ದೇಶದಲ್ಲಿಯೇ ಶ್ರೀಮಂತ ಶಾಸಕರ ಸರಾಸರಿಯಲ್ಲಿ ಮೊದಲ ಸ್ಥಾನ ಕರ್ನಾಟಕಕ್ಕೆ ಜಸ್ಟ್ ಮಿಸ್!

ಸದ್ಯ ಈ ವಿಷಯದಲ್ಲಿ ಕರ್ನಾಟಕದವರು ಹೆಮ್ಮೆಪಡುವುದಾ ಅಥವಾ ಅಸಹ್ಯ ಪಡುವುದಾ ಎಂದು ಗೊಂದಲಕ್ಕೆ ಈಡಾಗಿರುವುದು ಖಚಿತ. ಯಾವುದೇ ಪಂದ್ಯಾವಳಿಗಳಲ್ಲಿ ಮೊದಲ ಮೂರ್ನಾಕು ಸ್ಥಾನಗಳಲ್ಲಿ ನಮ್ಮವರು ಇದ್ದರೆ ನಾವು ನಿಜವಾಗಿಯೂ ಖುಷಿಪಡುವುದು ಸಹಜ. ಒಲಿಂಪಿಕ್ಸ್, ಕಾಮನ್ ವೆಲ್ತ್ ಅಥವಾ ಇನ್ಯಾವುದೇ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಮ್ಮ ದೇಶದವರು ಎಷ್ಟು ಪದಕಗಳನ್ನು ದೋಚಿದ್ದಾರೆ ಎನ್ನುವ ಕುತೂಹಲ ನಮಗೆ ಇದ್ದೇ ಇರುತ್ತದೆ. ಇನ್ನು ವಸ್ತುಗಳ ಉತ್ಪಾದನೆ, ಪರೀಕ್ಷೆಗಳಲ್ಲಿ ರ್ಯಾಂಕ್ ಹೀಗೆ ವಿವಿಧ ವಿಷಯಗಳಲ್ಲಿ ನಮ್ಮವರ ಸಾಧನೆಗಳ ಬಗ್ಗೆ ಕಾತರತೆ ಇರುತ್ತದೆ. ಅದೇ ರೀತಿಯಲ್ಲಿ ಭಾರತೀಯ ಶ್ರೀಮಂತ ಉದ್ಯಮಿಗಳ ಪಟ್ಟಿಯನ್ನು ನೋಡುವಾಗ ಅದರಲ್ಲಿ ಭಾರತೀಯರ ಸ್ಥಾನಗಳನ್ನು ನೋಡಿದರೂ ಖುಷಿಯಾಗುತ್ತದೆ. ಆದರೆ ಶ್ರೀಮಂತ ರಾಜಕಾರಣಿಗಳ ವಿಷಯ ಬಂದಾಗ ದೇಶದ ಶ್ರೀಮಂತ ಶಾಸಕರ ಪಟ್ಟಿ ಹೊರಗೆ ಬಿದ್ದಾಗ ನಮ್ಮವರು ಎನಿಸಿಕೊಂಡವರು ಟಾಪ್ ನಲ್ಲಿ ಇದ್ದರೆ ಅದೇಕೋ ಒಂದು ರೀತಿಯ ಅಸಹ್ಯ ಮತ್ತು ಅವರ ಬಗ್ಗೆ ಜಿಗುಪ್ಸೆ ಬಂದು ಬಿಡುತ್ತದೆ. ಯಾಕೆಂದರೆ ರಾಜಕಾರಣಿಗಳು ಶ್ರೀಮಂತರಾಗಲು ಯಾವ ದಾರಿಗಳನ್ನು ಕಂಡುಹಿಡಿದಿರುತ್ತಾರೆ ಎನ್ನುವ ಪೂರ್ವಾಗ್ರಹ ನಮ್ಮಲ್ಲಿ ಇರುತ್ತದೆ.
