ಹೈಕೋರ್ಟ್ ಪೊಲೀಸರ ವಾದ ಪುರಸ್ಕರಿಸಿದರೆ ಅಲ್ಲು ಮತ್ತೆ ?
ಪುಷ್ಪ-2 ಸಿನೆಮಾ ಈಗಾಗಲೇ ಬಿಡುಗಡೆಯಾಗಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಸಿನೆಮಾ ಬಿಡುಗಡೆಯಾದ ದಿನ ಪ್ರೀಮಿಯರ್ ಶೋಗಾಗಿ ಹೈದ್ರಾಬಾದಿನ ಸಂಧ್ಯಾ ಥಿಯೇಟರ್ ಎನ್ನುವ ಸಿಂಗಲ್ ಸ್ಕ್ರೀನ್ ಥಿಯೇಟರಿಗೆ ಅಲ್ಲು ಅರ್ಜುನ್ ತೆರಳಿದ್ದರು. ಈ ಹಂತದಲ್ಲಿ ಅಲ್ಲಿ ಮೊದಲೇ ಜನ ಕಿಷ್ಕಿಂದೆಯಂತಿದ್ದ ಜಾಗದಲ್ಲಿ ತುಂಬಿ ತುಳುಕುತ್ತಿದ್ದರು. ಯಾವಾಗ ಸಿನೆಮಾದ ನಾಯಕ ನಟನೇ ಅಲ್ಲಿ ಬಂದನೋ ಆ ಜಾಗದಲ್ಲಿ ಜನರ ನಡುವೆ ಅಲ್ಲು ಅರ್ಜುನ್ ಅವರನ್ನು ನೋಡಲು ಹಾರಾಟ, ಚೀರಾಟಗಳು ಆರಂಭವಾದವು. ಆಗ ಅಲ್ಲಿದ್ದ 39 ವರ್ಷದ ಮಹಿಳೆ ರೇವತಿ ಹಾಗೂ ಅವರ ಎಂಟು ವರ್ಷದ ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ. ರೇವತಿ ನಂತರ ಮೃತಪಟ್ಟರೆ ಅವರ ಮಗ ಆಸ್ಪತ್ರೆಯಲ್ಲಿ 13 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೊಲೀಸರ ಪ್ರಕಾರ ಥಿಯೇಟರ್ ಮಾಲೀಕರು ಅಲ್ಲು ಅರ್ಜುನ್ ಅಲ್ಲಿ ಬರುವ ವಿಷಯ ಸ್ಥಳೀಯ ಠಾಣೆಗೆ ಮಾಹಿತಿ ನೀಡಿರಲಿಲ್ಲ. ಒಂದು ವೇಳೆ ಈ ಬಗ್ಗೆ ಮೊದಲೇ ಹೇಳಿದ್ದರೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಸಂಭಾವ್ಯ ಘಟನೆಯನ್ನು ತಪ್ಪಿಸಬಹುದಿತ್ತು. ಯಾಕೆಂದರೆ ಥಿಯೇಟರ್ ನವರಿಗೆ ಸ್ಟಾರ್ ಅಲ್ಲಿ ಬರುವುದು ಮೊದಲೇ ಗೊತ್ತಿತ್ತು, ಹಾಗಾದರೆ ಮೊದಲೇ ಯಾಕೆ ತಿಳಿಸಲಿಲ್ಲ ಎನ್ನುವ ವಿಷಯದಲ್ಲಿ ಈಗ ಎಲ್ಲಾ ಕಡೆ ಚರ್ಚೆಯಾಗುತ್ತಿದೆ. ಈ ನಿಟ್ಟಿನಲ್ಲಿ ಥಿಯೇಟರ್ ಮಾಲೀಕ, ಮ್ಯಾನೇಜರ್ ಹಾಗೂ ಅಲ್ಲು ಅರ್ಜುನ್ ಹಾಗೂ ಅವರ ಭದ್ರತಾ ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲಾಗಿದೆ.
ತೆಲುಗು ಮತ್ತು ತಮಿಳು ಸಿನೆಮಾ ಸ್ಟಾರ್ ಗಳಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ವರ್ಗ ಇರುತ್ತದೆ. ಅಲ್ಲಿ ನಾಯಕನಟರು ಇದೇ ಇಮೇಜ್ ಬಳಸಿ ರಾಜಕೀಯ ಪ್ರವೇಶಿಸಿ ಮುಖ್ಯಮಂತ್ರಿಯಾಗಿರುವ ಉದಾಹರಣೆಗಳೂ ಇವೆ. ಅಲ್ಲಿ ಪ್ರತಿ ಸಿನೆಮಾ ಕುಟುಂಬಕ್ಕೂ ಅವರದ್ದೇ ಆಗಿರುವ ಚರಿಷ್ಮಾ ಇದೆ.
