ದೇಶದ ಟಾಪ್ ನ್ಯೂಸ್ ನಿರೂಪಕ ಸುಧೀರ್ ಚೌಧರಿ ಇನ್ನು ಡಿಡಿಯಲ್ಲಿ 15 ಕೋಟಿ ಸಂಬಳ!

ದಶಕದ ತನಕ ಝಿ ನ್ಯೂಸ್ ವಾಹಿನಿಯಲ್ಲಿ ಕೆಲಸ ನಿರ್ವಹಿಸಿ ನಂತರ ಪ್ರಸ್ತುತ ಆಜ್ ತಕ್ ನಲ್ಲಿ ಕನ್ಸಲ್ಟಿಂಗ್ ಎಡಿಟರ್ ಆಗಿರುವ ಸುಧೀರ್ ಚೌಧರಿ ಇನ್ನು ಮುಂದೆ ಪ್ರಸಾರ ಭಾರತಿ ಬೋರ್ಡ್ ಇದರ ಡಿಡಿ ನ್ಯೂಸ್ ನಲ್ಲಿ ದಿನಕ್ಕೆ ಒಂದು ಗಂಟೆ ಕಾರ್ಯಕ್ರಮ ನಿರ್ವಹಿಸಿ ಕೊಡಲಿದ್ದಾರೆ ಎನ್ನುವ ವಿಷಯ ಹೊರಬಿದ್ದಿದೆ. ಈ ಬಗ್ಗೆ ಡಿಡಿ ನ್ಯೂಸ್ ಅಧಿಕೃತವಾಗಿ ಮಾಹಿತಿ ನೀಡದಿದ್ದರೂ ಈ ಬಗ್ಗೆ ಮಾಧ್ಯಮಗಳಲ್ಲಿ ವಿಷಯ ಚರ್ಚೆಯಲ್ಲಿರುವುದು ಮಾತ್ರ ನಿಜ.
ಒಂದು ವೇಳೆ ಇದು ಅನುಷ್ಠಾನಕ್ಕೆ ಬಂದರೆ ದೇಶದಲ್ಲಿಯೇ ಅತೀ ಹೆಚ್ಚು ಸಂಭಾವನೆ ಪಡೆಯುವ ನ್ಯೂಸ್ ನಿರೂಪಕರಲ್ಲಿ ಇವರು ಅಗ್ರಗಣ್ಯರೆನಿಸಿಕೊಳ್ಳಲಿದ್ದಾರೆ. ಇವರು ನಿತ್ಯ ಫ್ರೈಮ್ ಟೈಮ್ ನಲ್ಲಿ ಒಂದು ಗಂಟೆ ಡಿಡಿಯಲ್ಲಿ ಕಾಣಿಸಿಕೊಳ್ಳಲಿದ್ದು, ವಾರಕ್ಕೆ ಐದು ದಿನ ಕಾರ್ಯಕ್ರಮ ನಡೆಸಿಕೊಳ್ಳಲಿದ್ದಾರೆ. ಇದರಿಂದ ವರ್ಷಕ್ಕೆ ಒಟ್ಟು 260 ಎಪಿಸೋಡ್ ಗಳನ್ನು ಅವರು ನಿರ್ವಹಣೆ ಮಾಡಿಕೊಟ್ಟಂತೆ ಆಗಲಿದೆ. ಇದಕ್ಕಾಗಿ ಅವರ ಸಂಭಾವನೆ 15 ಕೋಟಿ ವರ್ಷಕ್ಕೆ ನಿಗದಿಯಾಗಿದ್ದು ಮತ್ತು ಜಿಎಸ್ ಟಿ ಪ್ರತ್ಯೇಕ ನೀಡಲಾಗುತ್ತದೆ. ಇನ್ನು ಅದರೊಂದಿಗೆ ವಾರ್ಷಿಕವಾಗಿ 10 ಶೇಕಡಾ ಸಂಭಾವನೆ ಹೆಚ್ಚಿಸುವ ಒಪ್ಪಂದವೂ ಆಗಿದೆ. ಸರಕಾರಿ ಸ್ವಾಮ್ಯದ ಅಂಗಸಂಸ್ಥೆಯೊಂದು ಇಷ್ಟು ದೊಡ್ಡ ಮೊತ್ತವನ್ನು ಒಬ್ಬ ನಿರೂಪಕನ ಒಂದು ಗಂಟೆಯ ಕಾರ್ಯಕ್ರಮಕ್ಕೆ ಖರ್ಚು ಮಾಡುತ್ತಿರುವುದು ಮಾಧ್ಯಮ ಪಂಡಿತರ ಹುಬ್ಬೇರಿಸುವಂತೆ ಮಾಡಿದೆ. ಅಷ್ಟಕ್ಕೂ ಸುಧೀರ್ ಚೌಧರಿಯವರ ಆಯ್ಕೆ ಹೇಗೆ ಆಯಿತು ಎನ್ನುವುದೇ ಈಗಿರುವ ಕುತೂಹಲ.
