ಸಚಿವರ, ಶಾಸಕರ ವೇತನ, ಭತ್ಯೆ ಹೆಚ್ಚಳಕ್ಕೆ ಮಸೂದೆ!

ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರ ಅನುಭವಕ್ಕೆ ಬಂದು ಸರಕಾರದ ವಿರುದ್ಧ ಆಕ್ರೋಶ ಹೊರಬೀಳುತ್ತಿರುವುದು ಎಲ್ಲರಿಗೂ ಗೊತ್ತಿದೆ. ಒಂದು ಕಡೆಯಿಂದ ಗ್ಯಾರಂಟಿಗೆ ಹಣ ಸಾಕಾಗದೇ ಇದ್ದಬದ್ದ ವಸ್ತುಗಳಿಗೆ ಬೆಲೆ ಹೆಚ್ಚಿಸುತ್ತಿರುವ ಸರಕಾರ ಇನ್ನೊಂದೆಡೆ ಅಭಿವೃದ್ಧಿ ಕಾರ್ಯಗಳಿಗೂ ಹಣ ಹೊಂದಿಸಲಾಗದೇ ರಾಜ್ಯದಲ್ಲಿ ಪ್ರಗತಿ ಶೂನ್ಯವನ್ನಾಗಿಸಿದೆ. ಈಗ ಸರಕಾರ ಸಚಿವರಿಂದ ಹಿಡಿದು ಶಾಸಕರ ತನಕ ಎಲ್ಲರ ವೇತನ, ಭತ್ಯೆ ದುಪ್ಪಟ್ಟು ಮಾಡಲು ಹೊರಟಿದ್ದು, ಜನರ ಕೆಂಗೆಣ್ಣಿಗೆ ಗುರಿಯಾಗಿದೆ. ವೇತನ, ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧವಾಗಿದೆ. ಹಾಗಾದರೆ ಪ್ರಸ್ತುತ ಯಾರ ವೇತನ ಎಷ್ಟಿದೆ, ಎಷ್ಟು ಹೆಚ್ಚಾಗಲಿದೆ ಎನ್ನುವುದನ್ನು ನೋಡೋಣ.
ಈಗ ಶಾಸಕರಿಗೆ ಸಂಬಳ 40000 ಇದೆ. ಅದು 80000 ಕ್ಕೆ ಏರಿಕೆ ಆಗಲಿದೆ. ಅಂದರೆ ಒಂದೇ ಸಲಕ್ಕೆ ಡಬಲ್. ಇನ್ನು ಕ್ಷೇತ್ರ ಪ್ರವಾಸಕ್ಕೆ 60000 ಶಾಸಕರಿಗೆ ಸಿಗುತ್ತದೆ. ಅದು ಇನ್ನು 80000 ಕ್ಕೆ ಏರಲಿದೆ. ಇನ್ನು ರೈಲು, ವಿಮಾನ ಟಿಕೆಟ್ ವಾರ್ಷಿಕವಾಗಿ ಇವರಿಗೆ 2,50,000 ಇದ್ದರೆ ಅದು ಇನ್ನು 3,50,000 ಆಗಲಿದೆ. ಅದರೊಂದಿಗೆ ಶಾಸಕರಿಗೆ ಇನ್ನು ಕೆಲವು ಭತ್ಯೆಗಳು ಸಿಗಲಿದ್ದು, ಅದು ಪ್ರತ್ಯೇಕವಾಗಿರುತ್ತವೆ. ಇನ್ನು ಸಚಿವರಿಗೆ ಪ್ರಸ್ತುತ 60000 ರೂಪಾಯಿ ಸಂಬಳ ಇದ್ದರೆ ಅದು ಇನ್ನು 1.25 ಲಕ್ಷ ರೂಪಾಯಿಗೆ ಹೋಗಲಿದೆ. ಅದೇ ರೀತಿ ಮುಖ್ಯಮಂತ್ರಿ ವೇತನವೂ ಡಬಲ್ ಆಗಲಿದೆ. ಈಗ 75000 ರೂ ಇದ್ದದ್ದು ಇನ್ನು ಮುಂದೆ 1,50,000 ರೂ ಆಗಲಿದೆ. ಇನ್ನು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಆತಿಥ್ಯ ಭತ್ಯೆ 4.50 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗಳಾಗಲಿವೆ. ಇನ್ನು ಸಚಿವರಿಗೆ ಮನೆ ಬಾಡಿಗೆ ಭತ್ಯೆ 1.20 ಲಕ್ಷ ರೂಗಳಿಂದ ನೇರವಾಗಿ 2.50 ಲಕ್ಷ ರೂಪಾಯಿಗಳಿಗೆ ಹೋಗಲಿದೆ. ಇನ್ನು ಸಭ್ಯಾಧ್ಯಕ್ಷರ, ಸಭಾಪತಿಗಳ ವೇತನವೂ 75 ಸಾವಿರದಿಂದ 1.25 ಲಕ್ಷ ರೂಗಳಿಗೆ ಏರಲಿದೆ. ಇನ್ನು ಅವರ ಆತಿಥ್ಯ ಭತ್ಯೆ ಕೂಡ 4 ಲಕ್ಷದಿಂದ 5 ಲಕ್ಷ ರೂಪಾಯಿಗಳಿಗೆ ಏರಲಿದೆ. ಇವರುಗಳೊಂದಿಗೆ ಇನ್ನು ಸರಕಾರದ ವಿವಿಧ ಹುದ್ದೆಯಲ್ಲಿರುವ ಉಪಸಭಾಧ್ಯಕ್ಷ, ಉಪಸಭಾಪತಿ, ವಿಪಕ್ಷದ ನಾಯಕ, ಸರಕಾರದ ಮುಖ್ಯ ಸಚೇತಕ, ವಿಪಕ್ಷ ಮುಖ್ಯ ಸಚೇತಕರ ಮನೆ ಬಾಡಿಗೆಯೂ 1.60 ಲಕ್ಷ ರೂಗಳಿಂದ 2.50 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಲಿದೆ. ಅದರೊಂದಿಗೆ ಅವರ ಆತಿಥ್ಯ ಭತ್ಯೆಯೂ 2.50 ಲಕ್ಷ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಲಿದೆ. ಇವರೆಲ್ಲರೂ ಅವರವರ ಜಿಲ್ಲೆಯಲ್ಲಿ, ತಾಲೂಕಿನಲ್ಲಿರುವಾಗ ಸರಕಾರಿ ಅತಿಥಿ ಗೃಹ, ಸರಕರಿ ಕಚೇರಿಯಲ್ಲಿ ಇದ್ದರೆ, ಬೆಂಗಳೂರಿನಲ್ಲಿರುವಾಗ ವಿಧಾನಸೌಧದ ಪಕ್ಕದಲ್ಲಿರುವ ವಿಕಾಸ ಸೌಧದಲ್ಲಿ ಇರುತ್ತಾರೆ. ಆದರೆ ಮನೆ ಬಾಡಿಗೆ ಮಾತ್ರ ಇವರಿಗೆ ಪ್ರತಿ ತಿಂಗಳು ಲಕ್ಷಗಳಲ್ಲಿ ನಮ್ಮ ನಿಮ್ಮ ತೆರಿಗೆ ಹಣದಲ್ಲಿ ಭರಿಸಬೇಕಾಗುತ್ತದೆ.
ಇಷ್ಟೇ ಅಲ್ಲದೆ ಇವರೆಲ್ಲರೂ ಮಾಜಿಗಳಾದರೂ ಇವರಿಗೆ ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿ ಕೂಡ ನೀಡಲಾಗುತ್ತದೆ. ಶಾಸಕರಿಗೆ ಪಿಂಚಣಿ ಈಗ ಪ್ರಸ್ತುತ 50 ಸಾವಿರ ಇದ್ದರೆ ಇನ್ನು 75 ಸಾವಿರ ಆಗಲಿದೆ. ಹೆಚ್ಚುವರಿ ಪಿಂಚಣಿ ಇದ್ದದ್ದು 5 ರಿಂದ 20 ಸಾವಿರ ಆಗಲಿದೆ. ಮಾಜಿ ಶಾಸಕರ ವೈದ್ಯಕೀಯ ಭತ್ಯೆ 5 ರಿಂದ 20 ಸಾವಿರ ಆಗಲಿದೆ.
ಒಟ್ಟಿನಲ್ಲಿ ಜನಸಾಮಾನ್ಯರ ಸಂಬಳ ಹದಿನೈದು ಶೇಕಡಾ ಏರಲು ಕಷ್ಟವಿರುವ ಈ ದಿನಗಳಲ್ಲಿ ಶಾಸಕರು, ಸಚಿವರು ಏಕಾಏಕಿ ನೂರು ಶೇಕಡಾ ಏರಿಸುತ್ತಿರುವುದು ನಿಜಕ್ಕೂ ಅವರಿಗೆ ಆತ್ಮಸಾಕ್ಷಿಗೆ ನೋವಾಗಲ್ವೆ ಎನ್ನುವುದು ಕೇಳಬೇಕಾದ ಸಂಗತಿ.
Leave A Reply