ಕಸವನ್ನು ನೀರಿಗೆ ಎಸೆದ ಪ್ರಖ್ಯಾತ ಗಾಯಕನಿಗೆ 250000 ದಂಡ!

ಕೇರಳದ ಪ್ರಖ್ಯಾತ ಹಿನ್ನಲೆ ಗಾಯಕರಾದ ಎಂ ಜಿ ಶ್ರೀಕುಮಾರ್ ಅವರು ಕೊಚ್ಚಿಯ ಬ್ಯಾಕ್ ವಾಟರ್ (ಹಿನ್ನೀರು) ಇಲ್ಲಿ ತ್ಯಾಜ್ಯವನ್ನು ಎಸೆದಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಮುಲಾವುಕಾಡ್ ಗ್ರಾಮ ಪಂಚಾಯತ್ 25000 ರೂ ದಂಡ ವಿಧಿಸಿದೆ. ಪಂಚಾಯತ್ ಕಡೆಯಿಂದ ಶ್ರೀಕುಮಾರ್ ಅವರಿಗೆ ನೋಟಿಸು ಜಾರಿ ಮಾಡಲಾಗಿದ್ದು, ಹದಿನೈದು ದಿನಗಳ ಒಳಗೆ ದಂಡದ ಮೊತ್ತವನ್ನು ಕಟ್ಟುವಂತೆ ಆದೇಶಿಸಲಾಗಿದೆ.
ಅಷ್ಟಕ್ಕೂ ನಡೆದದ್ದೇನು?
ಕೊಚ್ಚಿ ಹಿನ್ನೀರು ಪ್ರದೇಶ ಪ್ರವಾಸಿಗರಿಗೆ ತುಂಬಾ ನೆಚ್ಚಿನ ತಾಣ. ಅಲ್ಲಿ ಆಗಮಿಸಿದ್ದ ಪ್ರವಾಸಿಯೊಬ್ಬ ವಿಡಿಯೋ ಮಾಡುವಾಗ ಅಲ್ಲಿಯೇ ಇರುವ ಶ್ರೀಕುಮಾರ್ ಅವರ ಮನೆಯಿಂದ ತ್ಯಾಜ್ಯದ ಚೀಲವನ್ನು ಯಾರೋ ಕೊಚ್ಚಿ ಹಿನ್ನೀರಿಗೆ ಎಸೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆ ಸ್ಥಳ ಮುಲ್ಲ್ವುಕಾಡು ಪಂಚಾಯತ್ ಏರಿಯಾಗೆ ಬರುತ್ತದೆ. ಆ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ ಪ್ರವಾಸಿಗ ಅದನ್ನು ಸ್ಥಳಿಯಾಡಳಿತ ಸಚಿವ ಎಂ ಬಿ ರಾಜೇಶ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಆ ಪೋಸ್ಟಿಗೆ ಪ್ರತಿಕ್ರಿಯಿಸಿದ ಸಚಿವರು ಇಂತಹ ದೂರುಗಳಿದ್ದಲ್ಲಿ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸರಕಾರದ ವಾಟ್ಸಾಪ್ ನಂಬ್ರ (9446700800) ಇದಕ್ಕೆ ಕಳುಹಿಸಿಕೊಡಲು ಸೂಚಿಸಿದ್ದಾರೆ.
ಅದರಂತೆ ದೂರು ಸ್ವೀಕಾರ ಮಾಡಿದ ಸ್ಥಳೀಯಾಡಳಿತದ ಕಂಟ್ರೋಲ್ ರೂಂ ತಕ್ಷಣ ಅಲ್ಲಿನ ಸ್ಥಳೀಯ ಪಂಚಾಯತ್ ಗೆ ಈ ದೂರನ್ನು ಪರಿಶೀಲಿಸಲು ಸೂಚನೆ ನೀಡಿದೆ. ಅದರಂತೆ ಪರಿಶೀಲನೆ ನಡೆಸಿದ ಪಂಚಾಯತ್ ದೂರಿನಲ್ಲಿ ಸತ್ಯಾಂಶ ಇರುವುದನ್ನು ಖಾತ್ರಿಪಡಿಸಿದೆ. ಅದರಂತೆ ತಪ್ಪಿತಸ್ಥರಿಗೆ ಪಂಚಾಯತ್ ರಾಜ್ ಕಾಯಿದೆಯ ಪ್ರಕಾರ ದಂಡವನ್ನು ವಿಧಿಸಲಾಗಿದೆ.
ಇನ್ನು ಈ ಸಂಬಂಧ ಗಾಯಕರಿಂದ ಸೂಕ್ತ ಸ್ಪಂದನೆ ದೊರಕಿದ್ದಲ್ಲಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಪಂಚಾಯತ್ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಇಲ್ಲಿ ಸಾಮಾಜಿಕ ಜಾಲತಾಣಗಳನ್ನು ಎಷ್ಟು ಸಮರ್ಪಕವಾಗಿ ಬಳಸಬಹುದು ಮತ್ತು ಅದರಿಂದ ಸಮಾಜಕ್ಕೆ ಯಾವ ಸಂದೇಶ ಕೊಡಬಹುದು ಎನ್ನುವ ಜೊತೆಗೆ ನಮ್ಮನ್ನು ಆಳುವವರು ಇಂತಹ ಘಟನೆಗಳಾದಾಗ ತಕ್ಷಣ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಕೂಡ ಗೊತ್ತಾಗುತ್ತದೆ.
ಇಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿ ವಿಡಿಯೋ ಮಾಡಿ ಅದನ್ನು ಸಂಬಂಧಪಟ್ಟ ಜನಪ್ರತಿನಿಧಿಗೆ ಕಳುಹಿಸಿ ಅವರು ಅದಕ್ಕೆ ದಾರಿಯ ಮಾಹಿತಿ ನೀಡಿ ಅಲ್ಲಿ ಸರಕಾರದ ಕಂಟ್ರೋಲ್ ರೂಂನವರು ತಕ್ಷಣ ಎಚ್ಚೆತ್ತು, ಪಂಚಾಯತ್ ನವರಿಗೆ ತಿಳಿಸಿದ ಪರಿಣಾಮ ಇದೆಲ್ಲವೂ ಉತ್ತಮ ರೀತಿಯಲ್ಲಿ ಬೇರೆಯವರಿಗೆ ಎಚ್ಚರಿಕೆಯ ಗಂಟೆಯಾಗಿದೆ.
Leave A Reply