ಒಂದೇ ವರ್ಷದಲ್ಲಿ ಟಿಕೆಟ್ ಇಲ್ಲದೇ ರೈಲು ಪ್ರಯಾಣ ಮಾಡಿದವರ ಸಂಖ್ಯೆ 2.16 ಕೋಟಿ!

ಭಾರತೀಯ ರೈಲ್ವೆ ದೇಶದ ನರನಾಡಿಯಂತೆ ಕೆಲಸ ಮಾಡುತ್ತದೆ ಎಂದರೆ ತಪ್ಪಿಲ್ಲ. ಇಷ್ಟು ದೊಡ್ಡ ದೇಶದಲ್ಲಿ ಮೂಲೆ ಮೂಲೆಗಳ ತನಕ ಹರಡಿರುವ ರೈಲ್ವೆ ಟ್ರಾಕುಗಳ ಮೇಲೆ ನಿತ್ಯ ಲಕ್ಷಾಂತರ ರೈಲು ಬೋಗಿಗಳು ಸಂಚರಿಸುತ್ತವೆ. ಕೋಟ್ಯಾಂತರ ಜನ ತಮ್ಮ ನಿಗದಿತ ಸ್ಥಳವನ್ನು ಕ್ರಮಿಸಿ ತಮ್ಮ ಉದ್ಯೋಗ, ವ್ಯವಹಾರಗಳನ್ನು, ಪ್ರವಾಸವನ್ನು ಸಂಪೂರ್ಣಗೊಳಿಸಿರುತ್ತಾರೆ. ಇದರಿಂದ ರೈಲ್ವೆ ಇಲಾಖೆಗೂ ಕೋಟ್ಯಾಂತರ ರೂಪಾಯಿ ಲಾಭ ಆಗಿರುತ್ತದೆ. ಆದರೆ ಪ್ರಯಾಣಿಸುವ ಪ್ರತಿಯೊಬ್ಬರು ಟಿಕೆಟ್ ತೆಗೆದುಕೊಂಡಿರುತ್ತಾರಾ? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
2023 – 24 ನೇ ಇಸವಿಯಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದವರ ಸಂಖ್ಯೆಯೇ 2.16 ಕೋಟಿ. ಇನ್ನು ಸಿಕ್ಕಿ ಬೀಳದವರು ಅದೆಷ್ಟು ಜನರಿದ್ದಾರೆ ಎನ್ನುವುದು ಬೇರೆ ಮಾತು. ಸಿಕ್ಕಿ ಬಿದ್ದವರೇ ಈ ಪರಿ ಇರುವುದು ನೋಡಿ ಖಂಡಿತ ಆಶ್ಚರ್ಯವಾಗುತ್ತದೆ. ಇನ್ನು ಇವರಿಂದ ಸಂಗ್ರಹಿಸಲಾಗಿರುವ ಮೊತ್ತ 562.40 ಕೋಟಿ ರೂಪಾಯಿಗಳು.
ಈ ವಿಚಾರವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲಿಖಿತರೂಪದಲ್ಲಿ ಉತ್ತರಿಸಿದ್ದಾರೆ. ಕಳೆದ ವರ್ಷ ಎಷ್ಟು ನಾಗರಿಕರು ಟಿಕೆಟ್ ರಹಿತರಾಗಿ ಪ್ರಯಾಣಿಸುವಾಗ ಸಿಕ್ಕಿ ಬಿದ್ದಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ. ಟಿಕೆಟ್ ರಹಿತರಿಂದ ಸಂಗ್ರಹಿಸಲಾದ ಈ 562.40 ಕೋಟಿ ರೂಪಾಯಿಯಲ್ಲಿ ಟಿಕೆಟ್ ಬಾಬ್ತು ಸೇರದೇ ಕೇವಲ ಹೆಚ್ಚುವರಿ ಆಗಿ ಸಂಗ್ರಹಿಸಲಾದ ಮೊತ್ತವೇ ಇಷ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನು ಟಿಕೆಟ್ ಚೆಕಿಂಗ್ ವಿಶೇಷ ಅಭಿಯಾನವನ್ನು ವಲಯ ರೈಲ್ವೆ ವಿಭಾಗಗಳಲ್ಲಿ ಆರಂಭಿಸಲು ಸಚಿವರು ನಿರ್ಧರಿಸಿದ್ದು, ಅದಕ್ಕಾಗಿ ರೈಲ್ವೆ ಇಲಾಖೆ ರೂಪುರೇಶೆ ಸಿದ್ಧಪಡಿಸುತ್ತಿದೆ. ಇನ್ನು ಉಳಿದ ದಿನಗಳಲ್ಲಿ ಟಿಕೆಟ್ ಚೆಕಿಂಗ್ ಕಾರ್ಯಗಳು ನಿತ್ಯ ನಡೆಯುತ್ತಿದ್ದು, ಆಗಾಗ ವಿಶೇಷ ಅಭಿಯಾನವನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
Leave A Reply