ಕೆಎಂಎಫ್ ಎಂಡಿ ಜಗದೀಶ್ ಅವರ ದಿಢೀರ್ ವರ್ಗಾವಣೆಯ ಹಿಂದಿದೆಯಾ ಕೇರಳ ಲಾಬಿ?
ಕೆಎಂಎಫ್ ಎಂಡಿ ಜಗದೀಶ್ ಅವರನ್ನು ಅಚಾನಕ್ ಆಗಿ ಅವರ ಸ್ಥಾನದಿಂದ ವರ್ಗಾಯಿಸಲಾಗಿದೆ. ಇದರ ವಿರುದ್ಧ ಸಾಮಾಜಿಕ ಜಾಲತಾಣ “ಎಕ್ಸ್”ನಲ್ಲಿ ಹಲವರು ಧ್ವನಿ ಎತ್ತಿದ್ದಾರೆ. ವಿಧಾನಸಭಾ ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ಶಾಸಕ ಸುನೀಲ್ ಕುಮಾರ್ ಸಹಿತ ಕೆಲವರು ಇದರ ಹಿಂದೆ ಇರುವ ಷಡ್ಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಸರಕಾರಿ ಇಲಾಖೆಯಲ್ಲಿರುವವರಿಗೆ ವರ್ಗಾವಣೆ ವಿಶೇಷ ಅಲ್ಲ. ಆದರೆ ಕೆಎಂಎಫ್ ಎಂಡಿ ಜಗದೀಶರ ವರ್ಗಾವಣೆಯ ವಿಷಯದಲ್ಲಿ ಈಗ ಸಾಕಷ್ಟು ಚರ್ಚೆಗಳು ನಡೆಯುತ್ತಿರುವುದರ ಬಗ್ಗೆ ಪ್ರಬಲವಾದ ಕಾರಣಗಳಿವೆ. ಮೊದಲನೇಯದಾಗಿ ನಂದಿನಿ ಉತ್ಪನ್ನಗಳಿಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಸಿಗುವುದರ ಹಿಂದೆ ಜಗದೀಶ್ ಅವರ ಫಲವಿದೆ ಎನ್ನಲಾಗುತ್ತಿದೆ. ಅವರು ಎಂಡಿ ಆಗಿದ್ದರೂ ಸುಮ್ಮನೆ ಕಚೇರಿಯಲ್ಲಿ ಕುಳಿತು ಛೇರ್ ಬಿಸಿ ಮಾಡಲಿಲ್ಲ. ನಂದಿನಿಯ ಮಾರುಕಟ್ಟೆಯನ್ನು ವಿಸ್ತರಿಸುವುದರ ಬಗ್ಗೆ ಏನು ಮಾಡಬಹುದು ಎಂದು ಯೋಚನೆ ಮಾಡಿದರು.
ಅವರು ಟಿ20 ಕ್ರಿಕೆಟ್, ಐಎಸ್ ಎಲ್ ಫುಟ್ ಬಾಲ್ ಟೂರ್ನಮೆಂಟ್, ಪ್ರೊ ಕಬಡ್ಡಿ ಪಂದ್ಯಾಟಗಳಿಗೆ ನಂದಿನಿಯ ಪ್ರಾಯೋಜಕತ್ವ ನೀಡಿ ನಂದಿನಿಯ ಬ್ರಾಂಡ್ ಹಿಗ್ಗಿಸಲು ತಂತ್ರ ರೂಪಿಸಿದರು. ನವದೆಹಲಿಯಲ್ಲಿ ನಂದಿನಿಯ ತಾಜಾ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ, ದುಬೈಯಲ್ಲಿ ನಂದಿನಿ ಉತ್ಪನ್ನಗಳ ಔಟ್ ಲೆಟ್, ತಿರುಪತಿ ದೇವಸ್ಥಾನಕ್ಕೆ ಮತ್ತೆ ನಂದಿನಿಯ ತುಪ್ಪ ಪೂರೈಸುವ ಒಪ್ಪಂದ ಮತ್ತು ಈಗ ಇಡ್ಲಿ ಮತ್ತು ದೋಸೆಯ ಹಿಟ್ಟು ಮಾರುಕಟ್ಟೆಗೆ ತರುವವರಿದ್ದರು. ಹೀಗೆ ನಿರಂತರವಾಗಿ ನಂದಿನಿಯ ಮಾರುಕಟ್ಟೆ ವಿಸ್ತರಿಸಲು ಜಗದೀಶ್ ಏನಾದರೊಂದು ಕಾರ್ಯತಂತ್ರ ರೂಪಿಸುತ್ತಿದ್ದರು. ಅಂತಹ ಅಧಿಕಾರಿಯನ್ನು ಅವಧಿಪೂರ್ವ ದಿಢೀರವಾಗಿ ಎತ್ತಂಗಡಿ ಮಾಡುವ ಮೂಲಕ ಕಾಂಗ್ರೆಸ್ ಸರಕಾರದ ನಿರ್ಧಾರ ಅನುಮಾನಗಳಿಗೆ ಕಾರಣವಾಗಿದೆ.
ಕೇರಳದ ಬ್ರಾಂಡಿನ ಇಡ್ಲಿ/ದೋಸೆ ಹಿಟ್ಟಿನ ಕಂಪೆನಿಯೊಂದರ ಲಾಬಿಗೆ ಮಣಿದ ರಾಜ್ಯದ ಕಾಂಗ್ರೆಸ್ ಸರಕಾರ ಜಗದೀಶ್ ಅವರನ್ನು ಎಂಡಿ ಸ್ಥಾನದಿಂದ ವರ್ಗಾವಣೆ ಮಾಡಿದೆ ಎನ್ನುವ ಆರೋಪ ಇದೆ. ಕೇರಳದಲ್ಲಿ ಇದೇ ಉತ್ಪನ್ನಗಳನ್ನು ಮಾರುವ ಸಂಸ್ಥೆಯೊಂದು ದೆಹಲಿ ನಾಯಕರ ಮೂಲಕ ರಾಜ್ಯ ಕಾಂಗ್ರೆಸ್ಸಿನ ಮೇಲೆ ಒತ್ತಡ ತಂದು ಜಗದೀಶ್ ಅವರನ್ನು ಎತ್ತಂಗಡಿ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇರಳದ ಕಂಪೆನಿಯ ಲಾಬಿ ಇದೆ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಈ ವಿಷಯದ ಬಗ್ಗೆ ರಾಜ್ಯದ ಸಿಎಂ ಅಥವಾ ಸಚಿವರೇ ಉತ್ತರ ನೀಡಬೇಕಿದೆ. ಒಂದು ವೇಳೆ ಯಾರದ್ದೋ ಒತ್ತಡಕ್ಕೆ ಮಣಿದಿರುವುದು ನಿಜವಾದರೆ ಅದು ಕೆಎಂಎಫ್ ವಿಸ್ತರಣೆಯ ಬಾಗಿಲು ಮುಚ್ಚಿದಂತೆ ಎನ್ನುವುದು ಹಲವರ ಅಂಬೋಣ.
Leave A Reply