ಜೀವಭಯ.. ಪತ್ನಿಯನ್ನು ಪ್ರೇಮಿ ಜೊತೆ ಮದುವೆ ಮಾಡಿಸಿದ ಗಂಡ!

ಇತ್ತೀಚೆಗೆ ಪತ್ನಿಯರು ಪ್ರೇಮಿಗಳೊಂದಿಗೆ ಸೇರಿ ಗಂಡನನ್ನೇ ಮುಗಿಸುವುದು ಅಥವಾ ಗಂಡನನ್ನು ಕೊಲ್ಲಲು ಸ್ಕೆಚ್ ಹಾಕುವುದು ಅಲ್ಲಲ್ಲಿ ಸುದ್ದಿಯಾಗುತ್ತಿರುವ ವಿಷಯವನ್ನು ಓದುತ್ತಿದ್ದೇವೆ. ಇಂತಹ ವಿಷಯಗಳನ್ನು ಕೇಳುವಾಗ ಅಂತಹ ವಿಷಯ ಗೊತ್ತಾದರೆ ಗಂಡ ಆಕೆಯನ್ನು ಪ್ರೇಮಿಯೊಂದಿಗೆ ಕಳುಹಿಸಿಕೊಟ್ಟಲ್ಲಿ ಅವನ ಜೀವ ಉಳಿಯುತ್ತಿರಲಿಲ್ಲವಾ ಎಂದು ನಿಮಗೆ ಅನಿಸಬಹುದು. ಇಲ್ಲೊಬ್ಬ ಗಂಡ ಹಾಗೆ ಮಾಡಿದ್ದಾನೆ. ತನ್ನ ಜೀವವನ್ನು ಉಳಿಸಿಕೊಳ್ಳಲು ಪತ್ನಿಯನ್ನು ಪ್ರೇಮಿಯೊಂದಿಗೆ ಮದುವೆ ಮಾಡಿಸಿದ್ದಾನೆ.
ಇದು ನಡೆದದ್ದು ಉತ್ತರ ಪ್ರದೇಶದ ಕಟಾರ್ ಜೋತ್ ಎಂಬ ಪ್ರದೇಶದಲ್ಲಿ. ಗಂಡನ ಹೆಸರು ಬಬ್ಲು. ಇವನಿಗೆ 2017 ರಲ್ಲಿ ರಾಧಿಕಾ ಎನ್ನುವವಳ ಜೊತೆ ಮದುವೆಯಾಗಿತ್ತು. ಇಬ್ಬರು ಮಕ್ಕಳು ಕೂಡ ಇದ್ದಾರೆ. ಕೂಲಿ ಕಾರ್ಮಿಕನಾಗಿರುವುದರಿಂದ ಬಬ್ಲು ಕೆಲಸಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದ. ಅಲ್ಲಿ ಹಲವು ದಿನ ದುಡಿದು ಹೆಂಡತಿ, ಮಕ್ಕಳನ್ನು ಸಾಕುತ್ತಿದ್ದ. ಹೀಗಿರುವಾಗ ಒಂದು ಸಲ ಬಬ್ಲುವಿಗೆ ತನ್ನ ಪತ್ನಿ ವಿಕಾಸ್ ಎನ್ನುವವನ ಜೊತೆ ರಹಸ್ಯ ಸಂಬಂಧ ಇರಿಸಿಕೊಂಡಿರುವುದರ ಸುಳಿವು ಸಿಕ್ಕಿತ್ತು. ಅದನ್ನು ಪತ್ತೆ ಹಚ್ಚಲು ಒಮ್ಮೆ ಅಚಾನಕ್ ಆಗಿ ಆತ ಹೆಂಡತಿಗೆ ಹೇಳದೇ ಊರಿಗೆ ಬಂದಿದ್ದ. ಬಂದವನಿಗೆ ವಿಷಯ ಗ್ಯಾರಂಟಿಯಾಗಿತ್ತು.
ಆದರೆ ಬಬ್ಲು ಆಕೆಯ ಮೇಲಾಗಲಿ, ಆಕೆಯ ಪ್ರಿಯಕರನ ಮೇಲಾಗಲೀ ರೇಗಾಡಲಿಲ್ಲ. ನೇರವಾಗಿ ಊರಿನ ಪ್ರಮುಖರ ಬಳಿ ಹೋದ. ಇಲ್ಲಿ ಅವರಿಬ್ಬರನ್ನು ದೂರ ಮಾಡಿದರೆ ಇವತ್ತಲ್ಲ, ನಾಳೆ ತನಗೆ ರಿಸ್ಕ್. ಒಂದಲ್ಲ ಒಂದು ದಿನ ನನ್ನ ಗೋರಿ ತೋಡಿ ನನ್ನನ್ನು ಇಲ್ಲವಾಗಿಸಬಹುದು. ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಅದಕ್ಕಾಗಿ ಅವರಿಬ್ಬರಿಗೆ ತಾನು ಮದುವೆ ಮಾಡಿಸುತ್ತೇನೆ, ಸಹಕಾರ ನೀಡಬೇಕು ಎಂದು ಕೋರಿದ್ದಾನೆ. ಎಲ್ಲರನ್ನು ಒಪ್ಪಿಸಿ, ತನ್ನ ಹೆಂಡತಿಗೂ, ವಿಕಾಸನಿಗೂ ಮದುವೆ ಮಾಡಿ ಫೋಟೋ ತೆಗೆಸಿ, ಮಕ್ಕಳನ್ನು ತಾನೇ ಸಾಕುವ ನಿರ್ಧಾರ ಮಾಡಿ ಜೀವ ಉಳಿಸಿಕೊಂಡಿದ್ದಾನೆ.
ಹೀಗೆಕೆ ಮಾಡಿದೆ ಎಂದು ಜನರು ಕೇಳಿದಾಗ ” ತನ್ನ ಜೀವ ಉಳಿದರೆ ಸಾಕಿತ್ತು. ಅವರಿಬ್ಬರು ಒಟ್ಟಾಗಿ ನನ್ನ ತಲೆ ಒಡೆದು ಡ್ರಮಿನಲ್ಲಿ ತುಂಬಿಟ್ಟರೆ ಮಕ್ಕಳಿಗೆ ಯಾರು ಗತಿ” ಎಂದು ಹೇಳಿದ್ದಾನೆ.
ಇತ್ತೀಚೆಗೆ ಮೀರತ್ ನಲ್ಲಿ ಪತ್ನಿ ಮತ್ತು ಅವಳ ಪ್ರಿಯಕರ ಒಟ್ಟಿಗೆ ಸೇರಿ ಸರ್ ಪ್ರೈಸ್ ಕೊಡಲು ಪರ ಊರಿನಿಂದ ಬಂದಿದ್ದ ಗಂಡನನ್ನು ಮಗನ ಜನ್ಮದಿನದಂದೇ ಮುಗಿಸಿದ ಘಟನೆ ಎಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿರುವುದರಿಂದ ಈಗ ಹೆಂಡ್ತಿಯನ್ನು ಪ್ರಿಯಕರರೊಂದಿಗೆ ಮದುವೆ ಮಾಡಿಸುವುದೇ ಜೀವ ಉಳಿಯುವ ದಾರಿ ಎಂದು ನೊಂದ ಗಂಡಂದಿರು ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ.
Leave A Reply