ಈಗ ಡೆಮಾಕ್ರೆಟಿಕ್ ರಿಫಾರ್ಮ್ ಫಾರ್ ಅಸೋಸಿಯೇಶನ್ ಬಿಡುಗಡೆಗೊಳಿಸಿರುವ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಘೋಷಿತ ಆಸ್ತಿಯ ಒಟ್ಟು ಮೌಲ್ಯವೇ 1,413 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಅದರೊಂದಿಗೆ ಮೂರನೇ ಸ್ಥಾನದಲ್ಲಿ ಗೌರಿಬಿದನೂರು ಕ್ಷೇತ್ರದ ಶಾಸಕ, ಕಾಂಗ್ರೆಸ್ ಮುಖಂಡ ಕೆ.ಎಚ್. ಪುಟ್ಟಸ್ವಾಮಿ ಗೌಡ ಅವರು 1,267 ಕೋಟಿ ರೂಪಾಯಿ ಆಸ್ತಿ ಮೌಲ್ಯವನ್ನು ಘೋಷಿಸಿದ್ದು, ನಾಲ್ಕನೇ ಸ್ಥಾನದಲ್ಲಿ ಕರ್ನಾಟಕದ ಗೋವಿಂದರಾಜ ನಗರದ ಪ್ರಿಯಕೃಷ್ಣ ಅವರು ಇದ್ದಾರೆ. ಇನ್ನು ಪ್ರಥಮ ಸ್ಥಾನ ಭಾರತೀಯ ಜನತಾ ಪಾರ್ಟಿಯ ಮಹಾರಾಷ್ಟ್ರದ ಶಾಸಕ ಪರಾಗ್ ಶಾ ಅವರ ಪಾಲಾಗಿದ್ದು, ಅವರ ಒಟ್ಟು ಆಸ್ತಿ ಮೌಲ್ಯವೇ 3,383 ಕೋಟಿ ರೂಪಾಯಿ ಆಗಿದೆ. ಇನ್ನು ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕರಾಗಿದ್ದು, ಆಂಧ್ರದ ಕುಪ್ಪಂ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರ ಆಸ್ತಿ ಮೌಲ್ಯ 931 ಕೋಟಿ ರೂಪಾಯಿ ಆಗಿದೆ.
ಕರ್ನಾಟಕದ ಒಟ್ಟು 31 ಶಾಸಕರು ನೂರು ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದು, ದೇಶದಲ್ಲಿಯೇ ಅತ್ಯಂತ ಶ್ರೀಮಂತ ಶಾಸಕರನ್ನು ಹೊಂದಿದ ರಾಜ್ಯವಾಗಿ ಮೂಡಿಬಂದಿದೆ. ಇನ್ನು ಆಂಧ್ರಪ್ರದೇಶ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. ಇನ್ನು ಮಹಾರಾಷ್ಟ್ರ 18 ಶ್ರೀಮಂತ ಶಾಸಕರನ್ನು ಹೊಂದಿದ್ದು ಮೂರನೇ ಸ್ಥಾನದಲ್ಲಿದೆ. ಇನ್ನು ಎಲ್ಲಾ ಶಾಸಕರ ಒಟ್ಟು ಘೋಷಿತ ಆಸ್ತಿಯನ್ನು ಸೇರಿಸಿದರೆ 14,179 ಕೋಟಿಯನ್ನು ಹೊಂದಿದ್ದು, ಅದರಲ್ಲಿಯೂ ಕರ್ನಾಟಕ ಮೊದಲ ಸ್ಥಾನದಲ್ಲಿದೆ.
ಇನ್ನು ಸರಾಸರಿ (ಎವರೇಜ್) ಆಸ್ತಿ ಮೌಲ್ಯದಲ್ಲಿ ಕರ್ನಾಟಕ 63.5 ಕೋಟಿ ರೂ ಇದ್ದರೆ ಆಂಧ್ರಪ್ರದೇಶ 65 ಕೋಟಿ ಸರಾಸರಿ ಹೊಂದಿದೆ. ಇನ್ನು ಮಹಾರಾಷ್ಟ್ರದ ಶಾಸಕರ ಸರಾಸರಿ ಆಸ್ತಿ ಮೌಲ್ಯ 43.44 ಕೋಟಿ ರೂಪಾಯಿ ಆಗಿದೆ.
ಹೀಗೆ ಕುಬೇರರ ಪಟ್ಟಿಯನ್ನು ಹೇಗೆ ನೋಡಿದರೂ ಕರ್ನಾಟಕದ ಶಾಸಕರು ಮೊದಲ ಸ್ಥಾನದಲ್ಲಿ ರಾರಾಜಿಸುತ್ತಿದ್ದಾರೆ. ಇಷ್ಟಾಗಿಯೂ ಜನಸೇವಕರು ಎನಿಸಿಕೊಂಡಿರುವ ಇವರು ತಮ್ಮ ಸಂಬಳ, ಭತ್ಯೆ ಏರಿಸಲು ಹೊಸ ಮಸೂದೆಯನ್ನು ಸಿದ್ಧಪಡಿಸಿರುವುದು ನಿಜಕ್ಕೂ ದುರಾದೃಷ್ಟ. ಅದು ಕೂಡ ಸಂಬಳ ಹೆಚ್ಚಿಸುತ್ತಿರುವ ಪ್ರಮಾಣ ಹದಿನೈದು ಇಪ್ಪತ್ತು ಶೇಕಡಾ ಅಲ್ಲ. ಬರೋಬ್ಬರಿ ಡಬಲ್.
Leave A Reply