ರಸ್ತೆಯಲ್ಲಿ ನಮಾಜ್ ಮಾಡಿದರೆ ಪಾಸ್ ಪೋರ್ಟ್ ವಶ- ಪೊಲೀಸ್ ಎಚ್ಚರಿಕೆ!

ಈ ಬಾರಿ ಈದ್ – ಉಲ್ – ಫಿತ್ರ್ ದಿನದಂದು ರಸ್ತೆಯಲ್ಲಿ ಸಾಮೂಹಿಕವಾಗಿ ಗುಂಪು ಗುಂಪು ಸೇರಿ ನಮಾಜ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಮೀರತ್ ಪೊಲೀಸ್ ವರಿಷ್ಠಾಧಿಕಾರಿಯವರು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ನಮಾಜ್ ಮಾಡಲು ಅನುಮತಿಯನ್ನು ಪಡೆಯಬೇಕು. ಅನುಮತಿ ಇಲ್ಲದೇ ಯಾವುದೇ ಧಾರ್ಮಿಕ ಆಚರಣೆ ಮಾಡಿದರೆ ಅಂತವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗುವುದು ಮತ್ತು ಪಾಸ್ ಪೋರ್ಟ್ ವಶಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮೀರತ್ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್ ಈ ಬಾರಿ ಈದ್ ದಿನದಂದು ನಿಗದಿತ ಸ್ಥಳಗಳಲ್ಲಿ ಮಾತ್ರ ನಮಾಜ್ ಆಚರಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಸಂಚಾರ ಮುಕ್ತವಾಗಿರಬೇಕು ಎನ್ನುವ ಸಂದೇಶ ಎಲ್ಲರಿಗೂ ರವಾನಿಸಲಾಗಿದೆ. ಈ ಕ್ರಮದಿಂದ ಹಬ್ಬದ ದಿನದಂದು ಆಗಬಹುದಾದ ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸ್ ಇಲಾಖೆ, ಪ್ಯಾರಾ ಮಿಲಿಟರಿ ಪಡೆ, ಪಿಎಸಿ, ಆರ್ ಎ ಎಫ್ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗುವುದು. ದ್ರೋಣ್ ಮತ್ತು ವಿಡಿಯೋ ಕ್ಯಾಮೆರಾಗಳ ಮೂಲಕ ಪರಿಸ್ಥಿತಿಯನ್ನು ಪರಿಶೀಲಿಸುವ ಕಾರ್ಯ ನಡೆಯಲಿದೆ.
ಯಾರಾದರೂ ಸ್ಥಳೀಯಾಡಳಿತ ಮತ್ತು ಸರಕಾರದ ನಿಯಮಗಳನ್ನು ಮೀರಿ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೇ ನಮಾಜ್ ಮಾಡಿದರೆ ಅವರ ಪಾಸ್ ಪೋರ್ಟ್ ತಕ್ಷಣ ವಶಪಡಿಸಿಕೊಳ್ಳಲಾಗುವುದು. ಇದರಿಂದ ಅಂತವರು ತಮ್ಮ ಪವಿತ್ರ ಪ್ರಾರ್ಥನಾ ಕೇಂದ್ರಗಳಾದ ಮೆಕ್ಕಾ, ಮದೀನಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇನ್ನು ಈ ಹಿಂದಿನ ವರ್ಷಗಳಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರ ಜಾತಕಗಳನ್ನು ಪೊಲೀಸರು ಹೊರಗೆ ತೆಗೆದಿದ್ದಾರೆ. ಅಂತವರ ಮೇಲೆ ಇನ್ನಷ್ಟು ನಿಗಾ ಇಡುವ ಕಾರ್ಯ ನಡೆಯಲಿದೆ. ಅಂತಹ ಹೆಬಿಚ್ಯುವಲ್ ಕ್ರಿಮಿನಲ್ ಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಒಟ್ಟಾರೆ ಈದ್ ದಿನ ಕಾನೂನು ಸುವ್ಯವಸ್ಥೆ ಪಾಲನೆಯಾಗಿ ಎಲ್ಲಿಯೂ ಗೊಂದಲಗಳು ಘಟಿಸದೇ ಇರಲು ಉತ್ತರ ಪ್ರದೇಶ ರಾಜ್ಯದ ಪೊಲೀಸರು ಸಮರ್ಪಕ ವ್ಯವಸ್ಥೆ ಮಾಡಿದ್ದಾರೆ.
Leave A Reply