ಶಿವಾಜಿ ಮತ್ತು ಮಲ್ಲಮ್ಮ ವಿಷಯದಲ್ಲಿ ಸಿನೆಮಾ ಪ್ರಿಯರ ನಡುವೆ ಕಾಳಗ ಯಾಕೆ?
ರಿಷಬ್ ಶೆಟ್ಟಿಯವರು ಛತ್ರಪತಿ ಶಿವಾಜಿ ಮಹಾರಾಜ್ ಸಿನೆಮಾದಲ್ಲಿ ಅಭಿನಯಿಸಲು ಸಿದ್ಧತೆ ನಡೆಸಿದ್ದಾರೆ ಎನ್ನುವ ವಿಷಯ ಬಹಿರಂಗವಾಗುತ್ತಲೇ ಇದಕ್ಕೆ ಕರ್ನಾಟಕದಲ್ಲಿ ಸಿನೆಮಾ ಪ್ರಿಯರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಕರ್ನಾಟಕ ರಾಜ್ಯದ ಅರಸರ, ಮಹಾನ್ ನಾಯಕರ ಕಥೆಯಾಧಾರಿತ ಸಿನೆಮಾಗಳಲ್ಲಿ ನಟಿಸಲು ಆದ್ಯತೆ ನೀಡುವುದು ಬಿಟ್ಟು ಹೊರಗಿನ ರಾಜ್ಯಗಳ ಅರಸರ ಸಿನೆಮಾಗಳಲ್ಲಿ ನಟಿಸುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ. ರಿಷಬ್ ಶೆಟ್ಟಿಯವರನ್ನು ಕನ್ನಡ ವಿರೋಧಿ ಎಂದು ಹಣೆಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಎಲ್ಲಾ ಕಡೆ ಇರುವ ಹಾಗೆ ಚಿತ್ರರಂಗದಲ್ಲಿಯೂ ಒಳಗೊಳಗೆ ಮತ್ಸರದ ಬೀಜ ಇದ್ದೇ ಇರುತ್ತದೆ. ಆದ್ದರಿಂದ ಒಬ್ಬರು ಬೆಳೆಯಲು ಹೊರಟಾಗ ಅವರನ್ನು ಟೀಕಿಸಿ, ಕಾಲು ಎಳೆದು ಸಂತೋಷಪಡುವ ವಿಘ್ನ ಸಂತೋಷಿಗಳು ಇದ್ದೇ ಇರುತ್ತಾರೆ. ಈಗ ಬಹುದೊಡ್ಡ ಬಜೆಟ್ ಚಿತ್ರ ಛತ್ರಪತಿ ಶಿವಾಜಿ ಮಹಾರಾಜ್ ಸಿನೆಮಾ ಬಾಲಿವುಡ್ ಅಂಗಣದಲ್ಲಿ ನಿರ್ಮಾಣವಾಗಲಿದೆ ಮತ್ತು ಅದರಲ್ಲಿ ಕನ್ನಡಿಗ ಹೀರೋ ಎಂದ ಕೂಡಲೇ ಇದು ಒಂದಿಷ್ಟು ಹೆಚ್ಚಿಗೆ ಸೋಶಿಯಲ್ ಮೀಡಿಯಾ ಸಂಘರ್ಷಕ್ಕೆ ಕಾರಣವಾಗಿದೆ. ಯಾವುದೇ ರೀತಿಯ ವಿರೋಧಗಳು ನಿಜಕ್ಕೂ ಒಳ್ಳೆಯದೇ. ಯಾಕೆಂದರೆ ಇದರಿಂದ ಸತ್ಯ ಹೊರಗೆ ಬರಲು ಅನುಕೂಲವಾಗುತ್ತದೆ.
