ವಿಜಯಲಕ್ಷ್ಮಿ ಶಿಬರೂರು, ಸುಧೀರ್ ಶೆಟ್ಟಿ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ..
ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರವರೆಗಿನ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಈ ಪ್ರಶಸ್ತಿಗಳನ್ನು ಸರ್ಕಾರವು 2001ನೇ ಸಾಲಿನಿಂದ ಪ್ರಾರಂಭಿಸಿದ್ದು, 2016 ರವರೆಗೆ ನಾಡಿನ 32 ಜನ ಹಿರಿಯ ಪತ್ರಕರ್ತರು ಈ ಎರಡೂ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಕೋವಿಡ್ ಹಾಗೂ ಇತರೆ ಕಾರಣಗಳಿಂದ ವಿಳಂಬವಾಗಿದ್ದ 2017ರಿಂದ 2023ರ ವರೆಗಿನ ಏಳು ವರ್ಷಗಳ ಅವಧಿಯ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಹಾಗೂ ಕೆ.ಶಿವಕುಮಾರ್ ಅವರಿದ್ದ ಸಮಿತಿಯು ಆಯ್ಕೆ ಮಾಡಿದೆ. ಪ್ರಶಸ್ತಿಯು ತಲಾ ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ, ಅಭಿನಂದನಾ ಪತ್ರ ಒಳಗೊಂಡಿರುತ್ತದೆ.
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ವಿಜೇತರ ವಿವರ ಹೀಗಿದೆ…
ವಿಜಯಲಕ್ಷ್ಮಿ ಶಿಬರೂರು (2017) : ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಶಿಬರೂರು ಗ್ರಾಮದವರಾದ ವಿಜಯಲಕ್ಷ್ಮಿ ಅವರು, ಕಳೆದ ಸುಮಾರು 25 ವರ್ಷಗಳಿಂದ ನಾಡಿನ ವಿವಿಧ ಮಾಧ್ಯಮಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅರಣ್ಯ ಸಂರಕ್ಷಣೆ, ಅಪಾಯಕಾರಿ ಆಹಾರ ಪದಾರ್ಥಗಳು, ಪ್ಲಾಸ್ಟಿಕ್ ಅಪಾಯಗಳು ಮತ್ತಿತರ ಜಾಗೃತಿ ಮೂಡಿಸುವ ವರದಿಗಳನ್ನು ಎಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ಬಿತ್ತರಿಸಿದ್ದಾರೆ. ಪರಿಸರ ಜಾಗೃತಿಯ ವರದಿಗಳನ್ನು ಪ್ರಕಟಿಸಿದ್ದಾರೆ.
ವಿಜಯಲಕ್ಷ್ಮಿ ಶಿಬರೂರು ಅವರಿಗೆ 2017 ನೇ ಸಾಲಿನ ಪ್ರಶಸ್ತಿ ದೊರಕಿದರೆ, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿ.ಎಂ. ಟಿ ರಾಜೀವ್ ಅವರಿಗೆ 2018 ನೇ ಪ್ರಶಸ್ತಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗುಬ್ಬಿ ಗ್ರಾಮದ ಏಷ್ಯಾನೆಟ್ ಸುವರ್ಣ ನ್ಯೂಸ್ ಇದರ ವಿನೋದ್ ಕುಮಾರ್ ಬಿ ನಾಯ್ಕ್ ಅವರಿಗೆ 2019 ನೇ ಸಾಲಿನ ಪ್ರಶಸ್ತಿ, 2020 ನೇ ಸಾಲಿನ ಪ್ರಶಸ್ತಿಯನ್ನು ಹಾವೇರಿ ಜಿಲ್ಲೆಯ ಮಾಲತೇಶ ಗದಿಗೆಪ್ಪ ಅಂಗೂರ ಅವರಿಗೆ ನೀಡಲಾಗುತ್ತದೆ. ಹಾಗೇ ಉಡುಪಿ ಜಿಲ್ಲೆಯ ಪಾದುಬೆಟ್ಟು ಗ್ರಾಮದ ಸುಧೀರ್ ಶೆಟ್ಟಿಯವರಿಗೆ 2021 ನೇ ಸಾಲಿನ ಪ್ರಶಸ್ತಿ, ಮಧುಗಿರಿ ತಾಲೂಕಿನ ಮಲ್ಲಿಕಾರ್ಜುನ ಹೊಸಪಾಳ್ಯ ಅವರಿಗೆ 2022 ನೇ ಸಾಲಿನ ಪ್ರಶಸ್ತಿ, ಬೆಂಗಳೂರಿನ ಆರ್ ಮಂಜುನಾಥ್ ಅವರಿಗೆ 2023 ನೇ ಸಾಲಿನ ಪ್ರಶಸ್ತಿ ಪ್ರಕಟಿಸಲಾಗಿದೆ.
Leave A Reply