ಕೃಷಿ ಮಾಡ್ಬೇಕು, ಪೆರೋಲ್ ಕೊಡಿ ವಿನಂತಿಗೆ ಹೈಕೋರ್ಟ್ ಅಸ್ತು!
ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಕೆಲವೊಂದು ಅಗತ್ಯ ಸಂದರ್ಭಗಳಲ್ಲಿ ನ್ಯಾಯಾಲಯ ಪೆರೋಲ್ ನೀಡುತ್ತದೆ. ಅದರಲ್ಲಿ ನಿಗದಿತ ಅವಧಿ ಮುಗಿಸಿದ ಬಳಿಕ ಕೈದಿಗಳು ಜೈಲಿಗೆ ಮರಳಬೇಕು. ಸಾಮಾನ್ಯವಾಗಿ ವಿಶೇಷ ಸಂದರ್ಭಗಳು ಎಂದರೆ ಅನಾರೋಗ್ಯ ತಾಯಿಗೆ ಚಿಕಿತ್ಸೆ ನೀಡಲು, ತಂದೆಯ ಆರೋಗ್ಯ ಕಾಳಜಿ ವಹಿಸಲು ಹಾಗೂ ಪತ್ನಿಯಿಂದ ಸಂತಾನ ಪಡೆಯಲು, ಇನ್ನು ಪೋಷಕರ ನಿಧನದ ಸಮಯದಲ್ಲಿ ಪೆರೋಲ್ ಸಿಗುತ್ತದೆ. ಆದರೆ ಇಲ್ಲೊಬ್ಬ ಅಪರಾಧಿಗೆ ಕೃಷಿ ಚಟುವಟಿಕೆ ನೋಡಿಕೊಳ್ಳಲು ಮಾನ್ಯ ಉಚ್ಚ ನ್ಯಾಯಾಲಯ 90 ದಿನಗಳ ಪೆರೋಲ್ ನೀಡಿದೆ.
ಅಪರೂಪದ ಆದೇಶ ಇದಾಗಿದ್ದು, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಿದ್ದಿದೇವರಹಳ್ಳಿ ನಿವಾಸಿ ಚಂದ್ರ ಎಂಬಾತ ಈ ಅವಕಾಶ ಪಡೆದ ಕೈದಿಯಾಗಿದ್ದಾನೆ. ತನ್ನ ತಂದೆಯ ಹೆಸರಿನಲ್ಲಿರುವ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡಬೇಕಿದೆ. ತಂದೆಗೆ 78 ವರ್ಷ ವಯಸ್ಸಾಗಿದೆ. ಕೃಷಿ ಚಟುವಟಿಕೆ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕುಟುಂಬದಲ್ಲಿ ಮತ್ಯಾವ ಸದಸ್ಯರೂ ಇಲ್ಲದ ಕಾರಣ ಕೃಷಿ ಚಟುವಟಿಕೆ ನೋಡಿಕೊಳ್ಳಲು ತನಗೆ 90 ದಿನಗಳ ಅವಕಾಶ ನೀಡಿ ಎಂದು ಅವನು ವಿನಂತಿಸಿಕೊಂಡಿದ್ದ.
ಈತನ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠ ಚಂದ್ರನಿಗೆ ಪೆರೋಲ್ ನೀಡಿದೆ. ಶಿಕ್ಷಾವಧಿಯಲ್ಲಿ ಸಜಾಬಂಧಿಯನ್ನು ಗರಿಷ್ಟ 90 ದಿನ ಪೆರೋಲ್ ಮೇಲೆ ಬಿಡುಗಡೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಜೈಲಿನಿಂದ ಹೊರಬಂದು ಕುಟುಂಬದವರೊಂದಿಗೆ ಒಂದಿಷ್ಟು ದಿನ ಇದ್ದರೆ, ತನ್ನ ಕಾರಣಕ್ಕೆ ಕುಟುಂಬದವರು ಅನುಭವಿಸುತ್ತಿರುವ ಸಂಕಟವನ್ನು ಕೈದಿಯ ಅರಿವಿಗೆ ಬರುತ್ತದೆ. ಇದು ಮನಪರಿವರ್ತನೆಗೆ ಕೈದಿಗೂ ನೆರವಾಗುತ್ತದೆ, ಕೃಷಿ ಪವಿತ್ರ ಕೆಲಸವಾಗಿರುವುದರಿಂದ ಚಂದ್ರನ ಮೊರೆಯನ್ನು ಹೈಕೋರ್ಟ್ ಪರಿಗಣಿಸಿದೆ.
ಅಪರಾಧಿ ಚಂದ್ರ ಗೃಹಿಣಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಆಕೆಯ ಗಂಡ ಇದಕ್ಕೆ ವಿರೋಧವಾಗುತ್ತಾನೆ ಎನ್ನುವ ಕೊಲೆ ಮಾಡಿದ್ದ. 2014 ರ ಡಿಸೆಂಬರ್ 23 ರಂದು ರಾಮನಗರ ಜಿಲ್ಲೆಯ ಕನಕಪುರದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಈತ 11 ವರ್ಷಗಳಿಂದ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
Leave A Reply