ಇವಿಎಂ ವಿರುದ್ಧ ಕಾಂಗ್ರೆಸ್ ಪಾದಯಾತ್ರೆಗೆ ಚಿಂತನೆ, ನಿಮ್ಮ ವಾದ ಸಾಬೀತುಪಡಿಸಿ ಎಂದು ಆಯೋಗ ತಾಕೀತು!
ಇಲೆಕ್ಟ್ರಾನಿಕ್ ವೋಟಿಂಗ್ ಮಿಶಿನ್ ಬಗ್ಗೆ ಅನುಮಾನ, ಗೊಂದಲ ಇದ್ದವರಿಗೆ ಸುಪ್ರೀಂಕೋರ್ಟ್ ಖಡಕ್ಕಾಗಿ ಉತ್ತರ ನೀಡಿದೆ. ಇವಿಎಂ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದೆ. ಬ್ಯಾಲೆಟ್ ಪೇಪರ್ ಅಥವಾ ಮತಪತ್ರಗಳ ಮೂಲಕ ಹಿಂದಿನ ಕಾಲದಲ್ಲಿ ಹೇಗೆ ಮತದಾನ ನಡೆಸಲಾಗುತ್ತಿತ್ತೋ ಹಾಗೆ ಚುನಾವಣೆಗಳನ್ನು ನಡೆಸಲು ಮನವಿ ಮಾಡಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ನೀವು ಗೆದ್ದಾಗ ಇವಿಎಂ ಬಗ್ಗೆ ಏನೂ ವಿರೋಧ ಮಾತನಾಡುವುದಿಲ್ಲ. ಅದೇ ಸೋತರೆ ಇವಿಎಂ ದೂರುತ್ತೀರಿ. ಇಂತಹ ದ್ವಂದ್ವ ನಿಲುವು ಯಾಕೆ? ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಇತ್ತ ಕಾಂಗ್ರೆಸ್ ಪಾಳಯದಲ್ಲಿ ಇವಿಎಂ ವಿರುದ್ಧ ಭಾರತ್ ಜೋಡೋ ಶೈಲಿಯಲ್ಲಿ ಪಾದಯಾತ್ರೆ ಮಾಡುವ ಯೋಜನೆ ಎಐಸಿಸಿ ಮಟ್ಟದಲ್ಲಿ ಇದೆ. ಪಾದಯಾತ್ರೆ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನವನ್ನು ಮಾಡುವ ಚಿಂತನೆ ಕಾಂಗ್ರೆಸ್ಸಿನದ್ದು.
ಇನ್ನೊಂದೆಡೆ ಸಮಾಜವಾದಿ ಪಾರ್ಟಿ ಕೂಡ ಇವರೊಂದಿಗೆ ಕೈಜೋಡಿಸಿದೆ. ಆದರೆ ಉಳಿದ ಪಕ್ಷಗಳು ಇದಕ್ಕೆ ಅಷ್ಟು ಆಸಕ್ತಿ ತೋರಿಸುತ್ತಿಲ್ಲ. ಏಕೆಂದರೆ ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ತಾವು ಜಯಭೇರಿ ಸಾಧಿಸಿ ಅಧಿಕಾರವನ್ನು ಹಿಡಿದಿವೆ. ಎಲ್ಲಿಯ ತನಕ ಅಂದರೆ ಶರದ್ ಪವಾರ್ ಅವರು ಕೂಡ ಇವಿಎಂ ಬಗ್ಗೆ ಅನುಮಾನಗಳು ಇದ್ದರೂ ಸಾಕ್ಷ್ಯಗಳು ತಮ್ಮ ಬಳಿ ಇಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ಇದರ ಬಗ್ಗೆ ಮೌನವನ್ನು ತಾಳಿದ್ದಾರೆ.
ಈ ನಡುವೆ ಕಾಂಗ್ರೆಸ್ಸಿಗೆ ಕಾಣಿಸುತ್ತಾ ಇರುವವರು ಸಾಮಾಜಿಕ ಹೋರಾಟಗಾರರಾದ ಬಾಬಾ ಅದವ್. ಅವರು ಒಟ್ಟು ಚುನಾವಣೆಯ ಅಕ್ರಮಗಳ ಬಗ್ಗೆ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ. ಇನ್ನು ಕಾಂಗ್ರೆಸ್ ಆರೋಪಿಸಿರುವ ಈ ಇವಿಎಂ ಅಕ್ರಮಗಳ ಬಗ್ಗೆ ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸಲು ಆಯೋಗ ಸೂಚನೆ ನೀಡಿದೆ. ಈ ನಡುವೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ್ ಅವರು ಕೂಡ ಇವಿಎಂ ಬಗ್ಗೆ ಅನುಮಾನಾಸ್ಪದವಾಗಿ ತಮ್ಮದೇ ಅಭಿಪ್ರಾಯಗಳನ್ನು ಅಂಕಿಅಂಶಗಳ ಮೂಲಕ ಪತ್ರಕರ್ತ ಕರಣ್ ಥಾಪರ್ ಜೊತೆ ನಡೆಸಿದ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.
ಒಟ್ಟಿನಲ್ಲಿ ರಾಷ್ಟ್ರದಲ್ಲಿ ಸೋಲಿನ ಗುಂಗಿನಲ್ಲಿರುವ ಕಾಂಗ್ರೆಸ್ ಇವಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ, ಆರೋಪ ಹಾಕುತ್ತಾ, ಆದರೆ ಅದನ್ನು ಸಾಬೀತುಪಡಿಸಲಾಗದೇ ಹೈರಾಣಾಗಿದೆ.
Leave A Reply