ರಿಕ್ಷಾ ಚಾಲಕನ ಮಗನ ಕಮಾಲ್! ಐಪಿಎಲ್ ಮೊದಲ ಪಂದ್ಯದಲ್ಲಿಯೇ 3 ವಿಕೆಟ್!

ಸಾಧಿಸುವ ಛಲ ಇದ್ದರೆ ಎಂತಹುದೇ ಕಷ್ಟವಾದರೂ ಸಹಿಸಿ ಯಶಸ್ಸಿನ ಶಿಖರ ಏರಬಹುದು ಎನ್ನುವುದಕ್ಕೆ ಮತ್ತೊಬ್ಬ ಯುವಕ ಸಾಕ್ಷಿಯಾಗಿದ್ದಾರೆ. ಅವರ ಹೆಸರು ವಿಘ್ನೇಶ್ ಪುತ್ತೂರು. ಇವರು ದಕ್ಷಿಣ ಕನ್ನಡದ ಪುತ್ತೂರಿನವರು ಅಲ್ಲ. ಇವರು ಮೂಲತ: ಕೇರಳದ ಮಲ್ಲಪುರಂನವರು. ಕ್ರಿಕೆಟಿನಲ್ಲಿ ಉನ್ನತ ಸಾಧನೆ ಮಾಡಬೇಕು ಎನ್ನುವ ಕಾರಣಕ್ಕೆ ತಂದೆ, ತಾಯಿಯ ಪ್ರೋತ್ಸಾಹದಿಂದ ತ್ರಿಶೂರ್ ಗೆ ಸ್ಥಳಾಂತರಗೊಂಡು ಕಾಲೇಜು ಮಟ್ಟದ ಕ್ರಿಕೆಟಿನಲ್ಲಿ ಮಧ್ಯಮ ವೇಗಿಯಾಗಿ ಕ್ರಿಕೆಟ್ ಯಾನವನ್ನು ಪ್ರಾರಂಭಿಸಿದರು. ನಂತರ ಸ್ಪಿನ್ ಬೌಲಿಂಗ್ ಗೆ ಶಿಫ್ಟ್ ಆದರು. ಅದು ಅವರ ಅದೃಷ್ಟಕ್ಕೆ ಕಾರಣವಾಯಿತು.
ಇವರು ರಿಸ್ಟ್ ಸ್ಪಿನ್ ಬೌಲಿಂಗ್ ಮಾಡುತ್ತಾ ಇದ್ದಾಗ ಆಯ್ಕೆಗಾರರ ಗಮನ ಸೆಳೆದು ಕೇರಳ ಕ್ರಿಕೆಟ್ ಲೀಗಿಗೆ ಆಯ್ಕೆಯಾದರು. ಅಲ್ಲಿ ಮುಂಬೈ ಇಂಡಿಯನ್ಸ್ ತಂಡ ಇವರ ಸಾಮರ್ತ್ಯ ಗುರುತಿಸಿತು. ಐಪಿಎಲ್ 2025 ರಲ್ಲಿ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಇವರನ್ನು ಕೇವಲ 30 ಲಕ್ಷಕ್ಕೆ ಖರೀದಿಸಿದೆ. ಆದರೆ ಮೊದಲ ಪಂದ್ಯದಲ್ಲಿ ಬಲಿಷ್ಟ ಚೆನ್ನೈ ವಿರುದ್ಧ ಮೂರು ವಿಕೆಟ್ ಪಡೆದುಕೊಂಡು ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ ಆಯ್ಕೆಗಾರರಿಗೆ ತಮ್ಮ ಝಲಕ್ ತೋರಿಸಿ ಸೈ ಎನಿಸಿಕೊಂಡಿದ್ದಾರೆ.
