ಯೂಟ್ಯೂಬ್ ವಿಡಿಯೋ ವೀಕ್ಷಿಸಿ ಬಾಬಾ ಸಿದ್ಧಿಕಿ ಹತ್ಯೆ!
ಮಹಾರಾಷ್ಟ್ರದ ಶಾಸಕ, ಪ್ರಭಾವಿ ನಾಯಕ ಬಾಬಾ ಸಿದ್ಧಿಕಿ ಹತ್ಯೆಯ ಆರೋಪಿಗಳಾದ ಮೂವರು ಶೂಟರ್ ಗಳು ಮುಂಬೈನ ಕುರ್ಲಾ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಈ ವೇಳೆ ಯೂಟ್ಯೂಬ್ ನಲ್ಲಿ ಟ್ಯುಟೋರಿಯಲ್ ವಿಡಿಯೋಗಳನ್ನು ನೋಡಿ ಬಂದೂಕುಗಳನ್ನು ಹೇಗೆ ಬಳಸಬೇಕೆಂದು ಕಲಿತಿದ್ದರು ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿಗಳು ಸುಮಾರು 4 ವಾರಗಳ ಕಾಲ ಅಂತಹ ವಿಡಿಯೋಗಳನ್ನು ವೀಕ್ಷಿಸಿ ಅಧ್ಯಯನ ನಡೆಸಿದ್ದರು ಎನ್ನುವ ವಿಷಯವೂ ವಿಚಾರಣೆಯಲ್ಲಿ ತಿಳಿದುಬಂದಿದೆ.
ವಿಚಾರಣೆ ವೇಳೆ ಆರೋಪಿ ಶಿವಕುಮಾರ್ ಎಂಬುವವನಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಇರುವುದು ತಿಳಿದುಬಂದಿದೆ. ಶಿವಕುಮಾರನಿಗೆ ಲಾರೆನ್ಸ್ ನ ಆಪ್ತ ಸಹಾಯಕನಾಗಿದ್ದ ಶುಭಂ ಲೋಂಕರ್ ಎನ್ನುವ ವ್ಯಕ್ತಿ ಲಾರೆನ್ಸ್ ಬಿಷ್ಣೋಯ್ ಸಹೋದರ್ ಅನ್ಮೋಲ್ ಬಿಷ್ಣೋಯ್ ಜೊತೆ ಸಂಪರ್ಕ ಸಾಧಿಸಲು ಸಹಕರಿಸಿದ್ದ. ಅನ್ಮೋಲ್ ಸೂಚನೆಯ ಮೇರೆಗೆ ಈ ಹತ್ಯೆ ನಡೆದಿದೆ ಎನ್ನುವ ವಿಷಯ ಪೊಲೀಸರಿಗೆ ವಿಚಾರಣೆಯಲ್ಲಿ ತಿಳಿದುಬಂದಿದೆ.
ಅಕ್ಟೋಬರ್ 12 ರಂದು ಮುಂಬೈಯ ಬಾಂದ್ರಾದಲ್ಲಿರುವ ಪುತ್ರ ಶಾಸಕ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಸಿದ್ದಿಕಿ ಹತ್ಯೆಗೆ 9.9 ಎಂ ಎಂ ಪಿಸ್ತೂಲ್ ಬಳಸಲಾಗಿತ್ತು. ಒಟ್ಟು ಆರು ಸುತ್ತುಗಳಲ್ಲಿ ಗುಂಡು ಹಾರಿಸಲಾಗಿತ್ತು. ಸಿದ್ದಿಕಿ ಹತ್ಯೆ ಬಳಿಕ ಪರಾರಿಯಾಗಿದ್ದ ಪ್ರಮುಖ ಆರೋಪಿ ನೇಪಾಳಕ್ಕೆ ಪಲಾಯನ ಮಾಡಲು ಪ್ಲಾನ್ ಮಾಡಿಕೊಂಡಿದ್ದ. ಅಷ್ಟರಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಹಾಗೂ ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಒಟ್ಟಿನಲ್ಲಿ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ.
Leave A Reply