ಯುವತಿಯರೊಂದಿಗೆ ಸೆಲ್ಫಿ ತೆಗೆಸಲು ರಾಜಕಾರಣಿಗಳು ಹಿಂದೇಟು! ಹನಿಟ್ರಾಪ್ ಇಫೆಕ್ಟ್!

ಕರ್ನಾಟಕದಲ್ಲಿ ಈಗ ಹನಿಟ್ರಾಪಿನದ್ದೇ ಸುದ್ದಿ. ಯಾವಾಗ ಅಧಿವೇಶನದಲ್ಲಿಯೇ ಸಚಿವ ರಾಜಣ್ಣ ತಮ್ಮ ಮೇಲೆ ಹನಿಟ್ರಾಪಿನ ಪ್ರಯತ್ನ ನಡೆದಿದೆ ಎಂದು ಹೇಳಿದರೋ ಅದರ ನಂತರ ಹನಿಟ್ರಾಪ್ ವಿಷಯ ರಾಜ್ಯದಲ್ಲಿ ಜೋರಾಗಿ ಚಲಾವಣೆಯಲ್ಲಿದೆ. ಇನ್ನು ಆಡಳಿತ, ವಿಪಕ್ಷದ ಒಟ್ಟು 48 ಶಾಸಕರ ಹನಿಟ್ರಾಪ್ ನಡೆದಿದೆ ಎನ್ನುವ ವಿಷಯದಲ್ಲಿ ಪ್ರತಿ ಶಾಸಕರೂ ಹೆದರುವ ಪ್ರಸಂಗ ಉದ್ಭವಿಸಿದೆ. ಯಾರಾದರೂ ಯುವತಿ ಫೋನ್ ಮಾಡಿದರೆ ಮಾತನಾಡಲು ನೂರು ಸಲ ಯೋಚಿಸುವ ಪರಿಸ್ಥಿತಿಗೆ ಕರ್ನಾಟಕದ ಶಾಸಕರು ಬಂದಿದ್ದಾರೆ. ಇನ್ನು ಯುವತಿಯರು ಯಾರಾದರೂ ಸಿಂಗಲ್ ಆಗಿ ಭೇಟಿ ಮಾಡಲು ಬಂದರೆ ತಕ್ಷಣ ಯಾರೂ ಇಲ್ಲದಿದ್ದರೆ ಕನಿಷ್ಟ ಕಚೇರಿಯ ಸಿಬ್ಬಂದಿಗಳನ್ನಾದರೂ ಕರೆಸಿ ಮಾತನಾಡುವ ಪ್ರಸಂಗ ಇದೆ. ಇದಕ್ಕೆಲ್ಲಾ ಕಾರಣ ಹನಿಟ್ರಾಪ್. ಒಂದು ವೇಳೆ ಫೋಟೋ ತೆಗೆಯಲೇಬೇಕು ಎಂದು ಯುವತಿ ಒತ್ತಾಯ ಮಾಡಿದರೆ ಗ್ರೂಪ್ ಫೋಟೋ ಮಾತ್ರ ಎನ್ನುವ ಕಂಡೀಷನ್ ಹಾಕುವ ಅನಿವಾರ್ಯತೆ ಇದೆ. ಯಾಕೆಂದರೆ ಯಾರು ಹನಿ ಟ್ರಾಪ್ ಮಾಡಲು ಬಂದವರು, ಯಾರು ನಿಜವಾಗಿ ಕಷ್ಟ, ಸುಖ ಹೇಳಲು ಬಂದವರು ಎಂದು ಗೊತ್ತಾಗದೇ ಸಾರ್ವಜನಿಕ ಜೀವನದಲ್ಲಿರುವ ಶಾಸಕರು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾರೆ.
ಇಂತಹ ಸ್ಥಿತಿ ಪ್ರತಿ ಶಾಸಕರಿಗೂ ಬಂದಿದ್ದರೂ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರು ಮಾತ್ರ ಈ ವಿಷಯವನ್ನು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಒಪ್ಪಿಕೊಂಡರು. ಬಿಜೆಪಿಯ ಯಾರಿಗೆಲ್ಲಾ ಹನಿಟ್ರಾಪಿನಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾರಾಯಣ ತಮ್ಮ ಸಾರ್ವಜನಿಕ ಜೀವನ ಕ್ರಮ ಬದಲಾಗಿರುವುದರ ಹಿಂದಿನ ಹಿಂಟ್ ಕೊಟ್ಟರು.
ಯಾರಾದರೂ ಯುವತಿ ಫೋನ್ ಮಾಡಿದರೆ ಮೊದಲಿಗೆ ಅವರ ಕಚೇರಿಯ ಸಿಬ್ಬಂದಿಯೇ ಮಾತನಾಡುತ್ತಾರಂತೆ. ಅವರು ಮಾತನಾಡಿ ಎನು ವಿಷಯ ಎಂದು ಕೂಲಂಕುಶವಾಗಿ ಕೇಳಿ ನಂತರ ಅಗತ್ಯ ಬಿದ್ದರೆ ನಾರಾಯಣ ಸ್ವಾಮಿಯವರಿಗೆ ಕೊಡುತ್ತಾರಂತೆ. ಸೆಲ್ಫಿ ಅಥವಾ ಸಿಂಗಲ್ ಫೋಟೋಗೆ ನೋ ಎಂದು ಹೇಳುವ ಪರಿಪಾಠ ಆರಂಭಿಸಿದ್ದಾರಂತೆ. ಏನಿದ್ದರೂ ಗ್ರೂಪ್ ಫೋಟೋ ಮಾತ್ರ. ಕಚೇರಿಯಲ್ಲಿ ಸಿಬ್ಬಂದಿಯವರ ಜೊತೆ, ಸಾರ್ವಜನಿಕರ ಜೊತೆಯಲ್ಲಿ ಕುಳಿತು ಯುವತಿಯರೊಂದಿಗೆ ಮಾತುಕತೆ ಮಾತ್ರ. ಬಹಿರಂಗವಾಗಿ ಹೇಳಬೇಕು. ಅದು ಬಿಟ್ಟು ಪರ್ಸನಲ್ ಆಗಿ ಇಲ್ಲವೇ ಇಲ್ಲ. ಏಕೆಂದರೆ ಒಮ್ಮೆ ಹನಿಟ್ರಾಪಿಗೆ ಸಿಲುಕಿದರೆ ನಂತರ ಆ ಪಾಡು ಯಾರಿಗೂ ಬೇಡಾ ಎಂದು ನಾರಾಯಣ ಸ್ವಾಮಿ ಹೇಳಿದ್ದಾರೆ.
ಈಗ ಬಹುತೇಕ ಶಾಸಕರು, ಸಚಿವರು ಇದನ್ನೇ ಅನುಸರಿಸುತ್ತಿದ್ದಾರೆ. ಹಾಗಂತ ಬಹಿರಂಗವಾಗಿ ಹೇಳಲಾಗದ ಸ್ಥಿತಿ. ಪರಿಚಯದ ಮಹಿಳೆ ಬಂದು ಫೋಟೋ ಕೇಳಿದರೂ ಇಲ್ಲವೆನ್ನಲಾಗದ ಕಥೆ. ಯಾಕೆಂದರೆ ಯಾವಾಗ, ಎಲ್ಲಿ ಗ್ರಹಚಾರ ಕೆಟ್ಟಿದೆ ಎಂದು ಹೇಳಲು ಆಗುವುದಿಲ್ಲವಲ್ಲ.
Leave A Reply