ರೇಪ್ ತೀರ್ಪಿನ ಬಗ್ಗೆ ಅಲಹಾಬಾದ್ ಹೈಕೋರ್ಟ್ ವ್ಯಾಖ್ಯಾನಕ್ಕೆ ಸುಪ್ರೀಂ ತಡೆ!

ಅತ್ಯಾಚಾರ ಅಥವಾ ರೇಪ್ ಬಗ್ಗೆ ವ್ಯಾಖ್ಯಾನ ಮಾಡುವುದು ಯಾವುದೇ ನ್ಯಾಯಾಲಯದ ನ್ಯಾಯಾಧೀಶರಿಗೆ ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಕಾನೂನು ಪುಸ್ತಕದಲ್ಲಿ ರೇಪ್ ಎಂದರೇನು ಎನ್ನುವ ಪ್ರಶ್ನೆಗೆ ವಿಶ್ಲೇಷಣೆ ಏನೇ ಇದ್ದರೂ ಅದನ್ನು ತೀರ್ಪಿನಲ್ಲಿ ಓದುವಾಗ ವಿವಾದ ಆಗದಂತೆ, ನೂರರಷ್ಟು ಸಂತ್ರಸ್ತೆಯ ಪರವಾಗಿಯೇ ನಿಲ್ಲಬೇಕಾದ ಅಗತ್ಯ ನ್ಯಾಯಾಧೀಶರ ಕರ್ತವ್ಯವಾಗಿದೆ. ಈಗ ಒಬ್ಬ ಕಾಮುಕ ಅಪ್ರಾಪ್ತ ಬಾಲಕಿಯ ಸ್ತನಗಳನ್ನು ಹಿಡಿದುಕೊಂಡ ಮತ್ತು ಆಕೆಯ ಪೈಜಾಮದ ಲಾಡಿಯನ್ನು ಎಳೆದ ಎಂದ ಕೂಡಲೇಅಲ್ಲಿ ಆತನ ಉದ್ದೇಶ ಸ್ಪಷ್ಟವಾಗಿರುತ್ತದೆ. ಇದನ್ನು ಅತ್ಯಾಚಾರದ ಅಡಿಯಲ್ಲಿ ತರಲು ಆಗುವುದಿಲ್ಲ ಎಂದು ಹೇಗೆ ಹೇಳಲು ಅಗುತ್ತದೆ.
ಇಲ್ಲಿ ಸಂತ್ರಸ್ತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ನೋವನ್ನು ಅನುಭವಿಸಿದ್ದಾಳೆ. ಆದ್ದರಿಂದ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ನ್ಯಾಯಾಧೀಶರ ವಿವೇಚನೆಯೂ ಮುಖ್ಯ. ಪ್ರಸ್ತುತ ಅಲಹಾಬಾದ್ ಹೈಕೋರ್ಟ್ ಈ ವಿಷಯದಲ್ಲಿ ನೀಡಿದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ನೇತೃತ್ವದ ಪೀಠವು ಈ ಸಂಬಂಧ ಪ್ರತಿಕ್ರಿಯಿಸಿದ್ದು, ” ಅಲಹಾಬಾದ್ ಹೈಕೋರ್ಟ್ ನ ಅವಲೋಕನಗಳು ಸಂಪೂರ್ಣ ಸಂವೇದನರಹಿತ ಮತ್ತು ಅಮಾನವೀಯ ವಿಧಾನವನ್ನು ಚಿತ್ರಿಸಿವೆ ಎಂದು ಬೇಸರ ಹೊರಹಾಕಿದೆ. ಅಲ್ಲದೆ ಹೈಕೋರ್ಟ್ ನ ಆದೇಶದ ಬಗ್ಗೆ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರ, ಉತ್ತರ ಪ್ರದೇಶ ಸರ್ಕಾರ ಮತ್ತು ಸಂಬಂಧಪಟ್ಟ ಇತರರಿಗೆ ನೋಟಿಸು ಜಾರಿ ಮಾಡಿದೆ. ” ವಿ ದಿ ವುಮೆನ್ ಆಫ್ ಇಂಡಿಯಾ” ಎಂಬ ಸಂಘಟನೆ ತೀರ್ಪನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದ ಬಳಿಕ ಈ ಬೆಳವಣಿಗೆ ನಡೆದಿದೆ.
Leave A Reply