ನಂದಮೂರಿ ಕುಟುಂಬ, ಚಿರಂಜೀವಿ ಕುಟುಂಬ ಹೀಗೆ ಸಿನೆಮಾ ಎಂದರೆ ಅಲ್ಲಿ ಹಬ್ಬ. ಯಾವುದೇ ಬಹಿರಂಗ ವೇದಿಕೆಗಳಲ್ಲಿ ಸಿನೆಮಾ ಕಾರ್ಯಕ್ರಮವಿರಲಿ, ಸಾರ್ವಜನಿಕರು ತಂಡೋಪತಂಡವಾಗಿ ಅಲ್ಲಿ ಬರುತ್ತಾರೆ. ಸಾಗರೋಪಾದಿಯಲ್ಲಿ ಜನ ಬಂದು ಸಂಭ್ರಮಿಸುತ್ತಾರೆ. ಈ ರಾಜ್ಯಗಳಲ್ಲಿ ಯಾವುದೇ ಸ್ಟಾರ್ ನಟನ ಸಿನೆಮಾ ಬಿಡುಗಡೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಬಹಿರಂಗ ಕಾರ್ಯಕ್ರಮ ಎಂದರೆ ಪೊಲೀಸರಿಗೆ ಅದೊಂದು ದೊಡ್ಡ ತಲೆನೋವು. ಎಷ್ಟೇ ಸುರಕ್ಷತಾ ವ್ಯವಸ್ಥೆ ಮಾಡಿದರೂ ಜನರ ಧಾವಂತ ತಡೆಯುವುದು ಅಷ್ಟು ಸುಲಭದ ಮಾತಲ್ಲ. ಹಾಗಿರುವಾಗ ಪೊಲೀಸರಿಗೆ ಹೇಳದೇ ಒಬ್ಬ ದೊಡ್ಡ ಪ್ರಖ್ಯಾತ ನಟನನ್ನು ಚಿತ್ರಮಂದಿರದಲ್ಲಿ ಸ್ವಾಗತಿಸುವುದು ಎಂದರೆ ಅದೆಂತಹ ರಿಸ್ಕ್ ಇರಬೇಡಾ. ಹಾಗೆ ಮಾಡಿರುವ ಸಂಧ್ಯಾ ಥಿಯೇಟರ್ ಮಾಲೀಕರು ತಮ್ಮ ಕಾಲ ಮೇಲೆ ತಾವೇ ಕೊಡಲಿ ಏಟು ಹಾಕಿದ್ದಾರೆ. ಇದರೊಂದಿಗೆ ಅಲ್ಲು ಅರ್ಜುನ್ ಅವರಿಗೂ ವೈಯಕ್ತಿಕವಾಗಿ ಕಿರಿಕಿರಿ ಉಂಟು ಮಾಡಿದ್ದಾರೆ. ಏಕೆಂದರೆ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಅಲ್ಲು ಅರ್ಜುನ್ ಕೂಡ ಆರೋಪಿ. ಈ ಥಿಯೇಟರ್ ಮಾಲೀಕರ ತಪ್ಪಿನಿಂದಾಗಿ ಒಂದು ಜೀವ ಅಂತ್ಯಗೊಂಡಿದೆ. ಆಕೆಯ ಮಗು ಆಸ್ಪತ್ರೆಯಲ್ಲಿದೆ. ಆ ಪುಟ್ಟ ಬಾಲಕ ಅಮ್ಮ ಎಲ್ಲಿ ಎಂದರೆ ಕಾಲ್ತುಳಿತದಿಂದ ಸತ್ತು ಹೋದಳು ಎಂದು ಹೇಳಲು ಆಗುತ್ತಾ?
ಹಾಗಾದರೆ ಇದಕ್ಕೆ ಉತ್ತರ ಏನು?
