ಯತ್ನಾಳರನ್ನು ಕಾಂಗ್ರೆಸ್ಸಿಗೆ ಕರೆತರಲು ಸಿದ್ಧ – ಕಾಂಗ್ರೆಸ್ ಶಾಸಕ!

ಭಾರತೀಯ ಜನತಾ ಪಾರ್ಟಿಯಿಂದ ಉಚ್ಚಾಟಿತಗೊಂಡಿರುವ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಸಮ್ಮಿತಿಸಿದರೆ ಕರೆದುಕೊಂಡು ಬರಲು ಸಿದ್ಧ ಎಂದು ಉತ್ತರ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕರೂ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ, ಶಾಸಕರೂ ಆಗಿರುವ ರಾಜು ಕಾಗೆ ಹೇಳಿದ್ದಾರೆ. ಒಂದು ವೇಳೆ ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಜೊತೆ ಚರ್ಚೆ ಮಾಡಿ ಯತ್ನಾಳ್ ಅವರನ್ನು ಪಕ್ಷಕ್ಕೆ ಕರೆದುಕೊಂಡು ಬರೋಣ ಎಂದು ನಿರ್ಧರಿಸಿ ಆ ಹೊಣೆಯನ್ನು ನನಗೆ ನೀಡಿದರೆ ಖುಷಿಯಿಂದ ಆ ಜವಾಬ್ದಾರಿ ನಿರ್ವಹಿಸುವೆ ಎಂದು ರಾಜು ಕಾಗೆ ಹೇಳಿಕೊಂಡಿದ್ದಾರೆ.
ಈ ಮೂಲಕ ಯತ್ನಾಳ್ ಅವರಿಗೆ ಕಾಂಗ್ರೆಸ್ ಬಾಗಿಲು ಸಂಪೂರ್ಣವಾಗಿ ಮುಚ್ಚಿಲ್ಲ ಎನ್ನುವುದು ಸಾಬೀತಾಗಿದೆ. ಆದರೆ ಅವರು ಕಾಂಗ್ರೆಸ್ಸಿಗೆ ಹೋಗಲು ಅವರ ಮನಸ್ಸು, ಆತ್ಮಸಾಕ್ಷಿ, ಹಿಂದೂ ಹುಲಿ ಎನ್ನುವ ಪಟ್ಟ ಒಪ್ಪುತ್ತಾ ಎನ್ನುವುದು ಈಗಿನ ಪ್ರಶ್ನೆ. ಇನ್ನು ಅವರು ಕಾಂಗ್ರೆಸ್ಸಿಗೆ ಹೋದರೆ ಅವರೊಂದಿಗಿರುವ ಭಿನ್ನರ ಕಥೆ ಏನು? ಮೊದಲನೇಯದಾಗಿ ರಮೇಶ್ ಜಾರಕಿಹೊಳಿ. ಅವರಿಗೂ ಡಿಕೆಶಿಗೂ ಒಂದಾಗುವ ವಿಷಯ ಸಾಧ್ಯವೇ ಇಲ್ಲ. ಆದ್ದರಿಂದ ಅಲ್ಲಿ ಭಿನ್ನರ ಇನ್ನೊಬ್ಬ ಪ್ರಮುಖ ನಾಯಕನಿಗೆ ಕಾಂಗ್ರೆಸ್ಸಿನ ಬಾಗಿಲು ಮುಚ್ಚಿದಂತೆ.
ಇನ್ನು ಎರಡನೇ ನಾಯಕ ಮಾಜಿ ಸಚಿವ ಕುಮಾರ ಬಂಗಾರಪ್ಪ. ಅವರ ಸಹೋದರ ಮಧು ಬಂಗಾರಪ್ಪ ರಾಜ್ಯದ ಸಚಿವ. ಅವರಿಗೂ ಸಹೋದರನಿಗೂ ಒಂದಾಗುವುದು ಅಸಾಧ್ಯ. ಹಾಗಿರುವಾಗ ಮತ್ತೊಬ್ಬ ನಾಯಕನಿಗೂ ಬಾಗಿಲು ಮುಚ್ಚಿದಂತೆ. ಸಿದ್ದೇಶ್ವರ್ ತಮ್ಮದೇ ಜಿಲ್ಲೆಯಲ್ಲಿ ಕಾಂಗ್ರೆಸ್ ವಿರೋಧ ಕಟ್ಟಿಕೊಂಡು ಏಣಗುತ್ತಿರುವಾಗ ಅವರು ಕಾಂಗ್ರೆಸ್ಸಿಗೆ ಹೋಗುವುದು ಕಷ್ಟದ ಮಾತು. ಹೀಗೆ ಒಬ್ಬೊಬ್ಬರು ಭಿನ್ನರು ಕಾಂಗ್ರೆಸ್ಸಿನೊಳಗೆ ಹೋಗಲು ಒಂದೊಂದು ಸಮಸ್ಯೆ ಎದುರಿಸುವಾಗ ಅಲ್ಲಿ ಯತ್ನಾಳ್ ಹೇಗೆ ತಾನೆ ಕಾಲಿಡಲು ಸಾಧ್ಯ ಎನ್ನುವ ಪರಿಸ್ಥಿತಿ ಇದೆ.
ಆದ್ದರಿಂದ ಯತ್ನಾಳ್ ಒಬ್ಬರೇ ಆಗಿ ಯೋಚಿಸುವ ಸ್ಥಿತಿಯಲ್ಲಿ ಇಲ್ಲ. ಸದ್ಯಕ್ಕೆ ಅವರ ಎದುರಿಗಿರುವ ಒಂದೇ ದಾರಿ ಎಂದರೆ ಹೈಕಮಾಂಡ್ ಎದುರು ವಿನಂತಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವಂತೆ ಮಾಡುವುದು. ಅಲ್ಲಿಯ ತನಕ ಯಾವ ಬಣವೂ ಬೇಡಾ ಎಂದು ಮೌನವಾಗಿರುವುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
Leave A Reply