ಕಮ್ರಾ ಕ್ಷಮೆ ಕೇಳದಿದ್ದರೆ ಮುಂಬೈಯಲ್ಲಿ ನಡೆದಾಡುವುದು ಕಷ್ಟವಾಗಲಿದೆ ಎಂದು ಶಾಸಕ ಎಚ್ಚರಿಕೆ!

ಮಹಾರಾಷ್ಟ್ರದ ರಾಜಕೀಯದಲ್ಲಿ ಶಿವಸೇನೆಯದ್ದೇ ಪ್ರಬಲವಾಗಿರುವ ಚರಿಶ್ಮಾ ಇದೆ. ಅವರ ಪಕ್ಷದ ನಾಯಕರನ್ನು ನಿಕೃಷ್ಟವಾಗಿ ಕಾಣಿಸುವ ಯಾವುದೇ ಹೇಳಿಕೆಯನ್ನು ಅವರ ಕಾರ್ಯಕರ್ತರು ಸಹಿಸುವುದಿಲ್ಲ. ಇದು ದಶಕಗಳಿಂದ ನಡೆದುಕೊಂಡು ಬಂದಿದೆ. ಆದರೆ ಕಾಮಿಡಿಯನ್, ನಿರೂಪಕ ಎಂದು ಕರೆಸಿಕೊಂಡಿರುವ ಕುನಾಲ್ ಕಮ್ರಾ ಮಾತ್ರ ಈ ಬಾರಿ ಎಲ್ಲಾ ಗೊತ್ತಿದ್ದೂ ಲಕ್ಷ್ಮಣ ರೇಖೆ ದಾಟಿ ಬಿಟ್ಟಿದ್ದು ಅವರಿಗೆ ಗಂಡಾತರ ತಂದಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹೆಸರನ್ನು ಎತ್ತದೆ ಅವರನ್ನು ಅವಹೇಳನಕಾರಿಯಾಗಿ ಮಾತನಾಡಿದ್ದೇ ಕಮ್ರಾ ಈಗ ಮಹಾರಾಷ್ಟ್ರ ಮಾತ್ರವಲ್ಲ, ದೇಶದ ರಾಜಕೀಯದ ಬಹುಚರ್ಚಿತ ವ್ಯಕ್ತಿಯಾಗಿ ಮೂಡಿಬಂದಿದ್ದಾನೆ.
ಮಹಾರಾಷ್ಟ್ರದಲ್ಲಿ ಕಮ್ರಾ ಹೊಸ ಹೆಸರಲ್ಲ. ಆತನ ಮನಸ್ಥಿತಿ, ನಿಷ್ಟೆ ಮತ್ತು ಒಲವು ಯಾವ ಪಕ್ಷದ ವಿರುದ್ಧವಾಗಿದೆ ಎನ್ನುವುದು ರಹಸ್ಯವೇನಲ್ಲ. ಇಂತಹ ವ್ಯಕ್ತಿ ಈಗ ಹದ್ದು ಮೀರಿ ಶಿಂಧೆಯವರನ್ನು ಪರೋಕ್ಷವಾಗಿ ಟೀಕಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇವರು ಕಂಗನಾ ರಾಣಾವತ್ ಅವರ ಕಚೇರಿಯನ್ನು ಮುಂಬೈಯಲ್ಲಿ ಆಗಿನ ಉದ್ದವ್ ಠಾಕ್ರೆ ಸರಕಾರ ಧ್ವಂಸಗೊಳಿಸಿದಾಗ ಸರಕಾರದ ಪರವಾಗಿದ್ದರು. ಈಗ ಉದ್ದವ್ ಠಾಕ್ರೆಯವರನ್ನು ಖುಷಿ ಪಡಿಸಲು ಕಾಮಿಡಿ ಹೆಸರಲ್ಲಿ ಅಸಂಬದ್ಧ ಹೇಳಿಕೆ ನೀಡಿ ತಾವು ಪ್ರದರ್ಶನ ನೀಡಿದ ಸ್ಥಳಕ್ಕೆ ಸಂಚಕಾರ ತಂದಿದ್ದಾರೆ.
