25 ರ ನಂತರ ಹೆಣ್ಣು ಮದುವೆಯಾಗಬಾರದು ಎನ್ನುವ ನಿಯಮ ತರಲು ಆಗ್ರಹಿಸಿದ ನಾಯಕ!
ಜನಸಂಖ್ಯೆ ಒಂದು ದೇಶದ ಸಂಪತ್ತು. ಅದು ಲೆಕ್ಕಕ್ಕಿಂತ ಹೆಚ್ಚಾದರೆ ಆಪತ್ತು. ಕಡಿಮೆಯಾದರೆ ವಿಪತ್ತು. ಚೀನಾ ಮತ್ತು ಭಾರತದಲ್ಲಿ ಜನಸಂಖ್ಯೆ ಲೆಕ್ಕಕ್ಕಿಂತ ಹೆಚ್ಚಾಗಿದ್ದರೆ ಜಪಾನ್ ನಂತಹ ರಾಷ್ಟ್ರಗಳು ಹೇಗಾದರೂ ಮಾಡಿ ಜನಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇಲ್ಲಿ ಪುರುಷರು ಮತ್ತು ಯುವತಿಯರು ಮದುವೆಯಾದ ನಂತರ ಮಕ್ಕಳನ್ನು ಹುಟ್ಟಿಸಲು ಅಷ್ಟಾಗಿ ಆಸಕ್ತಿಯನ್ನು ತೋರಿಸುತ್ತಿಲ್ಲ. ಅನೇಕರು ತುಂಬಾ ತಡವಾಗಿ ಮದುವೆಯಾಗುತ್ತಿದ್ದಾರೆ ಮತ್ತು ಮಕ್ಕಳಿಗೆ ಜನ್ಮ ನೀಡುವ ವಿಷಯದಲ್ಲಿ ನಿರಾಸಕ್ತಿಯನ್ನು ತೋರಿಸುತ್ತಿದ್ದಾರೆ. ಅದರಿಂದ ಅಲ್ಲಿನ ಸರಕಾರ ಚಿಂತೆಗೆ ಬಿದ್ದಿದೆ. ಯುವಜನಾಂಗದ ಸಂಖ್ಯೆ ಅಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸರಾಸರಿ 1.20 ಮಕ್ಕಳ ಜನನ ಪ್ರಮಾಣ ಇದ್ದು, ಇದರಿಂದ ಮುಂದೇನು ಎಂಬ ಪ್ರಶ್ನೆ ಅಲ್ಲಿ ಪೆಡಂಭೂತವಾಗಿ ಆಡಳಿತಗಾರರನ್ನು ಕಾಡುತ್ತಿದೆ.
ಜಪಾನ್ ದೇಶದ ಕನ್ಸರವೇಟಿವ್ ಪಕ್ಷದ ಸ್ಥಾಪಕ ನಾಒಕಿ ಹೈಕುಟಾ ಎನ್ನುವ ರಾಜಕಾರಣಿ ಈ ಜನಸಂಖ್ಯೆಯನ್ನು ಹೆಚ್ಚಿಸಲು ವಿಭಿನ್ನ ಐಡಿಯಾವೊಂದನ್ನು ಅವಿಷ್ಕರಿಸಿದ್ದಾರೆ. ಅವರ ಪ್ರಕಾರ ಹೆಣ್ಣುಮಕ್ಕಳಿಗೆ 18 ವರ್ಷದ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ನಿಷೇಧಿಸಬೇಕು. ಇದರಿಂದ ಅವರು ಮಕ್ಕಳನ್ನು ಹುಟ್ಟಿಸಲು ಹೆಚ್ಚು ಏಕಾಗ್ರತೆಯನ್ನು ಹೊಂದಲು ಸಮಯ ಸಿಗಲಿದೆ. ಇನ್ನು 25 ವರ್ಷಗಳ ನಂತರ ಮದುವೆಯಾಗುವುದನ್ನು ನಿಷೇಧಿಸಬೇಕು. ಆಗ ಜನಸಂಖ್ಯೆ ಹೆಚ್ಚಳವಾಗುತ್ತದೆ ಎಂದು ಅವರು ಹೇಳಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಹೈಕುಟಾ ಅವರ ಈ ಅಭಿಪ್ರಾಯವನ್ನು ವಿರೋಧಿಸಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಐಡಿಯಾಗಳನ್ನು