ಭಾಜಪಾ ರಾಜ್ಯಾಧ್ಯಕ್ಷರಾಗಿ ಕೇರಳದಲ್ಲಿ ಬಿಜೆಪಿಯನ್ನು ಗೆಲ್ಲಿಸಬಲ್ಲರೇ ರಾಜೀವ್ ಚಂದ್ರಶೇಖರ್?

ಮಾಜಿ ಕೇಂದ್ರ ಸಚಿವ, ಮಾಧ್ಯಮ ಲೋಕದ ದೊಡ್ಡ ಹೆಸರು ರಾಜೀವ್ ಚಂದ್ರಶೇಖರ್ ಅವರನ್ನು ಭಾರತೀಯ ಜನತಾ ಪಾರ್ಟಿಯ ಹೈಕಮಾಂಡ್ ನಾಯಕರು ಕೇರಳ ಬಿಜೆಪಿಯ ಸಾರಥಿಯನ್ನಾಗಿ ಮಾಡುವ ಮೂಲಕ ಬಹುದೊಡ್ಡ ಜವಾಬ್ದಾರಿಯನ್ನು ಅವರ ಹೆಗಲಿಗೆ ಹಾಕಿದ್ದಾರೆ. ಅತೀ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ, ಆದರೆ ನಿರಂತರ ಹೋರಾಟ, ಪ್ರತಿಭಟನೆ, ಬಂದ್ ನಿಂದಾಗಿ ಯುವಜನಾಂಗದ ವಿಶ್ವಾಸವನ್ನು ಕಳೆದುಕೊಂಡಿರುವ ಕೇರಳದ ರಾಜಕೀಯ ವಾತಾವರಣವನ್ನು ಸರಿಮಾಡಲು ಒಬ್ಬ ಗುರುತರ ಜವಾಬ್ದಾರಿ ಹೊರಬಲ್ಲ ನಾಯಕನ ಅವಶ್ಯಕತೆ ಬಿಜೆಪಿಗೆ ಇತ್ತು.
ಇಲ್ಲಿಯ ತನಕ ಬಿಜೆಪಿ ಕೇರಳದಲ್ಲಿ ಕಮ್ಯೂನಿಸ್ಟರಿಗೆ, ಕಾಂಗ್ರೆಸ್ಸಿಗೆ ಟಕ್ಕರ್ ಕೊಡುತ್ತಿದ್ದರೂ ಇಡೀ ರಾಜ್ಯವ್ಯಾಪಿ ವರ್ಚಸ್ಸು ಹೊಂದಿರುವ ನಾಯಕ ಸಿಕ್ಕಿರಲಿಲ್ಲ. ರಾಜೀವ್ ಚಂದ್ರಶೇಖರ್ ಎಲ್ಲಾ ರೀತಿಯ ಬಲ, ಇಮೇಜ್, ಪರಿಣಿತಿ ಹೊಂದಿರುವುದರಿಂದ ಕೇರಳದ ಯುವಜನಾಂಗಕ್ಕೆ ಮುಂದಿನ ಭವಿಷ್ಯವಾಗುವುದರಲ್ಲಿ ಸಂಶಯವಿಲ್ಲ ಎನ್ನುವುದು ಬಿಜೆಪಿ ನಾಯಕರ ನಂಬಿಕೆ. ಅದೆಲ್ಲವನ್ನು ಪರಿಗಣಿಸಿ ರಾಜೀವ್ ಚಂದ್ರಶೇಖರ್ ಅವರನ್ನು ಕೇರಳ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿದ ಪತ್ರವನ್ನು ತಿರುವನಂತಪುರದಲ್ಲಿ ನಡೆದ ಬಿಜೆಪಿ ರಾಜ್ಯ ಪರಿಷತ್ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಸ್ತಾಂತರಿಸಿದರು.
ಕೇರಳದಲ್ಲಿ ಬಿಜೆಪಿ ಇಲ್ಲಿಯ ತನಕ ಅಧಿಕಾರದ ಸನಿಹಕ್ಕೂ ಹೋಗದೇ ಇದ್ದರೂ ಇಲ್ಲಿ ಬಣ ರಾಜಕೀಯಕ್ಕೆ ಏನೂ ಕಡಿಮೆ ಇರಲಿಲ್ಲ. ಎಲ್ಲಾ ಬಣಗಳು ಒಂದಾದರೆ ಇಲ್ಲಿ ಬಿಜೆಪಿ ಪ್ರಬಲ ವಿಪಕ್ಷವಾಗಿಯೂ ಕೆಲಸ ನಿರ್ವಹಿಸುವಷ್ಟು ಜನಬೆಂಬಲ ನಿಧಾನವಾಗಿಯೂ ಸಿಗಲಿದೆ. ಆದರೆ ಬಿಜೆಪಿ ನಾಯಕರ ಆಂತರಿಕ ಸಮಸ್ಯೆಗಳಿಂದ ಜನರಿಗೆ ಬಿಜೆಪಿ ಬೇಕು ಎಂದು ಅನಿಸಿದರೂ ಅದಕ್ಕೆ ಪೂರಕವಾಗಿ ವಾತಾವರಣ ನಿರ್ಮಾಣವಾಗಿಲ್ಲ. ಕಾಂಗ್ರೆಸ್, ಕಮ್ಯೂನಿಸ್ಟರಿಂದ ರೋಸಿ ಹೋಗಿರುವ ಯುವ ಮತದಾರರಿಗೆ ಪರ್ಯಾಯವಾಗಿ ಪ್ರಬಲ ಮುಖ ಸಿಗುವ ಆಶಾಭಾವನೆ ಇಲ್ಲಿಯ ತನಕ ಕಾಣಿಸಿರಲಿಲ್ಲ. ಇದನ್ನೆಲ್ಲಾ ಪರಿಗಣಿಸಿ ಬಿಜೆಪಿ ಆರ್ ಸಿಯವರನ್ನು ಪಕ್ಷದ ರಾಜ್ಯ ನಾಯಕತ್ವಕ್ಕೆ ಸೂಚಿಸಿದೆ.
ಈ ವರ್ಷ ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯಲಿವೆ. ಆರ್ ಸಿ ಇದನ್ನು ಸವಾಲಾಗಿ ಸ್ವೀಕರಿಸಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಕಾರ್ಯ ಮಾಡಬೇಕಿದೆ. ಇವರು ರಾಜ್ಯಾಧ್ಯಕ್ಷರಾದರೆ ಬಿಜೆಪಿಗೆ ತನು, ಮನ, ಧನದಲ್ಲಿಯೂ ಸಹಕಾರ ಸಿಗಲಿದೆ. ಇನ್ನು ರಾಜ್ಯ ಬಿಜೆಪಿಯಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬಲ್ಲ ಛಾತಿಯೂ ಇವರಿಗೆ ಇರುವುದರಿಂದ ಕೊನೆಗೂ ಕೇರಳದಲ್ಲಿ ಬಿಜೆಪಿಯ ಅಲೆ ಎದ್ದುಬರಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.
Leave A Reply