ಕೇಂದ್ರದಲ್ಲಿ ಮೋದಿ – ಅದಾನಿ ಟೀ ಶರ್ಟ್ , ತೆಲಂಗಾಣದಲ್ಲಿ ಕಾಂಗ್ರೆಸ್ ಸಿಎಂ – ಅದಾನಿ ಟೀ ಶರ್ಟ್ ವಿವಾದ!
ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಆಗಾಗ್ಗೆ ಮೋದಿ ಹಾಗೂ ಅದಾನಿ ವಿಷಯದಲ್ಲಿ ಆರೋಪ, ಟೀಕೆ, ವ್ಯಂಗ್ಯ ಹೀಗೆ ಮಾಡುತ್ತಲೇ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಎರಡು ದಿನಗಳ ಹಿಂದಷ್ಟೇ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಸಂಸತ್ ಭವನದ ಹೊರಗೆ ಪ್ರತಿಭಟನೆಯಲ್ಲಿ ತಮ್ಮ ಟೀಶರ್ಟ್ ನ ಬೆನ್ನಿನ ಭಾಗದಲ್ಲಿ ಮೋದಿ ಅದಾನಿ ಏಕ್ ಹೇ, ಅದಾನಿ ಸೇಫ್ ಹೇ ಎನ್ನುವ ಶಬ್ದಗಳನ್ನು ಬರೆದ ಸ್ಟಿಕ್ಕರ್ ಅಂಟಿಸಿಕೊಂಡು ಪ್ರತಿಭಟಿಸುತ್ತಿದ್ದರು. ಅವರ ಜೊತೆಯಲ್ಲಿ ಇದ್ದವರು ಕೂಡ ಹಾಗೆ ಮಾಡಿದ್ದರು. ಈ ಮೂಲಕ ಮೋದಿಯವರ ‘ಏಕ್ ಹೇ ತೋ ಸೇಫ್ ಹೇ’ ಎಂಬ ಘೋಷಣಾ ವಾಕ್ಯವನ್ನು ಹಂಗಿಸುವಂತೆ ಪ್ರತಿಭಟನಾ ರಣತಂತ್ರವನ್ನು ಹೆಣೆದಿದ್ದರು.
ದೆಹಲಿಯಲ್ಲಿ ಅದಾನಿಯವರನ್ನು ತೆಗಳುವ ಕಾಂಗ್ರೆಸ್ ಪಕ್ಷ ತಾನು ಅಧಿಕಾರದಲ್ಲಿರುವ ತೆಲಂಗಾಣದಲ್ಲಿ ಬೇರೆಯದ್ದೇ ರೀತಿಯ ರಾಜಕೀಯವನ್ನು ಮಾಡುತ್ತಿದೆ. ಅಲ್ಲಿ ಮುಖ್ಯಮಂತ್ರಿಯಾಗಿರುವ ಕಾಂಗ್ರೆಸ್ಸಿನ ರೇವಂತ್ ರೆಡ್ಡಿ ಇದೇ ಅದಾನಿಯವರೊಂದಿಗೆ ಒಪ್ಪಂದವನ್ನು ಮಾಡಿಕೊಂಡು ರಾಜ್ಯದಲ್ಲಿ ಬಂಡವಾಳ ತಂದಿದ್ದಾರೆ. ಇದನ್ನು ಬಿಆರ್ ಎಸ್ ಶಾಸಕರಾದ ಕೆಟಿಆರ್ ಅವರು ವಿರೋಧಿಸಿ ಅದಾನಿ ಹಾಗೂ ರೇವಂತ್ ರೆಡ್ಡಿ ಜೊತೆಗಿರುವ ಫೋಟೋ ಧರಿಸಿ ವಿಧಾನಸೌಧದ ಒಳಗೆ ಪ್ರವೇಶಿಸಲು ಹೊರಟಾಗ ಪೊಲೀಸರು ಅವರನ್ನು ತಡೆದಿದ್ದಾರೆ.
ಈ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿಲುವುಗಳು ವ್ಯತಿರಿಕ್ತವಾಗಿವೆ. ಕೇಂದ್ರದ ಮುಖಂಡರು ಅದಾನಿಯನ್ನು ಕಂಡರೆ ಉರಿದುಬೀಳುತ್ತಾರೆ. ಅಂಬಾನಿಯವರನ್ನು ಕಂಡರೆ ಮೈಮೇಲೆ ಆವೇಶ ಬಂದವರಂತೆ ಆಡುತ್ತಾರೆ. ಆದರೆ ಅದೇ ಕಾಂಗ್ರೆಸ್ಸಿಗರು ಮುಖಂಡರು ಅದಾನಿಯವರ ಮಗ ಅನಂತ್ ಹಾಗೂ ರಾಧಿಕಾ ಮರ್ಚೆಂಟ್ ಮದುವೆಗೆ ಹೋಗಿ ಭಾಗವಹಿಸಿ ಎಂಜಾಯ್ ಮಾಡಿದ್ದಾರೆ. ಆಗ ಅವರಿಗೆ ಅಂಬಾನಿ ವಿರೋಧಿಯಲ್ಲ. ಅದೇ ಚುನಾವಣಾ ಪ್ರಚಾರ ಸಭೆಗಳಲ್ಲಿ, ಸಂಸತ್ತಿನಲ್ಲಿ ಮೋದಿ, ಅದಾನಿ, ಅಂಬಾನಿಯನ್ನು ಟೀಕಿಸದಿದ್ದರೆ ರಾಹುಲ್ ಹಾಗೂ ಪ್ರಿಯಾಂಕಾ ಅವರಿಗೆ ಆ ಕಾರ್ಯಕ್ರಮ ಅಪೂರ್ಣವೆನಿಸುತ್ತದೆ.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿ ರಾಮರಾವ್ ಮಾತ್ರ ಇದೇ ವಿಷಯವನ್ನು ಅಸ್ತ್ರವಾಗಿಟ್ಟುಕೊಂಡು ಹೋರಾಟ ನಡೆಸುತ್ತಿದ್ದಾರೆ. ಹಾಗಾದರೆ ತೆಲಂಗಾಣದ ಸಿಎಂ ರೆಡ್ಡಿ ತಾವು ಕಾಂಗ್ರೆಸ್ ಹೈಕಮಾಂಡಿಗೆ ಬಿಸಿತುಪ್ಪ ಆಗುತ್ತೇನೆ ಎಂದು ಗೊತ್ತಿದ್ದರೂ ಅದಾನಿಯವರೊಂದಿಗೆ ಒಪ್ಪಂದ ಮಾಡಿಕೊಂಡ್ರಾ ಅಥವಾ ಅವರಿಗೆ ಅದು ಅನಿವಾರ್ಯವಾಗಿತ್ತಾ?
Leave A Reply