ಆರಂಭದಲ್ಲಿ ಪ್ರಸಾರ ಭಾರತಿ ಬೋರ್ಡ್ ಒಂದು ಸಂಶೋಧನೆ ಮತ್ತು ಆಯ್ಕೆಯ ಸಮಿತಿಯನ್ನು ರಚಿಸಿತು. ಅದರ ನೇತೃತ್ವವನ್ನು ಪ್ರಸಾರ ಭಾರತಿ ಬೋರ್ಡಿನ ಸದಸ್ಯ ಅಶೋಕ್ ಟೆಂಡನ್ ಅವರಿಗೆ ನೀಡಿತು. ಈ ಸಮಿತಿ ಡಿಡಿ ನ್ಯೂಸ್ ಹೆಚ್ಚು ಸ್ಟ್ರಾಂಗ್ ಆಗಿ ಮೂಡಿ ಬರಲು ಮಾಡಬೇಕಾದ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿತು. ನಿರೂಪಕರುಗಳ ಟಿಆರ್ ಪಿ ರೆಕಾರ್ಡ್, ವಿಶ್ವಾಸಾರ್ಹತೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವ ಎಲ್ಲವನ್ನು ಪರಾಮರ್ಶಿಸಿ ಕೊನೆಗೆ ಈ ನಿರ್ಧಾರಕ್ಕೆ ಬಂದಿದೆ. ಈ ಕಾರ್ಯಕ್ರಮವನ್ನು ಇಎಸ್ ಎಸ್ ಪಿಆರ್ ಐಟಿ ಪ್ರೈ ಲಿ ನಿರ್ವಹಿಸಿಕೊಂಡು ಬರಲಿದೆ. ಡಿಡಿ ನ್ಯೂಸ್ ಸ್ಟುಡಿಯೋ, ಹಾರ್ಡ್ ವೇರ್ ಮತ್ತು ನ್ಯೂಸ್ ಏಜೆನ್ಸಿ ಸೇವೆಗಳನ್ನು ಪೂರೈಸಲಿದೆ.
ಇನ್ನು ಕಚೇರಿ ಕೆಲಸದ ನಿಮಿತ್ತ ತಿರುಗಾಟಕ್ಕೆ ಹೋಗುವಾಗ ಡಿಡಿ ವಾಹಿನಿಯಿಂದ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಮತ್ತು ಫೈವ್ ಸ್ಟಾರ್ ಹೋಟೇಲ್ ಆತಿಥ್ಯವೂ ನೀಡುವ ಮಾತುಕತೆ ನಡೆದಿದೆ. ಇನ್ನು ವಾರ್ತೆಗಳ ಬೌದ್ಧಿಕ ಹಕ್ಕುಗಳ ಒಡೆತನ ಡಿಡಿ ನ್ಯೂಸ್ ವಾಹಿನಿಯಲ್ಲಿಯೇ ಉಳಿಯಲಿದೆ.
Leave A Reply