ಈಗಾಗಲೇ ಅಲ್ಲು ಅರ್ಜುನ್ ಅವರನ್ನು ಬಂಧಿಸಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಹಾಗಾದರೆ ಆವತ್ತೇ ಬಂಧಿಸಿ ಕೆಲವೇ ಗಂಟೆಗಳೊಳಗೆ ನ್ಯಾಯಾಲಯದಿಂದ ಜಾಮೀನು ಹೇಗೆ ಸಿಕ್ಕಿತು ಎನ್ನುವ ಪ್ರಶ್ನೆ ಕೆಲವರಲ್ಲಿ ಉದ್ಭವಿಸುತ್ತದೆ. ಇಲ್ಲಿ ವಿಷಯ ಇರುವುದು ಇಷ್ಟೇ. ಯಾವಾಗ ಈ ದುರ್ಘಟನೆ ಸಂಭವಿಸಿತೋ ಆವಾಗ ಒಟ್ಟು 11 ಜನರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಆಗಲೇ ಅಲ್ಲು ಅರ್ಜುನ್ ಅವರ ಮೇಲೆ ದಾಖಲಾಗಿರುವ ಎಫ್ ಐಆರ್ ರದ್ದು ಕೋರಿ ಅವರ ಪರ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಈ ನಡುವೆ ಅಲ್ಲು ಅರ್ಜುನ್ ಅವರನ್ನು ಅವರ ಮನೆಗೆ ತೆರಳಿ ಬಂಧಿಸಿದ ಪೊಲೀಸರು ಪೊಲೀಸ್ ಠಾಣೆಗೆ ನಂತರ ಅಲ್ಲಿಂದ ಆಸ್ಪತ್ರೆಗೆ ವೈದ್ಯರ ತಪಾಸಣೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಕೆಳ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ನೀಡಿದ ಕಾರಣ ಜೈಲಿಗೆ ಬಿಟ್ಟು ಬಂದಿದ್ದಾರೆ. ಆವತ್ತೆ ಹೈಕೋರ್ಟ್ ಎಫ್ ಐಆರ್ ರದ್ದು ಕೋರಿದ್ದ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದೆ. ಆದರೆ ಅದರ ಪ್ರತಿ ಜೈಲಿಗೆ ತರುವಷ್ಟರಲ್ಲಿ ಸ್ವಲ್ಪ ತಡವಾದ ಕಾರಣ ಆವತ್ತು ರಾತ್ರಿ ಅಲ್ಲು ಅರ್ಜುನ್ ಜೈಲಿನಲ್ಲಿ ಕಳೆದು ಮರುದಿನ ಬೆಳಿಗ್ಗೆ ಬಿಡುಗಡೆಯಾಗಿ ಮನೆಗೆ ಬಂದಿದ್ದಾರೆ.
ಅವರು ಮನೆಗೆ ಬಂದದ್ದೇ ತಡ ತೆಲುಗು ಚಿತ್ರರಂಗದ ಅನೇಕ ಸ್ಟಾರ್ ಗಳು ಮನೆಗೆ ಆಗಮಿಸಿ ಅಲ್ಲು ಅರ್ಜುನ್ ಅವರಿಗೆ ಧೈರ್ಯ ತುಂಬಿದ್ದಾರೆ. ಈ ನಡುವೆ ಮೃತಳ ಪತಿ ತಾನು ಕೇಸ್ ವಾಪಾಸು ಪಡೆದುಕೊಳ್ಳುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಆ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರ ನೀಡುತ್ತೇನೆ ಎಂದು ಅಲ್ಲು ಅರ್ಜುನ್ ಘೋಷಿಸಿದ್ದಾರೆ. ಈ ಒಟ್ಟು ಪ್ರಕರಣದಲ್ಲಿ ಸಿಎಂ ರೇವಂತ್ ರೆಡ್ಡಿ ಅವರ ಹೇಳಿಕೆಯನ್ನು