ಮೊನಾಲೀಸಾಳನ್ನು ಹಿರೋಯಿನ್ ಮಾಡುತ್ತೇನೆಂದಿದ್ದ ನಿರ್ದೇಶಕ ರೇಪ್ ಕೇಸ್ ನಲ್ಲಿ ಅರೆಸ್ಟ್!

ಮಹಾಕುಂಭ ಮೇಳದಲ್ಲಿ ತನ್ನ ಕಣ್ಣುಗಳಿಂದ ಯುವಕರ ಹೃದಯಗಳನ್ನು ಕದ್ದಿದ್ದ ಮೊನಾಲೀಸಾ ಎನ್ನುವ ಚೆಲುವೆಯನ್ನು ಹಿರೋಯಿನ್ ಮಾಡುತ್ತೇನೆಂದು ಪ್ರಚಾರ ಮಾಡಿದ್ದ ನಿರ್ದೇಶಕನೊಬ್ಬ ಈಗ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾನೆ. ದೆಹಲಿ ಹೈಕೋರ್ಟ್ ಈತನ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ನಂತರ ಈತನ ಬಂಧನವಾಯಿತು. ಆತನ ಮೇಲಿನ ಆರೋಪ ಏನೆಂದರೆ ಹಳ್ಳಿಯೊಂದರ ಹೆಣ್ಣುಮಗಳನ್ನು ಹಿರೋಯಿನ್ ಮಾಡುತ್ತೇನೆಂದು ಭರವಸೆ ನೀಡಿ ಹಲವು ಬಾರಿ ದೈಹಿಕವಾಗಿ ಶೋಷಣೆ ಮಾಡಿದ್ದಾನೆ. ಈತನನ್ನು ನಬಿ ಕರೀಂ ನಗರ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆಯ ಹೇಳಿಕೆ ಪ್ರಕಾರ, ಆಕೆ ಸನೋಜ್ ಮಿಶ್ರಾ ಎನ್ನುವ ನಿರ್ದೇಶಕನನ್ನು 2020 ರಲ್ಲಿ ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಂ ಮೀಡಿಯಾ ಮೂಲಕ ಭೇಟಿಯಾಗಿದ್ದಳು. ಆ ಸಮಯದಲ್ಲಿ ಆಕೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವಾಸವಾಗಿದ್ದಳು. ಅದರ ನಂತರ ಅವರಿಬ್ಬರು ಫೋನ್ ಮೂಲಕ ಸಂಪರ್ಕದಲ್ಲಿದ್ದರು. 2021, ಜೂನ್ 17 ರಂದು ಆಕೆಯನ್ನು ನಿರ್ದೇಶಕ ಮಿಶ್ರಾ ಭೇಟಿಯಾಗೋಣ, ತನ್ನ ಬಳಿ ಬಾ ಎಂದು ಕರೆಸಿದ್ದ. ಅದರಂತೆ ಆತ ಆಕೆಯ ಊರು ಝಾನ್ಸಿ ರೈಲ್ವೆ ನಿಲ್ದಾಣಕ್ಕೆ ಬಂದು ಆಕೆಗೆ ಕರೆ ಮಾಡಿದ್ದನು. ಆದರೆ ಆ ಯುವತಿ ಭೇಟಿಯಾಗಲು ನಿರಾಕರಿಸಿದ್ದಳು. ಅಲ್ಲಿ ಭೇಟಿಯಾದರೆ ಊರಿನಲ್ಲಿ ತೊಂದರೆಯಾಗುತ್ತದೆ ಎಂದು ಹೇಳಿದ್ದಳು. ಆದರೆ ತನ್ನನ್ನು ಭೇಟಿಯಾಗದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಿಶ್ರಾ ಬ್ಲ್ಯಾಕ್ ಮೇಲ್ ಮಾಡಿದ್ದ. ಇದರಿಂದ ಹೆದರಿದ ಆ ಸಂತ್ರಸ್ತೆ ಅದೇ ಭಯದಿಂದ ಆತನನ್ನು ಭೇಟಿಯಾಗಿದ್ದಳು. ಅದರ ಮರುದಿನವೂ ಅದೇ ರೀತಿಯಲ್ಲಿ ಆರೋಪಿ ಮಿಶ್ರಾ ಅವಳನ್ನು ರೈಲ್ವೆ ನಿಲ್ದಾಣಕ್ಕೆ ಕರೆಸಿ ಭೇಟಿಯಾಗಲು ಅದೇ ಹಿಂದಿನ ಆತ್ಮಹತ್ಯೆ ಬ್ಲ್ಯಾಕ್ ಮೇಲ್ ತಂತ್ರ ಹೂಡಿದ್ದ.
ಇವಳು ಭೇಟಿಯಾದಾಗೆಲ್ಲ ಆರೋಪಿ ಆಕೆಯನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಅಲ್ಲಿ ನಶೆ ಬರುವ ಪಾನೀಯ ನೀಡಿ ಆಕೆಯನ್ನು ಅತ್ಯಾಚಾರ ಮಾಡಿದ್ದ ಎಂದು ಸಂತ್ರಸ್ತೆ ಹೇಳಿದ್ದಾಳೆ. ಇನ್ನು ಆರೋಪಿ ಆಕೆ ಕೋಣೆಯಲ್ಲಿದ್ದಾಗ ಆಕೆಯ ಅಶ್ಲೀಲ ಫೋಟೋ, ವಿಡಿಯೋ ಮಾಡಿ ಈ ವಿಷಯವನ್ನು ಬಹಿರಂಗಪಡಿಸಿದರೆ ಆ ಫೋಟೋಗಳನ್ನು, ವಿಡಿಯೋಗಳನ್ನು ಬಹಿರಂಗಪಡಿಸುವ ಬೆದರಿಕೆ ಹಾಕಿದ್ದಾನೆ ಎಂದು ಆಕೆ ಎಫ್ ಐಆರ್ ನಲ್ಲಿ ತಿಳಿಸಿದ್ದಾಳೆ. ಅದರ ನಂತರ ಹಲವು ಬಾರಿ ಅವಳನ್ನು ಕರೆಸಿ ಈ ಕೃತ್ಯಗಳನ್ನು ಪುನರಾವರ್ತನೆ ಮಾಡಿದ್ದ. ಮದುವೆಯಾಗುವ ಭರವಸೆ ನೀಡಿದ್ದು, ಸಿನೆಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷ ನೀಡಿದ್ದ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.
ಇನ್ನು ಎಲ್ಲರಿಗೂ ಜ್ಞಾಪಕ ಇರುವಂತೆ ಮಿಶ್ರಾ ಲೈಮ್ ಲೈಟಿಗೆ ಬಂದದ್ದೇ ಮೊನಾಲಿಸಾ ಎನ್ನುವ ಸೋಶಿಯಲ್ ಮೀಡಿಯಾ ಸ್ಟಾರ್ ಳನ್ನು ಕೇಂದ್ರಿಕರಿಸಿ ಸಿನೆಮಾ ಮಾಡುತ್ತೇನೆ ಎಂದು ಘೋಷಿಸಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ. ಅವಳಿಗೆ ನಟನೆಯ ತರಬೇತಿಯನ್ನು ಕೊಡುತ್ತಿದ್ದ ಮಿಶ್ರಾ ತಮ್ಮ ಮುಂದಿನ ಚಿತ್ರದ ನಾಯಕಿ ಮೊನಾಲಿಸಾ ಎಂದು ಘೋಷಿಸಿದ್ದ. ಅಂತಹ ವ್ಯಕ್ತಿ ಈಗ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾನೆ.
Leave A Reply