ದಕ್ಷಿಣ ಕನ್ನಡದ ಇಬ್ಬರು, ಉಡುಪಿಯ ಒಬ್ಬರು ಸೇರಿ 18 ಶಾಸಕರನ್ನು ಸಸ್ಪೆಂಡ್ ಮಾಡಿದ ಯು.ಟಿ.ಖಾದರ್!

ಕರ್ನಾಟಕದ ಸದನದಲ್ಲಿ ಭಾರತೀಯ ಜನತಾ ಪಾರ್ಟಿಯ 18 ಶಾಸಕರನ್ನು ಅಮಾನತು ಮಾಡಿ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಆದೇಶ ಹೊರಡಿಸಿದ್ದಾರೆ. ಈ 18 ಸದಸ್ಯರನ್ನು ಆರು ತಿಂಗಳವರೆಗೆ ಅಮಾನತು ಮಾಡಿರುವ ಸ್ಪೀಕರ್ ಕ್ರಮದ ವಿರುದ್ಧ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಬಿಜೆಪಿ ಶಾಸಕರ ಅಮಾನತಿಗೆ ಮುಖ್ಯ ಕಾರಣ ಏನು?
ಸದನದಲ್ಲಿ ಬಹಳ ದೊಡ್ಡ ವಿಷಯವಾಗಿ ಚರ್ಚೆಯಲ್ಲಿರುವ ಹನಿಟ್ರಾಪ್ ಹಾಗೂ ಮುಸಲೀಯರಿಗೆ ಗುತ್ತಿಗೆಯಲ್ಲಿ 4 ಶೇಕಡಾ ಮೀಸಲಾತಿ ನೀಡುವುದರ ವಿರುದ್ಧ ಭಾರತೀಯ ಜನತಾ ಪಾರ್ಟಿಯ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದರು. ಇನ್ನು ಈ ವಿಷಯಗಳ ಬಗ್ಗೆ ಚರ್ಚೆಗೆ ಪಟ್ಟು ಹಿಡಿದು ವಿರೋಧ ಪಕ್ಷದ ಶಾಸಕರು ಬೆಳಿಗ್ಗೆಯಿಂದ ಸದನದಲ್ಲಿ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದರು.
ಈ ವರ್ತನೆಯನ್ನು ಖಂಡಿಸಿ ಸ್ಪೀಕರ್ ಯು. ಟಿ. ಖಾದರ್ ಅವರು ಬಿಜೆಪಿಯ 18 ಶಾಸಕರನ್ನು ಆರು ತಿಂಗಳ ಮಟ್ಟಿಗೆ ಅಮಾನತು ಮಾಡಿದ್ದಾರೆ. ಈ ಶಾಸಕರುಗಳು 6 ತಿಂಗಳ ತನಕ ವಿಧಾನಸೌಧದ ಒಳಗೆ ಯಾವುದೇ ಸಭೆಯಲ್ಲಿ ಮತ್ತು ಅಧಿವೇಶನ ನಡೆಯುವಾಗ ಪಾಲ್ಗೊಳ್ಳುವಂತಿಲ್ಲ.
ಈ ಹದಿನೆಂಟು ಶಾಸಕರಲ್ಲಿ ದಕ್ಷಿಣ ಕನ್ನಡದ ಇಬ್ಬರು ಶಾಸಕರುಗಳಾದ ಮಂಗಳೂರು ನಗರ ಉತ್ತರದ ಡಾ. ಭರತ್ ಶೆಟ್ಟಿ, ಮೂಲ್ಕಿ-ಮೂಡಬಿದ್ರೆಯ ಉಮಾನಾಥ ಕೋಟ್ಯಾನ್, ಉಡುಪಿಯ ಶಾಸಕ ಯಶಪಾಲ್ ಸುವರ್ಣ ಸೇರಿದ್ದಾರೆ. ಇನ್ನುಳಿದ ಪ್ರಮುಖ ಶಾಸಕರುಗಳಲ್ಲಿ ಅಶ್ವಥ ನಾರಾಯಣ, ಚನ್ನಬಸಪ್ಪ, ಶರಣ್ ಸಲಗರ್, ಹರೀಶ್ ಬಿ.ಪಿ, ಮುನಿರತ್ನ, ಧೀರಜ್ ಮುನಿರಾಜ್, ವಿಶ್ವನಾಥ್, ಸಿ.ಕೆ ರಾಮಮೂರ್ತಿ, ದೊಡ್ಡನಗೌಡ ಪಾಟೀಲ್, ಮತ್ತಿಮೂಡ್, ಚಂದ್ರು ಲಮಾಣಿ ಹಾಗೂ ಇನ್ನಿತರರು ಸೇರಿದ್ದಾರೆ.
Leave A Reply