ಅಷ್ಟಕ್ಕೂ ಶಿವಾಜಿ ಮಹಾರಾಜರಿಗೂ ಕನ್ನಡಕ್ಕೂ ಬಾಂಧವ್ಯ ಇತ್ತಾ? ಇತ್ತು ಎನ್ನುವುದಕ್ಕೆ ಒಂದು ದೃಷ್ಣಾಂತವನ್ನು ನೀಡಬಹುದು. ಆ ಕಥೆಯನ್ನು ಓದುವಾಗಲೇ ಮನಸ್ಸು ಆದ್ರವಾಗುತ್ತದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ದಂಡಯಾತ್ರೆ ಆರಂಭಿಸಿದ ಶಿವಾಜಿ ಅದರಲ್ಲಿ ಯಶಸ್ವಿಗೊಂಡು ತಮ್ಮ ರಾಜಧಾನಿಗೆ ಮರಳುವಾಗ ಬೆಳಗಾವಿಯಲ್ಲಿ ಅವನ ಸೈನಿಕರಿಗೆ ಈಶಪ್ರಭು ಎನ್ನುವ ರಾಜನ ಸಾಮ್ರಾಜ್ಯ ಎದುರಾಗುತ್ತದೆ. ಈಶಪ್ರಭುವಿಗೆ ಶಿವಾಜಿ ಮೇಲೆ ಗೌರವ ಇತ್ತು. ಆದರೆ ಶಿವಾಜಿ ಮಹಾರಾಜರ ಸೇನಾಧಿಪತಿ ಸಕುಜಿ ತನ್ನ ಸೈನ್ಯದೊಂದಿಗೆ ಈಶಪ್ರಭುವಿನ ಮೇಲೆ ದಾಳಿ ಮಾಡುತ್ತಾನೆ. ಯುದ್ಧರಂಗದಲ್ಲಿ ಈಶಪ್ರಭು ವೀರ ಮರಣ ಅಪ್ಪುತ್ತಾರೆ. ಪತಿಯನ್ನು ಕಳೆದುಕೊಂಡ ರಾಣಿ ಮಲ್ಲಮ್ಮ ಕೆಚ್ಚೆದೆಯಿಂದ ಯುದ್ಧ ಮಾಡಿ ಸೆರೆಯಾಗಿ ಶಿವಾಜಿಯ ಎದುರು ಬಂದು ನಿಲ್ಲಬೇಕಾಗುತ್ತದೆ. ಒಟ್ಟು 27 ದಿನ ನಡೆದ ಯುದ್ಧದ ವಿಷಯ, ಮಲ್ಲಮ್ಮಳ ಶೌರ್ಯ ಕೇಳಿ ತಿಳಿದುಕೊಂಡ ಶಿವಾಜಿ ತಮ್ಮ ಸೇನಾಧಿಪತಿ ಸಕುಜಿಯ ಮೇಲೆ ಕೋಪಗೊಂಡು ಆತನ ಕಣ್ಣನೇ ಕಿತ್ತು ಆನೆಯ ಕಾಲಿನ ಕೆಳಗೆ ಹಾಕಿ ಸಾಯಿಸಿದ ಎಂದು ಹೇಳಲಾಗುತ್ತದೆ.
ಮಲ್ಲಮ್ಮಳನ್ನು ತಂಗಿಯಾಗಿ ಸ್ವೀಕರಿಸಿದ ಶಿವಾಜಿ ಈ ಯುದ್ಧದಿಂದಾಗಿ ಹಾನಿಗೊಳಗಾದ ಬೆಳವಾಡಿಯ ಕೋಟೆಯ ಪುನರ್ ನಿರ್ಮಾಣದ ವೆಚ್ಚವನ್ನು ತಾವೇ ಭರಿಸಿದ್ದಾರೆ. ರಾಣಿ ಮಲ್ಲಮ್ಮ ಅಣ್ಣ ತಂಗಿಯ ದ್ಯೋತಕವಾಗಿ ಶಿವಾಜಿ ಮಹಾರಾಜರಿಗೆ ರಕ್ಷೆ ಕಟ್ಟುತ್ತಾರೆ. ನಂತರ ಮಲ್ಲಮ್ಮಳ ಮಗ ನಾಗಭೂಷಣನ ಪಟ್ಟಾಭಿಷೇಕವನ್ನು ಖುದ್ದು ಶಿವಾಜಿಯೇ ನಿಂತು ಮಾಡಿಸುತ್ತಾರೆ. ನಂತರ ಬೆಳವಾಡಿ ಮತ್ತು ಮರಾಠಾ ರಾಜಮನೆತನಗಳ ನಡುವೆ ಗಾಢವಾದ ಸ್ವರಾಜ್ಯ ರಾಷ್ಟ್ರ ನಿರ್ಮಾಣ ಸಂಕಲ್ಪ ಬೆಳೆಯುತ್ತದೆ.
ಹೀಗೆ ಶಿವಾಜಿ ಮಹಾರಾಜರಿಗೆ ಕರ್ನಾಟಕದ ಬಗ್ಗೆ ಪ್ರೀತಿ ಇತ್ತು. ಹೀಗಿರುವಾಗ ನಾವು ಈ ವಿಷಯದಲ್ಲಿ ಪರಸ್ಪರ ಅಪನಂಬಿಕೆ ಹೊಂದುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಈಗ ಇರುವ ಪ್ರಶ್ನೆ.
Leave A Reply