ಮದುವೆ ಮಾಡಿಸಿ ಇಲ್ಲದಿದ್ದರೆ ಸಾಯುತ್ತೇನೆ ಎಂದವನು ತಕ್ಷಣ ಗೊಟಕ್!

ಗ್ರಾಮೀಣ ಭಾಗದ ಯುವಕರಿಗೆ ಮದುವೆಯಾಗಲು ಸೂಕ್ತ ಹೆಣ್ಣು ಸಿಗುವುದಿಲ್ಲ ಎನ್ನುವ ಸಂಕಷ್ಟ ಯಾವಾಗಲೂ ಇದ್ದೇ ಇದೆ. ಹಳ್ಳಿಗಳಲ್ಲಿ ರೈತರಿಗೆ, ಬಾಣಸಿಗರಿಗೆ, ಅರ್ಚಕರಿಗೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಶ್ರಮಪಟ್ಟು ದುಡಿಯುವ ಯುವಕರಿಗೆ ಮದುವೆಯಾಗಲು ಕನ್ಯೆ ಸಿಗದೇ ಅವರು ಒದ್ದಾಡುವ ಘಟನೆಗಳು ಒಂದಲ್ಲ ಒಂದು ಕಡೆ ನೋಡ್ತಾ ಇರಬಹುದು. ಕೆಲವರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡು ಬದುಕನ್ನು ಅಂತ್ಯಗೊಳಿಸಿದ್ದಾರೆ.
ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರು ಕೇಳುವುದಿಲ್ಲ. ಕೊಳ್ಳೇಗಾಲದ ಯುವಕನೊಬ್ಬನಿಗೆ ಮದುವೆ ಮಾಡಿಸಲು ಮನೆಯವರು ಹೆಣ್ಣು ಹುಡುಕುತ್ತಿದ್ದರು. ಆದರೆ ಸಮಸ್ಯೆ ಏನೆಂದರೆ ಅವನ ಮನೆ ಚಿಕ್ಕದು. ಅದರೊಂದಿಗೆ ಸ್ವಂತ ಜಮೀನಿಲ್ಲ. ಇದರಿಂದಾಗಿ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿರಲಿಲ್ಲ.
ಈ ನಡುವೆ ಮದುವೆಗೆ ಯಾರೂ ಹೆಣ್ಣುಕೊಡಲ್ಲ ಎಂದು ಮಸಣ ಶೆಟ್ಟಿಗೆ ಸಿಕ್ಕಾಪಟ್ಟೆ ಮನ ನೊಂದಿತ್ತು. ಅದರಿಂದ ಕುಡಿಯಲು ಶುರು ಮಾಡಿದ. ಕುಡಿತದ ಚಟ ಎಷ್ಟಾಗಿತ್ತು ಎಂದರೆ ಮನೆಯವರು ಹೆಣ್ಣು ಹುಡುಕುವುದನ್ನೇ ಬಿಟ್ಟುಬಿಟ್ಟಿದ್ದರು. ಕೊನೆಗೆ ಅದೊಂದು ಬಿಟ್ಟರೆ ಮದುವೆಯಾಗಬಹುದು ಎಂದು ಸಂಬಂಧಿಕರು ಹೇಳಿದ್ದರಿಂದ ಅದನ್ನು ಬಿಟ್ಟಿದ್ದ. ಆದರೆ ಆಗಲೂ ಮದುವೆಗೆ ಹುಡುಗಿ ಸಿಗುತ್ತಿಲ್ಲ, ಇನ್ನು ವಧು ಸಿಗದಿದ್ದರೆ ಜೀವನ ಅಂತ್ಯಗೊಳಿಸುತ್ತೇನೆ ಎಂದು ತಾಯಿಗೆ ಹೆದರಿಸಲು ಒಂದು ಕೆಟ್ಟ ಪ್ಲಾನ್ ಮಾಡಿದ. ಊರಿನ ಹೈಟೆನ್ಷನ್ ಕಂಬ ಏರಿಬಿಟ್ಟ.
ಅಲ್ಲಿಯೇ ನಿಂತು ಮದುವೆಗೆ ಹುಡುಗಿ ಸಿಗದಿದ್ದರೆ ಇಲ್ಲಿಯೇ ಸಾಯುತ್ತೇನೆ ಎಂದು ಹೆದರಿಸಿದ. ಅವನ ಮನೆಯಲ್ಲಿ ತಾಯಿಗೆ ಯಾರೋ ವಿಷಯ ತಿಳಿಸಿದರು. ಅವರು ಓಡೋಡಿ ಬಂದರು. ಇಳಿಯೋ ಎಂದು ಅಂಗಲಾಚಿದರು. ಎಷ್ಟು ಬೇಡಿದರೂ ಇವನು ಇನ್ನಷ್ಟು ಹೆದರಿಸಲು ಶುರು ಮಾಡಿಕೊಂಡ. ಈ ಗಡಿಬಿಡಿಯಲ್ಲಿ ಹೈಟೆನ್ಷನ್ ತಂತಿಯನ್ನು ಹಿಡಿಯಲು ಹೋಗಿ ಅದರಲ್ಲಿ ಹರಿಯುತ್ತಿದ್ದ ವಿದ್ಯುತ್ ಪ್ರವಹಿಸಿ ಅಲ್ಲಿಯೇ ಕೊನೆಯುಸಿರೆಳೆದುಕೊಂಡ. ಈ ಮೂಲಕ 27 ವರ್ಷದ ಮಸಣ ಶೆಟ್ಟಿಯ ಬಾಳು ಅಂತ್ಯವಾಯಿತು.
Leave A Reply