ಇನ್ನು ಹೋಟೇಲ್ ಬಿಲ್ ಗಳಲ್ಲಿ ಸೇವಾ ಶುಲ್ಕ ಹಾಕಿದರೆ ಕೊಡಲೇಬೇಕಾಗಿಲ್ಲ!

ನೀವು ಹೋಟೇಲುಗಳಲ್ಲಿ ತಿಂಡಿ, ತಿನಿಸು, ಊಟ ಸವಿದ ನಂತರ ಬಿಲ್ ಬಂದಾಗ ಅದರಲ್ಲಿ ಸರ್ವಿಸ್ ಚಾರ್ಜ್ ಎಂದು ಪ್ರತ್ಯೇಕ ಇಂತಿಷ್ಟು ಹಣ ಹಾಕಿರುತ್ತಾರೆ. ನೀವು ಅಲ್ಲಿ ಅದು ಯಾಕೆ ಎಂದು ಕೇಳಲು ಹೋಗುವುದಿಲ್ಲ. ಒಂದು ವೇಳೆ ಕೇಳಿದರೂ ಅದು ಬಡಿಸುವವರಿಗೆ ಕೊಡುವ ಹಣ ಎಂದು ಹೋಟೇಲಿನವರು ಉತ್ತರಿಸಿಯಾರು. ಆದರೆ ಹೀಗೆ ಗ್ರಾಹಕರಿಂದ ಹಣವನ್ನು ವಸೂಲಿ ಮಾಡುವುದು ಕಾನೂನು ಬಾಹಿರ ಎನ್ನುವುದನ್ನು ದೆಹಲಿ ಹೈಕೋರ್ಟ್ ತೀರ್ಪು ನೀಡಿ ಆದೇಶಿಸಿದೆ.
ಇದು ಒಂದು ರೀತಿಯಲ್ಲಿ ಗ್ರಾಹಕರಿಗೆ ಸಂದ ಜಯ. ಹೋಟೇಲುಗಳು ಮತ್ತು ರೆಸ್ಟೋರೆಂಟ್ ಗಳು ಬಿಲ್ ಗಳ ಮೇಲೆ ಕಡ್ಡಾಯವಾಗಿ ಸೇವಾ ತೆರಿಗೆಯನ್ನು ವಿಧಿಸುವುದನ್ನು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ನಿರ್ಭಂದಿಸಿದೆ. ಇದನ್ನು ವಿರೋಧಿಸಿ ಕೆಲವು ಹೋಟೇಲುಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದವು. ಆದರೆ ಈ ಬಗ್ಗೆ ಸ್ಪಷ್ಟಪಡಿಸಿದ ನ್ಯಾಯಾಲಯ ಹೋಟೇಲುಗಳು ಹೀಗೆ ಗ್ರಾಹಕರಿಂದ ವಸೂಲಿ ಮಾಡುವ ಹಣವನ್ನು ಬಡಿಸುವವರಿಗೆ ನೀಡುತ್ತದೆ ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ. ಇದು ಗ್ರಾಹಕರಿಂದ ವಸೂಲಿ ಮಾಡುವ ಬಲವಂತದ ಕ್ರಮ. ಇದು ಗ್ರಾಹಕರ ದಾರಿ ತಪ್ಪಿಸುವ, ಮೋಸದ ಹಾಗೂ ಅನ್ಯಾಯಯುತ ವ್ಯಾಪಾರ ಪದ್ಥತಿ ಎಂದು ಹೇಳಿದ್ದು ಮಾತ್ರವಲ್ಲದೇ ಸಿಸಿಪಿಎ ನಿರ್ಧಾರ ಪ್ರಶ್ನಿಸಿದ್ದ ಇಬ್ಬರು ಅರ್ಜಿದಾರರಿಗೆ ತಲಾ 1 ಲಕ್ಷ ರೂ ದಂಡ ವಿಧಿಸಿದೆ.
ಹೋಟೇಲುಗಳು ಊಟ, ತಿಂಡಿಯನ್ನು ಲಾಭ ಇಟ್ಟುಕೊಂಡೇ ಮಾರಾಟ ಮಾಡುತ್ತವೆ. ಅದರಲ್ಲಿಯೇ ಅವು ನೌಕರರ ವೇತನದ ಖರ್ಚನ್ನು ಕೂಡ ಸೇರಿಸಿರುತ್ತವೆ. ಅಷ್ಟಿದ್ದರೂ ಸೇವಾ ಶುಲ್ಕವನ್ನು ಇದರೊಂದಿಗೆ ಪ್ರತ್ಯೇಕವಾಗಿ ಸೇರಿಸಿ ಬಿಲ್ ನೀಡುತ್ತವೆ. ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಸೆಕ್ಷನ್ 2 (47) ರ ಪ್ರಕಾರ ಇದು ಅನ್ಯಾಯದ ವ್ಯಾಪಾರ ಕ್ರಮವಾಗಿದೆ. ಇದನ್ನು ಅನುಸರಿಸಿ 2022 ರಲ್ಲಿಯೇ ಸಿಸಿಪಿಎ ಸೇವಾ ಶುಲ್ಕ ಐಚ್ಚಿಕ ಎಂದು ಹೇಳಿದೆ. ಇನ್ನು ಈ ಸಂಸ್ಥೆಗೆ ಆದೇಶ ಹೊರಡಿಸುವ ಅಧಿಕಾರ ಇದೆ ಎಂದು ಕೋರ್ಟ್ ಹೇಳಿದೆ.
Leave A Reply