ಹೇಳಲು ಹೇಗೆ ತಾನೇ ಮನಸ್ಸಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಯಾಮಾನ್ಸೀ ಗಾಕುನ್ ವಿಶ್ವವಿದ್ಯಾನಿಲಯದ ಅಧ್ಯಾಪಕಿ ಸುಮೈ ಕಾವಾಕಾಮಿ ಈ ಬಗ್ಗೆ ಪ್ರತಿಕ್ರಿಯಿಸಿ ” ಜಪಾನಿನ ರಾಜಕಾರಣಿಯೊಬ್ಬರು ಹೀಗೆ ಹೇಳುತ್ತಾರೆ ಎನ್ನುವುದೇ ನಾಚಿಕೆಗೇಡಿನ ಸಂಗತಿ. ಇದು ಒಂದು ರೀತಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಇನ್ನೊಂದು ರೂಪವಾಗಲಿದೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು 30 ವರ್ಷದೊಳಗೆ ಮಕ್ಕಳನ್ನು ಮಾಡಿಕೊಳ್ಳದಿದ್ದರೆ ಅಂತವರ ಗರ್ಭಾಕೋಶವನ್ನು ತೆಗೆಯಬೇಕು ಎನ್ನುವ ಕಠಿಣ ನಿಯಮಗಳ ಬಗ್ಗೆನೂ ಹೇಳಿರುವ ಹೈಕುಟಾ ಅವರ ಬಗ್ಗೆ ಸಿನೆಮಾ ತಾರೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವನ್ನು ಮಾಡಿಕೊಳ್ಳದವರ ಗರ್ಭಾಕೋಶವನ್ನು ತೆಗೆಯುವುದು ಎನ್ನುವುದು ಮಕ್ಕಳನ್ನು ಹೆಚ್ಚಿಸಲು ಮಾಡುವ ಆತಂಕಕಾರಿ ಸೂಚನೆ ಎಂದು ಹೈಕುಟಾ ಅಂದುಕೊಂಡಿದ್ದರೆ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ ಎಂದಿರುವ ನಟಿಯರು ಜನಸಂಖ್ಯೆ ಕಡಿಮೆಯಾಗಲು ಕೇವಲ ಹೆಣ್ಣುಮಕ್ಕಳು ಮಾತ್ರ ಕಾರಣ ಎಂದು ಅಂದುಕೊಳ್ಳುವುದೇ ಬಾಲಿಶತನ ಎಂದಿದ್ದಾರೆ.
ಸದ್ಯ ಹೈಕುಟಾ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಮತ್ತು ತಮ್ಮ ಹೇಳಿಕೆಯಿಂದ ನೊಂದಿರುವ ಹೆಣ್ಣುಮಕ್ಕಳ ಕ್ಷಮೆ ಕೇಳಿದ್ದಾರೆ. ಇನ್ನು ಜಪಾನಿನ ಹೆಣ್ಣುಮಕ್ಕಳು ಮಾತನಾಡಿ, ನಾವು ಒಂದು ವೇಳೆ ಹೈಕುಟಾ ಹೇಳಿಕೆಯನ್ನು ವಿರೋಧಿಸದಿದ್ದರೆ ಜಪಾನಿನ ಹೊರಗಿನ ಜನರು ಇಲ್ಲಿ ಜನಸಂಖ್ಯೆ ಕಡಿಮೆಯಾಗಲು ಹೆಣ್ಣುಮಕ್ಕಳೇ ಕಾರಣ ಎಂದು ನಂಬುವ ಪರಿಸ್ಥಿತಿ ಬರುತ್ತಿತ್ತು. ಕಡಿಮೆ ಸಂಖ್ಯೆಯಲ್ಲಾದರೂ ಜಪಾನಿನ ಹೆಣ್ಣುಮಕ್ಕಳು ಬಹಿರಂಗವಾಗಿ ಆಕ್ರೋಶ ಹೊರಗೆ ಹಾಕಿದ್ದು ಒಳ್ಳೆಯ ಬೆಳವಣಿಗೆ ಎಂದು ಹೇಳಿದ್ದಾರೆ .
Leave A Reply