ಭಾರತದಲ್ಲಿ ಇಳಿಮುಖ ಕಾಣುತ್ತಿರುವ ಎಟಿಎಂಗಳ ಸಂಖ್ಯೆ! ಈಗ ಎಲ್ಲಿಗೆ ಬಂದು ತಲುಪಿದೆ ಗೊತ್ತಾ?
ಭಾರತ ಈಗ ಆಧುನಿಕ ತಂತ್ರಜ್ಞಾನದ ವಿಷಯದಲ್ಲಿ ಮಹತ್ತರ ಹೆಜ್ಜೆಗಳನ್ನು ಇಡುತ್ತಿದೆ. ಆರ್ಥಿಕ ವ್ಯವಹಾರಗಳು ಈಗ ಬಹುತೇಕ ಯುಪಿಐ ಮೂಲಕವೇ ನಡೆಯುತ್ತಿರುವುದರಿಂದ ಜನರು ಬ್ಯಾಂಕಿಗೆ ಮತ್ತು ಎಟಿಎಂಗಳಿಗೆ ಬರುವುದು ಕಡಿಮೆಯಾಗುತ್ತಲೇ ಇದೆ. ಒಂದು ಕಾಲದಲ್ಲಿ ಜನರು ಹಣ ತುಂಬಲು ಮತ್ತು ಡ್ರಾ ಮಾಡಲು ಪ್ರತಿಯೊಂದಕ್ಕೂ ಬ್ಯಾಂಕುಗಳನ್ನೇ ಆಶ್ರಯಿಸಬೇಕಾಗಿತ್ತು. ಆದರೆ ಕಾಲಕ್ರಮೇಣ ಮೂರು ದಶಕಗಳಿಂದ ಬ್ಯಾಂಕುಗಳ ಸ್ಥಾನವನ್ನು ಹೆಚ್ಚುಕಡಿಮೆ ಎಟಿಎಂಗಳು ತುಂಬಿದ್ದವು. ದಿನದ 24 ಗಂಟೆಯೂ ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡುವುದು, ಡಿಪಾಸಿಟ್ ಮಾಡುವುದು ಎಲ್ಲವೂ ಸಾಧ್ಯವಾಗುತ್ತಿದ್ದ ಕಾರಣ ಜನರಿಗೂ ಅನುಕೂಲವಾಗುತ್ತಿತ್ತು.
ಆದರೆ ಅದರ ನಂತರ ಈ ದಶಕದಲ್ಲಿ ಎಟಿಎಂ ಸ್ಥಾನವನ್ನು ಯುಪಿಐ ತುಂಬುತ್ತಿವೆ. ಇಲ್ಲಿ ಹಾರ್ಡ್ ಕ್ಯಾಶಿನ ವಿಷಯವೇ ಇಲ್ಲ. ಚಿಕ್ಕಪುಟ್ಟ ಗೂಡಂಗಡಿಗಳಿಂದ ಹಿಡಿದು ಮಾಲ್ ತನಕ ಯುಪಿಐ ಇರುವುದರಿಂದ ಹಣವನ್ನು ಪರಸ್ಪರ ವಿಲೇವಾರಿ ಮಾಡಲು ಸುಲಭ ಮತ್ತು ಹೊತ್ತುಕೊಂಡು ಹೋಗುವ ಕೆಲಸವೂ ಇರುವುದಿಲ್ಲ. ಒಂದು ಮೊಬೈಲ್ ಫೋನಿನೊಳಗೆ ನಿಮ್ಮ ಬ್ಯಾಂಕು ಬಂದು ಕುಳಿತುಕೊಂಡಂತೆ ಆಗಿದೆ. ಈ ಹಂತದಲ್ಲಿ ಜನರು ಎಟಿಎಂ ಗಳಿಗೆ ಮೊರೆ ಹೋಗುವುದು ಕಡಿಮೆಯಾಗಿದೆ. ಇದರಿಂದ ಏನಾಗಲಿದೆ?
ಒಂದು ಕಾಲದಲ್ಲಿ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಎಟಿಎಂ ಕ್ರಮೇಣ ಅರೆನಗರಗಳಿಗೂ, ನಂತರ ಗ್ರಾಮೀಣ ಭಾಗಗಳಿಗೂ ತಲುಪಿತ್ತು. ಆದರೆ ಒಂದು ಎಟಿಎಂ ಗೂಡನ್ನು ಪ್ರತಿ ತಿಂಗಳು ನಿರ್ವಹಣೆ ಮಾಡಲು ಸಾಕಷ್ಟು ಖರ್ಚು ಬರುತ್ತದೆ. ವಿದ್ಯುತ್, ಸ್ವಚ್ಚತೆ, ಸ್ಟೇಶನರಿ, ಹಣ ನಿರ್ವಹಣೆ ಮಾಡುವ ಕಂಪೆನಿಯ ಹೊರಗುತ್ತಿಗೆ, ವಾಚಮೆನ್ ಹೀಗೆ ವಿವಿಧ ಹೊರೆ ಬ್ಯಾಂಕುಗಳಿಗೆ ತಗಲುವುದರಿಂದ ಅದನ್ನು ತಪ್ಪಿಸಲು ಬ್ಯಾಂಕುಗಳು ತಮ್ಮ ಎಟಿಎಂ ಸಂಖ್ಯೆಯನ್ನು ಇಳಿಸುವ ತಂತ್ರಗಳನ್ನು ರೂಪಿಸಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ 2023 ರ ಸೆಪ್ಟೆಂಬರ್ ನಲ್ಲಿ ಸುಮಾರು 2,19,000 ಇದ್ದ ಎಟಿಎಂಗಳ ಸಂಖ್ಯೆ ಮರುವರ್ಷ 2024 ರ ಸೆಪ್ಟೆಂಬರ್ ನಲ್ಲಿ 2,15,000 ಕ್ಕೆ ಇಳಿದಿದೆ. ಒಟ್ಟಿನಲ್ಲಿ ಹೊಸ ತಂತ್ರಜ್ಞಾನಗಳು ಬಂದಂತೆಲ್ಲ ಹಿಂದಿನ ಟೆಕ್ನಾಲಜಿಗಳು ಹೇಗೆ ಬದಿಗೆ ಸರಿಯುತ್ತವೆ ಎನ್ನುವುದಕ್ಕೆ ಎಟಿಎಂ ತಾಜಾ ಉದಾಹರಣೆ. ಮುಂದಿನ ಕೆಲವು ವರ್ಷಗಳ ಇದರ ಸಂಖ್ಯೆ ಇನ್ನಷ್ಟು ಇಳಿಕೆ ಕಾಣುವ ಸಾಧ್ಯತೆ ನಿಚ್ಚಳವಾಗಿದೆ.
Leave A Reply