ಹಾಲಿನ ದರ ಹೆಚ್ಚಳದಿಂದಾಗಿ ಕಾಫಿ, ಟೀ ಗ್ಲಾಸಿಗೆ 2-3 ರೂ ಹೆಚ್ಚಳ ಪಕ್ಕಾ!

ನಂದಿನಿ ಹಾಲಿನ ದರ ಲೀಟರಿಗೆ 4 ರೂ ಹೆಚ್ಚಳ ಆಗಿರುವ ಹಿನ್ನಲೆಯಲ್ಲಿ ಹೋಟೇಲು, ಕ್ಯಾಂಟೀನುಗಳಲ್ಲಿ ಕಾಫಿ, ಟೀ ದರವೂ ಸಹಜವಾಗಿ ಏರಿಕೆ ಕಾಣಲಿದೆ. ಇದು ಶೇಕಡಾ ಹತ್ತರಿಂದ ಹದಿನೈದು ಜಾಸ್ತಿಯಾಗಲಿದೆ ಎಂದು ಬೃಹತ್ ಬೆಂಗಳೂರು ಹೋಟೇಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
ಕಳೆದ ತಿಂಗಳು ಕಾಫಿ ಪುಡಿ ದರ ಹೆಚ್ಚಳವಾದಾಗ ಕೆಲವು ಹೋಟೇಲುಗಳಲ್ಲಿ ದರ ಹೆಚ್ಚಾಗಿದೆ. ಆದರೂ ಅನೇಕ ಕಡೆ ಏರಿಕೆ ಆಗಿರಲಿಲ್ಲ. ಈಗ ಹಾಲಿನ ದರವೂ ಹೆಚ್ಚಾಗಿರುವುದರಿಂದ ಹೋಟೇಲುಗಳಲ್ಲಿ ದರ ಹೆಚ್ಚಿಸುವುದು ಅನಿವಾರ್ಯವಾಗಲಿದೆ. ಯಾವಾಗೆಲ್ಲ ಹಾಲಿನ ದರ ಹೆಚ್ಚಾಗುತ್ತದೆಯೋ ಆಗ ಅದರ ಹೊರೆಯನ್ನು ಹೋಟೇಲಿನ ಮಾಲೀಕರು ಗ್ರಾಹಕರ ಮೇಲೆ ಹಾಕುವುದು ಯಾವತ್ತೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದರೊಂದಿಗೆ ಹಾಲಿನ ಉತ್ಪನ್ನಗಳ ದರವೂ ಹೆಚ್ಚಳವಾಗುವುದರಿಂದ ಮೊಸರು ವಡೆ, ಪನ್ನೀರ್ ಐಟಂಗಳ ದರವೂ ಹೆಚ್ಚಳವಾಗಲಿದೆ.
ಇನ್ನು ತುಪ್ಪದೋಸೆ ಸಹಿತ ತುಪ್ಪದಿಂದ ತಯಾರಿಸಲಾಗುವ ಸಿಹಿತಿಂಡಿಗಳ ದರವೂ ಹೆಚ್ಚಳವಾಗಲಿದೆ. ಆದ್ದರಿಂದ ಇನ್ನು ನಿತ್ಯ ಹೋಟೇಲುಗಳಲ್ಲಿ ಆಹಾರ, ಕಾಫಿ, ಪಾರ್ಟಿ ಮಾಡುವವರು ಜೇಬನ್ನು ಹಗುರ ಮಾಡಿಕೊಳ್ಳುವ ದಿನಗಳು ಬರಲಿವೆ.
Leave A Reply