ಈ ನಡುವೆ ತಕ್ಷಣ ಕಾರ್ಯಪ್ರವೃತ್ತರಾದ ಬೃಹನ್ ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು ಖಾರ್ ಇಲ್ಲಿನ ಯುನಿಕಾಂಟಿನೆಂಟಲ್ ಹೋಟೇಲಿನಲ್ಲಿ ಅನಧಿಕೃತವಾಗಿ ಕಟ್ಟಿದ ಕಟ್ಟಡದ ಭಾಗಗಳನ್ನು ಧರಾಶಾಯಿಗೊಳಿಸಿದ್ದಾರೆ. ಕಮ್ರಾ ವಿರುದ್ಧ ಶಿಂಧೆಯವರ ಶಿವಸೇನೆಯ ಶಾಸಕ ಮುರ್ಜಿ ಪಟೇಲ್ ದೂರು ನೀಡಿದ್ದು, ಶಿವಸೇನೆಯ ಮುಖಂಡರು ಆದಷ್ಟು ಬೇಗ ಕಮ್ರಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿ ಒತ್ತಡ ಹಾಕಿದ್ದಾರೆ. ಎರಡು ದಿನಗಳ ಒಳಗೆ ಏಕನಾಥ್ ಶಿಂಧೆಯವರ ಕ್ಷಮೆ ಕೇಳದಿದ್ದರೆ ಮುಂಬೈಯಲ್ಲಿ ಆರಾಮವಾಗಿ ತಿರುಗಾಡುವುದು ಕಮ್ರಾಗೆ ಕಷ್ಟವಾಗಲಿದೆ ಎಂದು ಪಟೇಲ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ” ಸ್ಟ್ಯಾಂಡ್ ಅಪ್ ಕಾಮಿಡಿ ಮಾಡಲು ಸ್ವಾತಂತ್ರ್ಯವಿದೆ. ಆದರೆ ಕಾಮಿಡಿಯ ಹೆಸರಿನಲ್ಲಿ ಬಾಯಿಗೆ ಬಂದಂತೆ ಮಾತನಾಡುವುದಕ್ಕೆ ಆಸ್ಪದ ಇಲ್ಲ” ಎಂದು ಹೇಳಿದ್ದಾರೆ. “ದೇಶದ್ರೋಹಿ ಯಾರು ಎಂದು ಮಹಾರಾಷ್ಟ್ರದ ಜನರು ನಿರ್ಧರಿಸಿದ್ದಾರೆ. ಕುನಾಲ್ ಕಮ್ರಾ ಕ್ಷಮೆ ಕೇಳಲೇಬೇಕು, ಇದನ್ನು ಸಹಿಸುವ ಪ್ರಶ್ನೆ ಇಲ್ಲ. ಕಾಮಿಡಿಯ ಹೆಸರಲ್ಲಿ ನಮ್ಮ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯವರನ್ನು ಹಂಗಿಸುವುದು ಸರಿಯಲ್ಲ. ಎಲ್ಲದಕ್ಕೂ ಮಿತಿ ಇದೆ. ಮಾತನಾಡುವ ಹಕ್ಕಿನ ದುರುಪಯೋಗವಿದು” ಎಂದು ಪ್ರತಿಕ್ರಿಯಿಸಿದ್ದಾರೆ.
ಹ್ಯೂಮರ್ ಬೇರೆ, ಮಾನಹಾನಿಕಾರಿ ಹೇಳಿಕೆ ಬೇರೆ. ಇಲ್ಲಿ ಭಾಷಣ ಮಾಡುವ ಸ್ವಾತಂತ್ರ್ಯ ಇದೆ ಎಂದು ಸಭ್ಯತೆಯ ಗಡಿ ಮೀರಿದರೆ ಒಪ್ಪಲು ಸಾಧ್ಯವಿಲ್ಲ ಎಂದು ಸಿಎಂ ಪಡ್ನವೀಸ್ ಹೇಳಿದ್ದಾರೆ. ಆದರೆ ಇನ್ನೊಂದೆಡೆ ಮಾಜಿ ಸಿಎಂ ಉದ್ದವ್ ಠಾಕ್ರೆ ಕಮ್ರಾ ಬೆಂಬಲಕ್ಕೆ ನಿಂತಿದ್ದು ” ಆತ ಏನೂ ತಪ್ಪು ಹೇಳಿಲ್ಲ ಎಂದಿದ್ದಾರೆ. ದೇಶದ್ರೋಹಿಯನ್ನು ದೇಶದ್ರೋಹಿ ಎನ್ನುವುದು ಹೇಗೆ ತಪ್ಪಾಗುತ್ತದೆ” ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
ಇನ್ನು ನೆಟ್ಟಿಗರು ಈ ವಿಷಯದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮಮತಾ ಬ್ಯಾನರ್ಜಿ, ಶರದ್ ಪವಾರ್, ಜಗನ್ಮೋಹನ್ ರೆಡ್ಡಿ, ನಿತೀಶ್ ಕುಮಾರ್ ಹೀಗೆ ರಾಷ್ಟ್ರದಲ್ಲಿ ಅನೇಕ ನಾಯಕರು ತಮ್ಮ ಮೂಲ ಪಕ್ಷದಿಂದ ಹೊರಗೆ ಬಂದು ಸ್ವತಂತ್ರವಾಗಿ ಪಕ್ಷ ಕಟ್ಟಿ ಸ್ಪರ್ಧಿಸಿದ್ದಾರೆ. ಏಕನಾಥ್ ಶಿಂಧೆ ಅದನ್ನೇ ಮಾಡಿದ್ದಾರೆ. ಬೇರೆ ನಾಯಕರು ಉತ್ತಮ ದಾರಿ ಕಂಡುಕೊಂಡಿರುವುದಾಗಿ ಜನರೇ ವಿಶ್ಲೇಷಿಸಿ ಅವರ ಬೆನ್ನಿಗೆ ನಿಂತಿರುವುದರಿಂದ ಶಿಂಧೆಯವರು ಹೇಗೆ ತಾನೆ ತಪ್ಪು ಮಾಡಿದ್ದಾರೆ ಎನ್ನಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Leave A Reply