಲ. ರಾಜಕೀಯವಾಗಿ, ಸಾಮಾಜಿಕವಾಗಿ ಪ್ರಬಲ ಪ್ರಭಾವಿ ಕುಟುಂಬವದು. ಅಂತಹ ಕುಟುಂಬದ ಸದಸ್ಯರಿಗೂ ಈಗ ವಕ್ಫ್ ಬಿಸಿ ತಟ್ಟಿದೆ.
ಚಿಕ್ಕೋಡಿಯ ಜೊಲ್ಲೆ ಕುಟುಂಬದ ಜಮೀನಿನಲ್ಲಿಯೂ ವಕ್ಫ್ ಹೆಸರು ನಮೂದಿಸಿದೆ. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರ ಪುತ್ರ ಬಸವಪ್ರಸಾದ ಅವರ ಹೆಸರಿನಲ್ಲಿರುವ ಜಮೀನು ವಕ್ಫ್ ಬೋರ್ಡಿಗೆ ಸೇರಿದ್ದು ಎಂದು ಹೆಸರಿಸಲಾಗಿದೆ. ಸ್ವಗ್ರಾಮ ಯಕ್ಸಂಬಾ ಗ್ರಾಮದ ಜಮೀನು ಮತ್ತು ಅದರೊಂದಿಗೆ ಜೊಲ್ಲೆ ಕುಟುಂಬದ ಹಲವು ಜನರ ಜಮೀನಿಗೂ ಇದೀಗ ಆತಂಕ ಎದುರಾಗಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಹಲವಾರು ರೈತರ ಜಮೀನಿಗೆ ವಕ್ಫ್ ಹೆಸರು ನಮೂದು ಮಾಡಲಾಗಿದೆ. ಇಲ್ಲಿಯ ತನಕ ಕೃಷಿಕರ, ಜನಸಾಮಾನ್ಯರ ಜಮೀನುಗಳು ಮಾತ್ರ ವಕ್ಫ್ ಬೋರ್ಡಿನ ಹೆಸರಿಗೆ ನಮೂದನೆಯಾಗಿದ್ದು, ಈಗ ಪ್ರಭಾವಿಗಳ ಭೂಮಿಯೂ ಅದೇ ದಾರಿಯಲ್ಲಿ ಸಾಗುತ್ತಿರುವುದು ಈ ಒಟ್ಟು ಪ್ರಕರಣವನ್ನು ಇನ್ನಷ್ಟು ಕಗ್ಗಂಟಾಗಿ ಪರಿವರ್ತಿಸಿದೆ.
Leave A Reply