ತಲೆ ಬೋಳಿಸಿ ಆಶಾ ಕಾರ್ಯಕರ್ತರ ಪ್ರತಿಭಟನೆ!

ಭಾರತದ ಆರೋಗ್ಯ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತರು ಪ್ರಬಲ ಸ್ತಂಭ ಎನ್ನುವುದಕ್ಕೆ ಯಾವುದೇ ಅನುಮಾನಗಳಿಲ್ಲ. ಅವರಿಗೆ ಸಿಗಬೇಕಾದ ವೇತನ ಏರಿಕೆ, ಭತ್ಯೆ ಸಹಿತ ವಿವಿಧ ಸೌಲಭ್ಯಗಳ ಈಡೇರಿಕೆಗೆ ವಿವಿಧ ರಾಜ್ಯಗಳಲ್ಲಿ ಕಾಲಕಾಲಕ್ಕೆ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಕೇರಳದಲ್ಲಿ ಕಳೆದ 50 ದಿನಗಳಿಂದ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ಕಡೆ ಕಳೆದ ವಾರದಿಂದ ಸೆಕ್ರೆಟರಿಯೇಟ್ ಕಚೇರಿಯ ಹೊರಗೆ ಉಪವಾಸ ಸತ್ಯಾಗ್ರಹದಲ್ಲಿ ಕೆಲವರು ನಿರತರಾಗಿದ್ದರೆ, ಇನ್ನು ಕೆಲವರು ತಲೆ ಬೋಳಿಸಿ ಹೋರಾಟಕ್ಕೆ ಇಳಿದಿದ್ದಾರೆ.
” ನಮ್ಮ ಜೀವನ ಅಧೋಗತಿಯತ್ತ ಸಾಗುತ್ತಿದೆ. ನಮ್ಮ ನಿರಂತರ ಹೋರಾಟ, ಪ್ರತಿಭಟನೆಗೂ ಸಚಿವರು ಕಣ್ಣು ಕಾಣದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ನಾವು ದಿನಕ್ಕೆ 232 ರೂಪಾಯಿ ವೇತನದಲ್ಲಿ ಜೀವನ ಸಾಗಿಸುವುದು ಹೇಗೆ?” ಎಂದು ತಲೆಕೂದಲು ಕತ್ತರಿಸುವ ಮುನ್ನ ಪ್ರತಿಭಟನಾಕಾರ್ತಿಯೊಬ್ಬರು ನೋವು ತೋಡಿಕೊಂಡರು.
ಇನ್ನೊಬ್ಬ ಹೋರಾಟಗಾರ್ತಿ ಮಿನಿ ಎಸ್ “ನಮ್ಮ ತಲೆಕೂದಲು ಕತ್ತರಿಸುವುದು ನಮ್ಮ ಅಸಹಾಯಕತೆಯನ್ನು ತೋರಿಸುತ್ತದೆ. ಇದು ಭಾವನಾತ್ಮಕ ಸಂಘರ್ಷ ಅಲ್ಲ. ನಮ್ಮ ದೃಢಚಿತ್ತದ ಹೋರಾಟ. ನಮಗೆ ನ್ಯಾಯ ಸಿಗುವ ತನಕ ನಮ್ಮ ಹೋರಾಟ ನಿಲ್ಲದು. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸುತ್ತೇವೆ” ಎಂದು ಹೇಳಿದರು.
ಮಹಿಳೆಯರು ಕೂದಲು ಕತ್ತರಿಸುವ ಪ್ರತಿಭಟನೆಯಿಂದ ಈ ಹೋರಾಟ ಇನ್ನಷ್ಟು ಬಿರುಸು ಪಡೆದುಕೊಂಡಿದ್ದು, ತಮ್ಮ ಕತ್ತರಿಸಿದ ತಲೆಕೂದಲನ್ನು ಕೈಯಲ್ಲಿ ಹಿಡಿದು ಆಶಾ ಕಾರ್ಯಕರ್ತೆಯರು ಪಾದಯಾತ್ರೆ ನಡೆಸಿದರು.
ನಿವೃತ್ತಿ ಸೌಲಭ್ಯ, ನಿವೃತ್ತಿ ಹೊತ್ತಿಗೆ 5 ಲಕ್ಷ ಹಣ, 16 ವರ್ಷ ಸೇವೆ ಸಲ್ಲಿಸಿದವರಿಗೆ ಆರೋಗ್ಯ ಇಲಾಖೆಯಲ್ಲಿ ಶಾಶ್ವತ ಉದ್ಯೋಗ ಸಹಿತ ಹತ್ತರಷ್ಟು ಬೇಡಿಕೆಗಳನ್ನು ಮುಂದಿಟ್ಟು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.
Leave A Reply