40 ವರ್ಷಗಳಿಂದ ಈ ದೇವಳದಿಂದ ನಡೆಯುತ್ತಿದೆ ಇಫ್ತಾರ್ ಆಚರಣೆ!

ರಮ್ಜಾನ್ ಮುಸ್ಲಿಮರ ಪವಿತ್ರ ಮಾಸ. ಈ ಸಮಯದಲ್ಲಿ ಸೂರ್ಯಾಸ್ತಮಾನದ ನಂತರ ಉಪವಾಸ ಮುರಿದು ಆಹಾರ ಸೇವಿಸುವ ಪದ್ಧತಿ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರಲ್ಲಿ ವಿಶೇಷವೇನಿಲ್ಲ. ಇದು ದೇಶ, ವಿದೇಶದಲ್ಲಿ ನಡೆದುಕೊಂಡು ಬಂದಿದೆ. ಆದರೆ ಮುಸ್ಲಿಮರ ಇಫ್ತಾರ್ ಕೂಟಕ್ಕೆ ದೇವಾಲಯವೊಂದು ಆಹಾರ ಪೂರೈಸುತ್ತಿದೆ ಎನ್ನುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಅಷ್ಟಕ್ಕೂ ಈ ದೇವಸ್ಥಾನ ಇರುವುದು ಬೇರೆ ಎಲ್ಲಿಯೂ ಅಲ್ಲ. ತಮಿಳುನಾಡಿನ ರಾಜಧಾನಿ ಚೆನೈ ನಗರದ ಹೃದಯಭಾಗದಲ್ಲಿ.
ಈ ದೇವಸ್ಥಾನ ಚೆನೈನ ಮೈಲಾಪುರ್ ಎನ್ನುವ ಏರಿಯಾದಲ್ಲಿ ಇದೆ. ಕಳೆದ 40 ವರ್ಷಗಳಿಂದ ಪ್ರತಿ ರಮ್ಜಾನ್ ಮಾಸದಲ್ಲಿ ನಿತ್ಯ ಇಲ್ಲಿ ಇಫ್ತಾರ್ ಆಹಾರವನ್ನು ತಯಾರಿಸಲಾಗುತ್ತದೆ. ದಾದಾ ರತನಚಂದ್ ಎನ್ನುವ ನಿರಾಶ್ರಿತ ವ್ಯಕ್ತಿ ಭಾರತ ವಿಭಜನೆಯ ಸಂದರ್ಭದಲ್ಲಿ ಚೆನೈನಲ್ಲಿ ಆಶ್ರಯ ಪಡೆದುಕೊಂಡಿದ್ದಾಗ ಈ ದೇವಸ್ಥಾನವನ್ನು ನಿರ್ಮಿಸಿದ್ದರು. ನಂತರ ಇಲ್ಲಿ ಇಫ್ತಾರ್ ಆಹಾರವನ್ನು ತಯಾರಿಸುವ ಸಂಪ್ರದಾಯವನ್ನು ಆರಂಭಿಸಿದ್ದರು. ಅದು ಈಗ 40 ವರ್ಷಗಳಿಂದ ಜಾರಿಯಲ್ಲಿದೆ.
ಇಲ್ಲಿನ ಸ್ವಯಂ ಸೇವಕರು ನಿತ್ಯ ಬೆಳಿಗ್ಗೆ 7.30 ರಿಂದ ಆಹಾರ ತಯಾರಿಸುವ ಕೆಲಸಕಾರ್ಯವನ್ನು ಆರಂಭಿಸುತ್ತಾರೆ. ನಿತ್ಯ 1200 ಜನರಿಗೆ ಆಹಾರ ತಯಾರಿಸಲಾಗುತ್ತದೆ. ಅದರಲ್ಲಿ ಬಿರಿಯಾನಿ, ಫ್ರೈಡ್ ರೈಸ್, ಉಪ್ಪಿನಕಾಯಿ, ಕೇಸರಿ ಹಾಲು ಮತ್ತು ಹಣ್ಣುಹಂಪಲುಗಳು ಸೇರಿರುತ್ತವೆ. ದೇವಳದಲ್ಲಿ ತಯಾರಿಸಿದ ಆಹಾರವನ್ನು ಹತ್ತಿರದ ಮಸೀದಿಯಲ್ಲಿ ಅಲ್ಲಿ ಆಗಮಿಸಿದ ಜನರಿಗೆ ಹಂಚಲಾಗುತ್ತದೆ. ಅದರೊಂದಿಗೆ ಆಹಾರವನ್ನು ಮನೆಗಳಿಗೂ ಹಂಚುವ ಕ್ರಮ ಚಾಲ್ತಿಯಲ್ಲಿದೆ.
ಈ ದೇವಸ್ಥಾನ ಎಲ್ಲಾ ಧರ್ಮ, ಮತದವರ ನಡುವೆ ಸೌಹಾರ್ದ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ಇಲ್ಲಿನ ವಿವಿಧ ಮತ, ಸಂಪ್ರದಾಯದವರು ಅಭಿಪ್ರಾಯ ಪಟ್ಟಿದ್ದಾರೆ.
Leave A Reply