ನಾನು ಭಾರತದಲ್ಲಿ ಅತೀ ಹೆಚ್ಚು ಟ್ರೋಲ್ ಒಳಗಾದ ನ್ಯಾಯಾಧೀಶ ಎಂದವರು ಯಾರು?
ಭಾರತದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ನವೆಂಬರ್ 8 ರಂದು ನಿವೃತ್ತಿ ಹೊಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ತಮ್ಮ ವಿದಾಯ ಭಾಷಣದಲ್ಲಿ ಅವರು ಹೇಳಿದ ಒಂದು ವಿಷಯ ನಿಜಕ್ಕೂ ಅಲ್ಲಿದ್ದ ಅನೇಕರ ಹುಬ್ಬೇರಿಸುವಂತೆ ಮಾಡಿತು. ” ಭಾರತದಲ್ಲಿ ಅತೀ ಹೆಚ್ಚು ಟ್ರೋಲ್ ಗೆ ಒಳಗಾದ ನ್ಯಾಯಾಧೀಶ ಯಾರಾದರೂ ಇದ್ದರೆ ಅದು ತಾನು” ಎಂದು ಜಸ್ಟೀಸ್ ಚಂದ್ರಚೂಡ್ ಹೇಳಿದ್ದಾರೆ. ಅದರೊಂದಿಗೆ ಅವರು ಶಾಯರಿಯೊಂದನ್ನು ಉದಾಹರಣೆಯಾಗಿ ನೀಡಿದ್ದು, ನಮ್ಮ ವರ್ಚಸ್ಸು ಹೆಚ್ಚಿಸಲು ಶತ್ರುಗಳ ಕೊಡುಗೆ ಮುಖ್ಯ ಎನ್ನುವ ಅರ್ಥದ ಶಾಯರಿಯನ್ನು ಹೇಳಿದ್ದಾರೆ. ಇನ್ನು ತಮ್ಮನ್ನು ಟ್ರೋಲ್ ಮಾಡುವವರನ್ನೇ ಕೆಣಕಿದ ಜಸ್ಟೀಸ್ ಚಂದ್ರಚೂಡ್ ಅವರು ಮುಂದಿನ ಸೋಮವಾರದಿಂದ ತಮ್ಮನ್ನು ಟ್ರೋಲ್ ಮಾಡುವವರು ನಿರುದ್ಯೋಗಿಗಳಾಗುತ್ತಾರೆ ಎಂದು ಕುಹಕವಾಡಿದ್ದಾರೆ. ಆ ಟ್ರೋಲ್ ಮಾಡುತ್ತಿದ್ದವರು ಮುಂದಿನ ದಿನಗಳಲ್ಲಿ ಏನು ಕೆಲಸ ಮಾಡಲಿದ್ದಾರೆ ಎಂದು ಯೋಚಿಸುವಾಗ ಆಶ್ಚರ್ಯವಾಗುತ್ತಿದೆ ಎಂದು ಲಘುಹಾಸ್ಯ ಮಾಡಿದ್ದಾರೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರು ಭಾರತದ ಇತಿಹಾಸದಲ್ಲಿ ಯಾವತ್ತೂ ಅಳಿಸಲಾಗದ ತೀರ್ಪುಗಳನ್ನು ನೀಡಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದಾರೆ. ರಾಮ ಮಂದಿರವನ್ನು ಅಯೋಧ್ಯೆಯ ರಾಮಲಲ್ಲಾ ಹುಟ್ಟಿದ ಜಾಗದಲ್ಲಿಯೇ ನಿರ್ಮಿಸುವ ತೀರ್ಪನ್ನು ನೀಡಿ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಅವರು ಪ್ರಸಿದ್ಧರಾಗಿದ್ದರು. ಐನೂರು ವರ್ಷಗಳ ಸುಧೀರ್ಘ ಇತಿಹಾಸದ ಹೋರಾಟದಲ್ಲಿ ರಾಮಜನ್ಮಭೂಮಿ ವಿವಾದ ಕೊನೆಗೊಂಡಿದ್ದೇ ನ್ಯಾಯಮೂರ್ತಿ ಚಂದ್ರಚೂಡ್ ಅವರ ಅವಧಿಯಲ್ಲಿ. ಇನ್ನು ಸಂವಿಧಾನದ ಆರ್ಟಿಕಲ್ 370 ರದ್ದುಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಎತ್ತಿಹಿಡಿದು ಕಾಶ್ಮೀರ ಯಾವತ್ತಿಗೂ ಭಾರತದ ಅವಿಭಾಜ್ಯ ಅಂಗ ಎನ್ನುವ ತೀರ್ಪು ಸಾರಿದ್ದು ಚಂದ್ರಚೂಡ್ ಅವರ ಅವಧಿಯಲ್ಲಿಯೇ. ಹೀಗೆ ಅನೇಕ ಮೈಲಿಗಲ್ಲು ಎನಿಸುವಂತಹ ತೀರ್ಪನ್ನು ನೀಡಿರುವ ಜಸ್ಟೀಸ್ ಚಂದ್ರಚೂಡ್ ಅವರ ಮನೆಗೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದು ಇನ್ನೊಂದು ಅಧ್ಯಾಯ.
ಚಂದ್ರಚೂಡ್ ಅವರ ಮನೆಯಲ್ಲಿ ಗಣೇಶ ಹಬ್ಬವನ್ನು ಆಚರಿಸುವ ದಿನ ಸ್ವತ: ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿ ತಮ್ಮ ಕೈಯಾರೆ ಗಣಪತಿಯ ಪೂಜೆಯನ್ನು ಮಾಡಿದ ಘಟನೆಯ ಬಗ್ಗೆ ಚಂದ್ರಚೂಡ್ ಅವರು ಇನ್ನಷ್ಟು ಸುದ್ದಿಗೆ ಕಾರಣವಾಗಿದ್ದರು. ಅದಕ್ಕೆ ಸ್ಪಷ್ಟನೆ ನೀಡಿದ ನ್ಯಾಯಮೂರ್ತಿಗಳು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪ್ರತ್ಯೇಕ ಅಂಗಗಳಾಗಿದ್ದರೂ ಅವರು ಒಬ್ಬರನ್ನೊಬ್ಬರು ಭೇಟಿಯಾಗಬಾರದು ಎನ್ನುವ ನಿಯಮವೇನಿಲ್ಲ. ನಮ್ಮದು ಪ್ರತ್ಯೇಕ ಅಂಗವಾಗಿದ್ದರೂ ನಾವು ಪರಸ್ಪರ ಕಾರ್ಯಕ್ರಮಗಳಿಗೆ ಹೋಗುವುದು ತಪ್ಪಲ್ಲ ಎಂದು ಸಮರ್ಥನೆ ನೀಡಿದ್ದರು. ಒಟ್ಟಿನಲ್ಲಿ ಭಾರತದ ಇತಿಹಾಸದಲ್ಲಿ ಜನರು ಎಂದಿಗೂ ಮರೆಯಲಾರದ ತೀರ್ಪುಗಳನ್ನು ನೀಡಿ ಜಸ್ಟೀಸ್ ಚಂದ್ರಚೂಡ್ ಅವರು ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ.
Leave A Reply