ಆಶ್ಚರ್ಯ ಎಂದರೆ ವಿಘ್ನೇಶ್ ಪುತ್ತೂರು ಐಪಿಎಲ್ ನಂತಹ ದೊಡ್ಡ ಸರಣಿಯಲ್ಲಿ ಆಡುವ ಅವಕಾಶ ಗಳಿಸಿಕೊಂಡರೂ ಕೇರಳ ರಾಜ್ಯ ಪರ ಇನ್ನೂ ತಮ್ಮ ಕ್ರಿಕೆಟ್ ಜೀವನ ಆರಂಭಿಸಬೇಕಾಗಿದೆ. ಕೇರಳ ಪರ 23 ವರ್ಷದೊಳಗಿನ ಕ್ಯಾಟಗೇರಿಯಲ್ಲಿ ಆಡಿರುವ ವಿಘ್ನೇಶ್ ಭಾರತದ ಭವಿಷ್ಯದ ತಾರೆ ಆಗುವ ಲಕ್ಷಣ ಹೊಂದಿದ್ದಾರೆ. ಇವರ ತಂದೆ ಸುನೀಲ್ ಕುಮಾರ್ ಹಾಗೂ ತಾಯಿ ಕೆ.ಪಿ.ಬಿಂದು. ತಂದೆ ಆಟೋ ಚಾಲಕರಾಗಿದ್ದರೆ ತಾಯಿ ಗೃಹಿಣಿ. ಚೆನ್ನೈನಲ್ಲಿ ಸಿಎಸ್ ಕೆ ವಿರುದ್ಧ ಪಂದ್ಯದ ಎರಡನೇ ಇನ್ಸಿಂಗ್ಸ್ ನಲ್ಲಿ ಇಂಪ್ಯಾಕ್ಟ್ ಬದಲಿ ಆಟಗಾರನಾಗಿ ರೋಹಿತ್ ಶರ್ಮಾ ಬದಲಿಗೆ ಕಣಕ್ಕೆ ಇಳಿದ ವಿಘ್ನೇಶ್ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಮೊದಲ ಪಂದ್ಯದಲ್ಲಿಯೇ ಛಾಪನ್ನು ಮೂಡಿಸಿದ್ದಾರೆ. ಸದ್ಯ ಮುಂಬೈ ಇಂಡಿಯನ್ಸ್ ಆ ಪಂದ್ಯವನ್ನು ಸೋತರೂ ವಿಘ್ನೇಶ್ ಐಪಿಎಲ್ ನಲ್ಲಿ ಮುಂದಿನ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಖಾಯಂ ಸದಸ್ಯನಾಗುವ ಸಾಧ್ಯತೆ ಇದೆ.
ಇಂತಹ ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ಅವರ ಸಾಮರ್ಯ್ಯವನ್ನು ಒರೆಗಚ್ಚುವ ಕೆಲಸವನ್ನು ಮುಂಬೈ ಇಂಡಿಯನ್ಸ್ ತಂಡದ ಆಡಳಿತ ಮಂಡಳಿ ಅರಂಭದಿಂದಲೂ ಮಾಡುತ್ತಾ ಬರುತ್ತಿದೆ. ಅದಕ್ಕೆ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯನಂತವರೇ ಸಾಕ್ಷಿ.
ಇನ್ನು ವಿಘ್ನೇಶ್ ಪುತ್ತೂರು ಸಿಎಸ್ ಕೆ ನಾಯಕ ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ದೀಪಕ್ ಹೂಡಾ ವಿಕೆಟ್ ಪಡೆದು ಚೆನ್ನೈ ತಂಡದ ನಡುವನ್ನು ಮುರಿದರೂ ಮುಂಬೈ ಇಂಡಿಯನ್ಸ್ ತಂಡದ ಮೊತ್ತ 155 ಕ್ಕೆ ಸೀಮಿತಗೊಂಡಿದ್ದರಿಂದ ಗೆಲುವನ್ನು ದಾಖಲಿಸಲು ಸಾಧ್ಯವಾಗಲಿಲ್ಲ.
Leave A Reply