ಗಮನಿಸಿದರೆ ಅನೇಕರಿಗೆ ಆಶ್ಚರ್ಯ ಮತ್ತು ಅಲ್ಲು ಕುಟುಂಬಕ್ಕೆ ಬೇಸರ ಮತ್ತು ಆಕ್ರೋಶವೂ ಮೂಡಿದೆ. ಸಿಎಂ ಹೇಳಿದ್ದೇನೆಂದರೆ ” ಸಿನೆಮಾ ಸ್ಟಾರ್ ಮತ್ತು ಸಾಮಾನ್ಯ ಜನ ಇಬ್ಬರೂ ಕಾನೂನಿನ ಮುಂದೆ ಸಮಾನರು. ಸಿನೆಮಾದವರು ಹಣ ಹಾಕುತ್ತಾರೆ, ತೆಗೆಯುತ್ತಾರೆ, ಅದೇನೂ ದೊಡ್ಡ ಚರ್ಚೆ ಮಾಡುವ ವಿಷಯವಾ. ಆದರೆ ಸತ್ತಿರುವ ಅಭಿಮಾನಿಯ ಕುಟುಂಬದ ಬಗ್ಗೆ ಯಾರಾದರೂ ಮಾತನಾಡುತ್ತಾರಾ, ಅವರ ಮಗ ಆಸ್ಪತ್ರೆಯಲ್ಲಿ ನರಳುತ್ತಿದ್ದರೂ ಯಾರಾದರೂ ಕೇಳಿದ್ದಾರಾ? ಭಾರತ – ಪಾಕ್ ಗಡಿಯಲ್ಲಿ ಯುದ್ಧ ಮಾಡಿ ಭಾರತವನ್ನು ಜಯಿಸಿ ಬಂದವರ ಹಾಗೆ ಈ ಸಿನೆಮಾದವರಿಗೆ ವಿಶೇಷ ಸನ್ಮಾನ ಯಾಕೆ? ಅಲ್ಲು ಅರ್ಜುನ್ ಸುಮ್ಮನೆ ಬಂದು ಸಿನೆಮಾ ನೋಡಿ ಹೋದರೆ ಪರವಾಗಿರಲಿಲ್ಲ. ಇವರು ಕಾರಿನ ಬಾನೆಟ್ ನಿಂದ ಹೊರಗೆ ಬಂದು ಅಭಿಮಾನಿಗಳಿಗೆ ಕೈ ಬೀಸಿ ಅಲ್ಲಿಂದ ಪ್ರಚೋದನಾತ್ಮಕವಾಗಿ ವರ್ತಿಸಿದ್ದೇ ಇದಕ್ಕೆಲ್ಲಾ ಕಾರಣ” ಎಂದು ಹೇಳಿದ್ದಾರೆ.
ಜನರು ಎಲ್ಲಿಯವರೆಗೂ ಈ ಸಿನೆಮಾ ರಂಗದ ಹೀರೋಗಳಿಗೆ ವಿಶೇಷ ಪ್ರಾಮುಖ್ಯತೆ ಕೊಡುತ್ತಾರೋ, ಮೊದಲ ದಿನವೇ ಸಿನೆಮಾ ನೋಡಬೇಕು, ಪ್ರೀಮಿಯರ್ ಶೋ ನೋಡಬೇಕು ಎನ್ನುವ ಹಟಕ್ಕೆ ಬೀಳುತ್ತಾರೋ ಆಗೆಲ್ಲ ಇಂತಹ ಘಟನೆಗಳು ಹಿಂದೆನೂ ಆಗಿವೆ. ಅಂತಿಮವಾಗಿ ಹೋಗುವುದು ಜನಸಾಮಾನ್ಯರ ಪ್ರಾಣ. ಈ ಸಿನೆಮಾ ಹುಚ್ಚು ಬಿಟ್ಟು, ಅದನ್ನೊಂದು ಮನೋರಂಜನಾ ಸಾಧನವಾಗಿ ಮಾತ್ರ ನೋಡಿದರೆ ಎಲ್ಲರಿಗೂ ಒಳ್ಳೆಯದು. ಅದು ಅತಿರೇಕಕ್ಕೆ ಹೋದರೆ ಹೀಗೆ ಎರಡೂ ಕಡೆಯವರಿಗೂ ತೊಂದರೆ. ಪ್ರಸಿದ್ಧಿಯೊಂದಿಗೆ ಸೈಡ್ ಎಫೆಕ್ಟ್ ಆಗಿ ಸ್ಟಾರ್ ಗಳಿಗೆ ಇದು ಕೂಡ ಸಿಗುತ್ತದೆ. ನ್ಯಾಯಾಲಯದಲ್ಲಿ ಕೇಸ್ ನಡೆಯುವಷ್ಟು ದಿನ ಅನುಭವಿಸಲೇಬೇಕು. ಒಂದು ವೇಳೆ ತೆಲಂಗಾಣ ಪೊಲೀಸರು ಸಕ್ಷಮವಾದ ವಾದ ಮಂಡಿಸಿ, ಬೇಲ್ ರದ್ದಾಗಲೇ ಬೇಕು ಎನ್ನುವ ಒಂದೇ ಏಜೆಂಡಾದಲ್ಲಿ ಪ್ರಯತ್ನಪಟ್ಟರೆ ಮತ್ತು ಹೈಕೋರ್ಟ್ ಪೊಲೀಸರ ವಾದ ಪುರಸ್ಕರಿಸಿದರೆ ಅಲ್ಲು ಅರ್ಜುನ್ ಮತ್ತೆ ಜೈಲಿಗೆ ಹೋಗಬೇಕಾಗಿಯೂ ಬರಬಹುದು!.
Leave A Reply