ಜೈ ಶ್ರೀರಾಮ್ ಎನ್ನುವುದು ಅಪರಾಧವೇ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್!
ಮಸೀದಿಯ ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದು ಶಿಕ್ಷಾರ್ಹ ಅಪರಾಧವೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಇಬ್ಬರು ವ್ಯಕ್ತಿಗಳು ಮಸೀದಿಯ ಆವರಣಕ್ಕೆ ತೆರಳಿ ಜೈ ಶ್ರೀರಾಮ್ ಎಂದು ಕೂಗಿದ್ದ ವಿಷಯದಲ್ಲಿ ಪ್ರಕರಣ ದಾಖಲಾಗಿ ಇಬ್ಬರನ್ನು ಬಂಧಿಸಲಾಗಿತ್ತು. ಈ ಕೇಸನ್ನು ಮಾನ್ಯ ಉಚ್ಚ ನ್ಯಾಯಾಲಯ ವಜಾಗೊಳಿಸಿತ್ತು.
ಅದನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರು ಈ ಬಗ್ಗೆ ” ಅವರು ಒಂದು ಧರ್ಮದ ಘೋಷಣೆಗಳನ್ನು ಕೂಗಿದ್ದಿರಬಹುದು. ಆದರೆ ಅದು ಅಪರಾಧದ ವ್ಯಾಪ್ತಿ ಹೇಗೆ ಬರುತ್ತದೆ?” ಎಂದು ಪ್ರಶ್ನಿಸಿದರು. ಇಬ್ಬರು ನ್ಯಾಯಮೂರ್ತಿಗಳ ಪೀಠದಲ್ಲಿದ್ದ ಇನ್ನೊಬ್ಬರು ನ್ಯಾಯಮೂರ್ತಿಗಳೆಂದರೆ ಜಸ್ಟೀಸ್ ಸಂದೀಪ್ ಮೆಹ್ತಾ.
ಹಿರಿಯ ವಕೀಲ ದೇವದತ್ತ ಕಾಮತ್ ತಮ್ಮ ವಾದ ಮಂಡಿಸುತ್ತಾ, ಬೇರೆ ಮತ ಧರ್ಮದ ಕೇಂದ್ರದಲ್ಲಿ ಆ ಧರ್ಮದಲ್ಲದವರು ತಮ್ಮ ಧರ್ಮದ ಘೋಷಣೆಗಳನ್ನು ಕೂಗುವುದು ಮತೀಯ ವಿಷಯದಲ್ಲಿ ಮನಸ್ತಾಪ ಉಂಟಾಗಿ ಎರಡು ಸಮುದಾಯದ ನಡುವೆ ವೈರತ್ವಕ್ಕೆ ಕಾರಣವಾಗುತ್ತದೆ. ಇದು ಐಪಿಸಿ 153 ಎ ಅಡಿಯಲ್ಲಿ ಬರುತ್ತದೆ” ಎಂದು ಹೇಳಿದರು. ಈ ಬಗ್ಗೆ ಪ್ರಶ್ನೆ ಕೇಳಿದ ನ್ಯಾಯ ಪೀಠ ಈ ಪ್ರಕರಣದಲ್ಲಿ ಏನಾದರೂ ಸಾಕ್ಷ್ಯಗಳು ಇವೆಯಾ ಎಂದದ್ದಕ್ಕೆ ಸಿಸಿಟಿವಿ ಫೂಟೇಜ್ ಇದ್ದು, ಆ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಕೀಲರು ಮಾಹಿತಿ ನೀಡಿದರು. ನ್ಯಾಯಮೂರ್ತಿಗಳು ಮುಂದುವರೆದು ಆರೋಪಿಗಳು ಮಸೀದಿಯ ಸನಿಹದಲ್ಲಿ ಕಾಣಿಸಿಕೊಂಡರು ಎನ್ನುವುದೇ ಅವರು ಘೋಷಣೆಗಳನ್ನು ಕೂಗಿದ್ದಾರೆ ಎನ್ನುವುದಕ್ಕೆ ಪುರಾವೆಯೇ ಎಂದು ಕೇಳಿದ್ದಕ್ಕೆ ವಕೀಲ ಕಾಮತ್, ಅದು ಸಾಬೀತುಪಡಿಸುವುದು ಪೊಲೀಸರ ಕರ್ತವ್ಯ ಎಂದು ಹೇಳಿದರು.
ದೂರಿನ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಐತೂರು ಗ್ರಾಮದ ಮರ್ದಾಲ ಎನ್ನುವ ಏರಿಯಾದಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸೆಪ್ಟೆಂಬರ್ 2023 ರಂದು , ದೂರುದಾರ ಹಾಗೂ ಇನ್ನೊಬ್ಬ ವ್ಯಕ್ತಿ ಮಸೀದಿಯ ಕಚೇರಿಯಲ್ಲಿ ಕುಳಿತಿದ್ದಾಗ ಬೆಳಿಗ್ಗೆ 10.30 ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಮಸೀದಿಯ ಕಂಪೌಂಡ್ ಪ್ರವೇಶಿಸಿ ಮಸೀದಿಯ ಪ್ರವೇಶ ದ್ವಾರದ ಎದುರು ನಿಂತು ಘೋಷಣೆ ಕೂಗಿ ನಂತರ ಬೈಕಿನಲ್ಲಿ ಪರಾರಿಯಾದರು ಎನ್ನುವ ಪ್ರಕರಣ ದಾಖಲಾಗಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸೆಪ್ಟೆಂಬರ್ 25, 2023 ರಂದು ಇಬ್ಬರನ್ನು ಬಂಧಿಸಲಾಗಿತ್ತು
Leave A Reply